ಬೆಂಗಳೂರು : ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕರ್ನಾಟಕ ಸರಕಾರದ ಪ್ರಸ್ತಾವಿತ ಯೋಜನೆಗೆ ವಿಶ್ವಬ್ಯಾಂಕ್ 363 ಮಿಲಿಯನ್ ಡಾಲರ್ (ಸುಮಾರು 3,000 ಕೋಟಿ ರೂ.) ಸಾಲ ನೀಡಲು ಸಮ್ಮತಿಸಿದೆ.
ರಾಜ್ಯದ 31 ಜಿಲ್ಲೆಗಳ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಮೂಲಕ ಒಂದು ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ನೀರಿನ ಸಂಪರ್ಕ ಜಾಲ ವಿಸ್ತರಿಸಿ ಸಮರ್ಪಕವಾಗಿ ನೀರು ಹಂಚಿಕೆ ಮಾಡಲು ವಿಶ್ವ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಿದೆ.
ವಿಶ್ವ ಬ್ಯಾಂಕ್ ನಿರ್ದೇಶಕರ ಕಾರ್ಯಕಾರಿ ಮಂಡಳಿ 363 ದಶಲಕ್ಷ ಡಾಲರ್ ಮೊತ್ತದ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಕರ್ನಾಟಕದ ಶೇ. 77ರಷ್ಟು ಭಾಗ ಒಣ ಭೂಮಿಯಿಂದ ಕೂಡಿದೆ. ಹವಾಮಾನ ವೈಪರೀತ್ಯದಿಂದ ಕೆಲವು ಸಲ ಬರಗಾಲ, ಕೆಲವು ಬಾರಿ ಪ್ರವಾಹ, ಪ್ರಕೋಪಗಳಿಗೆ ತುತ್ತಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿಅಂತರ್ಜಲ ಮಟ್ಟ ತೀವ್ರ ಪ್ರಮಾಣದಲ್ಲಿ ಕುಸಿದು, ನೀರಿನ ಗುಣಮಟ್ಟವೂ ಕ್ಷಿಣಿಸಿದೆ. ಹೀಗಾಗಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕರ್ನಾಟಕದ ಪ್ರಸ್ತಾವಿತ ಯೋಜನೆಗೆ ಸಮ್ಮತಿ ನೀಡಲಾಗಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
“ಭಾರತದ ಗ್ರಾಮೀಣ ಭಾಗದ ಮನೆಗಳಿಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಅಗತ್ಯ ಆರ್ಥಿಕ ಸಹಕಾರ ನೀಡಲಾಗುವುದು,” ಎಂದು ವಿಶ್ವ ಬ್ಯಾಂಕ್‌ನಲ್ಲಿ ಭಾರತದ ನಿರ್ದೇಶಕರಾಗಿರುವ ಅಗಸ್ಟೆ ಟ್ಯಾನೊ ಕೌಮೆ ಹೇಳಿದ್ದಾರೆ.
ಇದನ್ನೂ ಓದಿ : ಕಲುಷಿತ ನೀರು ಕುಡಿದು ಜನ ಅಸ್ವಸ್ಥ – ಗ್ರಾಮೀಣಾಭಿವೃದ್ಧಿ ಇಲಾಖೆ ಬದುಕಿದೆಯೇ? ಕಾಂಗ್ರೆಸ್ ಸರಣಿ ಟ್ವೀಟ್
500 ಕಿರು ಜಲಾಶಯ : ಕಳೆದೊಂದು ದಶಕದಿಂದ ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಯೋಜನೆ ಕಾರ್ಯಾಚರಣೆಯಲ್ಲಿದೆ. ಆದರೆ ಸೂಕ್ತ ಸೌಲಭ್ಯಗಳಿಲ್ಲದೇ ಉದ್ದೇಶಿತ ಯೋಜನೆಗೆ ಹಿನ್ನಡೆಯಾಗಿದೆ. ಸಣ್ಣ ಪುಟ್ಟ ಲೋಪದೋಷ ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಯೋಜನೆ ಕಾರ್ಯಗತಗೊಳಿಸುವಂತೆ ರಾಜ್ಯ ಸರಕಾರಕ್ಕೆ ವಿಶ್ವ ಬ್ಯಾಂಕ್ ಸೂಚಿಸಿದೆ.
ಯೋಜನೆಯಡಿ ನೀರಿನ ಅಭಾವ ಎದುರಿಸುತ್ತಿರುವ ಏಳು ಜಿಲ್ಲೆಗಳಲ್ಲಿ 500 ಕಿರು ಜಲಾಶಯಗಳ ನಿರ್ಮಾಣ, ಪುನರುಜ್ಜೀವನಗೊಳಿಸಿ ಅಂತರ್ಜಲ ವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ವಿಶ್ವ ಬ್ಯಾಂಕ್ ನಿರ್ದೇಶನ ನೀಡಿದೆ. 500 ಗ್ರಾಮ ಪಂಚಾಯಿತಿಗಳಲ್ಲಿ ದಿನದ 24 ಗಂಟೆಯೂ ಮನೆಗಳಿಗೆ ನೀರು ಪೂರೈಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.