ನವದೆಹಲಿ: ಜುಲೈ 1 ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ ಮತ್ತಿತರ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಹಲವು ಸ್ವತಂತ್ರ ನೌಕರರ ಒಕ್ಕೂಟಗಳ ವೇದಿಕೆ ಕರೆ ನೀಡಿದೆ.
ಹಿಂದಿನ ಕಾನೂನುಗಳಿಗೆ ಹಿಂತಿರುಗಲು ಸರ್ಕಾರವನ್ನು ಒತ್ತಾಯಿಸುತ್ತಾ, 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನೀಡಿರುವ ಜಂಟಿ ಹೇಳಿಕೆಯು ಬದಲಾವಣೆಗಳನ್ನು ” ಅಳವಡಿಸಿಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ಮೊದಲು ಸಾರ್ವಜನಿಕ ರಂಗದಲ್ಲಿ ಅವುಗಳ ಮೇಲೆ ಚರ್ಚೆ ನಡೆಯಬೇಕು”, ಏಕೆಂದರೆ ಈ ಬದಲಾವಣೆಗಳನ್ನು “ಸರಿಯಾದ ಸಮಾಲೋಚನೆಯಿಲ್ಲದೆ, ಸಂಸದೀಯ ಸಮಿತಿಯು ನೀಡಿದ ಸಲಹೆಗಳನ್ನೂ ನಿರ್ಲಕ್ಷಿಸಿ. ಮತ್ತು ಕರಡನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡದೆ ಜನರ ಮೇಲೆ ಹೇರಲಾಗಿದೆ” ಎಂದು ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಕ್ರಿಮಿನಲ್
“ಇವುಗಳನ್ನು ಬ್ರಿಟಿಷರ ಕಾಲದ ಕಾನೂನುಗಳನ್ನು ಬದಲಿಸುವ ಉದ್ದೇಶದಿಂದ ತರಲಾಗಿದೆ ಎಂಬ ಸಮರ್ಥನೆಯು ಸುಳ್ಳು, ಏಕೆಂದರೆ ಇದು ಹಿಂದಿನ ಕಾನೂನುಗಳ ಎಲ್ಲಾ ನಿಬಂಧನೆಗಳನ್ನು ಉಳಿಸಿಕೊಂಡಿದೆ ಮತ್ತು ಅವುಗಳಲ್ಲಿ ಕೆಲವನ್ನು ಇನ್ನಷ್ಟು ಕಠಿಣಗೊಳಿಸುತ್ತದೆ. ಉದಾಹರಣೆಗೆ, ರಾಜದ್ರೋಹವನ್ನು ಶಿಕ್ಷಿಸಲು ಉದ್ದೇಶಿಸಿರುವ ಐಪಿಎಸ್ ನ ಸೆಕ್ಷನ್ 124 (ಇದು ಒಂದು ವಿಶಿಷ್ಟ ಬ್ರಿಟಿಷ್ ಶಾಸನ) ಅನ್ನು ಉಳಿಸಿಕೊಳ್ಳಲಾಗಿದೆ ಮತ್ತು 3 ವರ್ಷಗಳ ಜೈಲು ಶಿಕ್ಷೆಯ ನಿಬಂಧನೆಯನ್ನು 7 ವರ್ಷಗಳಿಗೆ ಹೆಚ್ಚಿಸಲಾಗಿದೆ! ಇದರ ಪ್ರಕಾರ ಜನರ ಯಾವುದೇ ಸಭೆಗಳು ಮತ್ತು ಅವುಗಳ ಮುಖಂಡರನ್ನು ಭಯೋತ್ಪಾದಕರು ಎಂದು ಘೋಷಿಸಬಹುದು.
ಇದನ್ನೂ ಓದಿ: ತಮಿಳುನಾಡಿಗೆ 1 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸು! ತುರ್ತು ಸಭೆ ಕರೆದ ಸಿಎಂ
ಎಲ್ಲಾ ಟ್ರೇಡ್ ಯೂನಿಯನ್ ಚಟುವಟಿಕೆಗಳನ್ನು ಈ ನಿಬಂಧನೆಯ ಅಡಿಯಲ್ಲಿ ತರಬಹುದು ”ಎಂದು ಇಂಟಕ್,ಸಿಐಟಿಯು, ಎಐಟಿಯುಸಿ, ಎಸ್‍ಇಡಬ್ಲ್ಯುಎ, ಹೆಚ್‍ಎಂಎಸ್, ಎಐಯುಟಿಯುಸಿ, ಎಐಸಿಸಿಟಿಯು, ಯುಟಿಯುಸಿ,ಎಲ್‍ಪಿಎಫ್ ಮತ್ತು ಟಿಯುಸಿಸಿ ಸಹಿ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ
ಜುಲೈ 1, 2024 ರಿಂದ ಜಾರಿಗೆ ಬಂದಿರುವ ಈ 3 ಹೊಸ ಕ್ರಿಮಿನಲ್ ಕಾನೂನುಗಳ ದೂರಗಾಮಿ ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರುವ ಸಾಧ್ಯತೆ ಇಲ್ಲ. ಅವನ್ನು ಜನರ ಮೇಲೆ ಬಲವಂತವಾಗಿ ಹೇರಲಾಗಿದೆ.
