3 ತಿಂಗಳಲ್ಲಿ ಜಿ.ಪಂ-ತಾ.ಪಂ ಪುನರ್‌ವಿಂಗಡಣೆ, ಮೀಸಲಾತಿ ನಿರ್ಧರಿಸಿ: ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಚುನಾವಣೆ ನಡೆಯದೆ ಬಾಕಿ ಉಳಿದಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕಾಲ ಕೂಡಿಬಂದಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಹಿಂದುಳಿದವರೂ ಸೇರಿದಂತೆ ಎಲ್ಲಾ ವರ್ಗಗಳಿಗೂ ತ್ರಿವಳಿ ಪರೀಕ್ಷೆಯ ಅನ್ವಯ ಮೂರು ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗಡುವು ನೀಡಿದೆ.

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ. ಮೀಸಲಾತಿ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತಹ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದುಕೊಂಡ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಗೆ ತಿದ್ದುಪಡಿ ತಂದಿರುವುದಕ್ಕೆ ತಡೆ ನೀಡುವ ಕೋರಿ ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಕ್ಷೇತ್ರ ಪುನರ್‌ ವಿಂಗಡಣೆ, ಮೀಸಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಒಂದು ವಾರದೊಳಗಾಗಿ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ಯಾವುದೇ ಕಾರಣಕ್ಕೂ ಸಮಯವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಜನರಲ್‌ ಪ್ರಭುಲಿಂಗ ನಾವದಗಿ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಎಲ್ಲ ವರ್ಗಗಳನ್ನು ಒಳಗೊಂಡ ಮೀಸಲಾತಿ ನಿರ್ಧರಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಚುನಾವಣಾ ಆಯೋಗದ ನಿವೃತ್ತ ಆಯುಕ್ತರನ್ನು ಒಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿದೆ. ಹೀಗಾಗಿ, ಮೂರು ತಿಂಗಳು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

“ರಾಜಕೀಯವಾಗಿ ಹಿಂದುಳಿದ ಸಮುದಾಯಗಳನ್ನು ಗುರುತಿಸಬೇಕಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯನ್ನು ಪ್ರತಿಷ್ಠಾಪಿಸಬೇಕಿದೆ. ಚುನಾವಣೆ ನಡೆಸುವುದು ಆಯೋಗದ ಕೆಲಸ. ಅದು ಸರ್ಕಾರಕ್ಕೆ ಎದುರಾಳಿಯ ರೀತಿ ಕೆಲಸ ಮಾಡಲಾಗದು” ಎಂದು ಇದೇ ವೇಳೆ ಅವರು ಆಯೋಗದ ವಾದಕ್ಕೆ ಮೌಖಿಕವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಆಗ ನ್ಯಾಯ ಪೀಠವು “ಬಿಬಿಎಂಪಿ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಂಟು ವಾರ ಕಾಲಾವಕಾಶ ನೀಡಿದೆ. ಹತ್ತು ವಾರಗಳು ಏಕೆ? ನಾವು ಎಂಟು ವಾರ ಮಾತ್ರ ಕಾಲಾವಕಾಶ ನೀಡುತ್ತೇವೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಅದೇ ವೇಳಾಪಟ್ಟಿ ಪಾಲಿಸಿ. ಆಯೋಗಕ್ಕೆ ಹೆಚ್ಚಿನ ಮಾನವ ಸಂಪನ್ಮೂಲ ಕಲ್ಪಿಸಿ” ಎಂದು ಮೌಖಿಕವಾಗಿ ಹೇಳಿತು.

ರಾಜ್ಯ ಚುನಾವಣಾ ಆಯೋಗ ಪರವಾಗಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ “ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ರಾಜ್ಯ ಸರ್ಕಾರವು ಕಾಯಿದೆಗೆ ತಿದ್ದುಪಡಿ ತಂದು ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಕಸಿದುಕೊಂಡಿದೆ. ಇದರಿಂದ ಚುನಾವಣೆ ವಿಳಂಬವಾಗಿದೆ. ಹೀಗಾಗಿ, ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ನೀಡಬಾರದು” ಎಂದು ತಕರಾರು ಎತ್ತಿದರು.

Donate Janashakthi Media

Leave a Reply

Your email address will not be published. Required fields are marked *