ಕಾಂಗ್ರೆಸ್ 619, ಬಿಜೆಪಿ 548, ಬಿಎಸ್ಪಿ 07, ಎಡಪಕ್ಷಗಳು 04, ಇತರರು 596 ವಾರ್ಡ್ ಗಳಲ್ಲಿ ಗೆಲುವು
ಜೈಪುರ : ರಾಜಸ್ಥಾನದಲ್ಲಿ ನಡೆದ ಸ್ಥಳೀಯ ನಗರ ಸಂಸ್ಥೆ (ಯುಎಲ್ ಬಿ) ಚುನಾವಣೆಯ ಫಲಿತಾಂಶ ಹೊರಬಿದ್ದದ್ದು ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 619 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಇದರೊಂದಿಗೆ ಬಿಜೆಪಿಯನ್ನು ಸೋಲಿಸಿದೆ ಎಂದು ರಾಜಸ್ಥಾನ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ನಡೆದ ರಾಜಸ್ಥಾನದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿತ್ತು. ನಗರ ಸಂಸ್ಥೆಯ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಗೆ ತುಸ ನೆಮ್ಮದಿಯನ್ನು ನೀಡಿದೆ.
ಭಾನುವಾರ ಘೋಷಣೆಯಾದ ಫಲಿತಾಂಶದ ಪ್ರಕಾರ 12 ಜಿಲ್ಲೆಗಳ 50 ಸ್ಥಳೀಯ ನಗರ ಸಂಸ್ಥೆಯ 1,775 ವಾರ್ಡ್ಸ್ ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 619 ವಾರ್ಡ್ ಗಳಲ್ಲಿ ಮತ್ತು ಬಿಜೆಪಿ 548 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. 596 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಹುಜನ್ ಸಮಾಜ ಪಕ್ಷದ ಸದಸ್ಯರು 7 ವಾರ್ಡ್ ಗಳಲ್ಲಿ, ಸಿಪಿಐಎಂ, ಮತ್ತು ಸಿಪಿಐ ಎರಡು ವಾರ್ಡ್ ಗಳಲ್ಲಿ ಗೆಲುವು ತಿಳಿದು ಬಂದಿದೆ.
ಇತ್ತೀಚೆಗೆ ನಡೆದ ಪಂಚಾಯತ್ ರಾಜ್ ಚುನಾವಣೆಯಲ್ಲಿ ಬಿಜೆಪಿ 12 ಜಿಲ್ಲಾ ಪರಿಷತ್ ನಲ್ಲಿ ಗೆದ್ದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೇವಲ ಐದು ಜಿಲ್ಲಾ ಪರಿಷತ್ ನಲ್ಲಿ ಜಯಗಳಿಸುವ ಮೂಲಕ ಮುಖಭಂಗ ಅನುಭವಿಸಿತ್ತು. ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಪ್ರದರ್ಶನ ತೋರಿದ್ದು, ಹೆಚ್ಚು ಸ್ಥಾನ ಗಳಿಸಿರುವುದು ಸಂತೋಷ ತಂದಿದೆ ಎಂದು ರಾಜಸ್ಥಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ತಿಳಿಸಿದ್ದಾರೆ.