ಪೊಲಿಸ್ ಠಾಣೆಗಳ ಮುಖ್ಯಸ್ಥರಿಗೆ ಎಫ್‌ಐಆರ್ ದಾಖಲಿಸಲು ಎಲ್ಲಾ ಅಧಿಕಾರಗಳನ್ನು ನೀಡಲಾಗಿದೆ, ಎಫ್‌ಐಆರ್ ದಾಖಲಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂಬ ಇದುವರೆಗಿನ ನಿಬಂಧನೆಗಿಂತ ಭಿನ್ನವಾಗಿ ಅವನ್ನು ನೋಂದಾಯಿಸಬೇಕೇ ಬೇಢವೇ ಎಂಬುದನ್ನೂ ಪೋಲೀಸರ ವಿವೇಚನೆಗೆ ಬಿಡಲಾಗಿದೆ, ಪೊಲೀಸ್ ಕಸ್ಟಡಿ ಅವಧಿಯನ್ನು ಈಗಿರುವ 15 ದಿನಗಳಿಂದ 90 ದಿನಗಳಿಗೆ ಹೆಚ್ಚಿಸಲಾಗಿದೆ.
ತಮ್ಮ ನೈಜ ಬೇಡಿಕೆಗಳಿಗಾಗಿ ಶಾಂತಿಯುತ ಪ್ರತಿಭಟನಾಕಾರರು ಮತ್ತು ಘೇರಾವ್ ಮಾಡುವ ಕಾರ್ಮಿಕರ ವಿರುದ್ಧ ಕೇಸು ದಾಖಲಿಸಲು ಪೊಲೀಸರಿಗೆ ಅಧಿಕಾರ ಕೊಡಲಾಗಿದೆ. ಇದು ಆಳುವವರು ಮತ್ತು ಅವರ ಗುರುಗಳ ಮರ್ಜಿಗಳಿಗೆ ಅನುಗುಣವಾಗಿ ದಬ್ಬಾಳಿಕೆಯ ತಂತ್ರಗಳನ್ನು ಅನುಸರಿಸುವ ಪೊಲೀಸ್ ರಾಜ್ಯಭಾರಕ್ಕೆ ನಾಂದಿ ಹಾಡಬಹುದು ಎಂದು ವೇದಿಕೆ ಭೀತಿ ವ್ಯಕ್ತಪಡಿಸಿದೆ.
ಈಗಾಗಲೇ ದೇಶಾದ್ಯಂತ ಟ್ರಕ್ ಚಾಲಕರಿಂದ ಇದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದ ಕರಾಳ ನಿಬಂಧನೆಗಳಿಗೆ ತೀವ್ರ ವಿರೋಧ ವ್ಯಕ್ತವಾದಾಗ, ಸರಕಾರ ಹಿಂದೆ ಸರಿಯಬೇಕಾಯಿತು, ಆ ಸೆಕ್ಷನ್‌ಗಳನ್ನು ಜಾರಿಗೆ ತರುವುದಿಲ್ಲ ಎಂದು ಹೇಳಬೇಕಾಯಿತು, ಆದರೆ ಅವುಗಳನ್ನು ಇನ್ನೂ ರದ್ದುಗೊಳಿಸಲಿಲ್ಲ ಎಂದು ಕಾರ್ಮಿಕ ಸಂಘಗಳು ನೆನಪಿಸಿವೆ.
ಈ ಮೂಲಕ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ ಎಂಬ ಆಕ್ಷೇಪವೂ ಇದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಈ ಸರಕಾರದ 2016 ರ ನೋಟು ರದ್ದತಿಯಂತ ಮತ್ತೊಂದು ಮೂರ್ಖ ಹೆಜ್ಜೆಯಾಗಿದೆ, ವಾಸ್ತವವಾಗಿ ಇದು ಹೆಚ್ಚು ಅಪಾಯಕಾರಿ, ಕ್ರಿಮಿನಲ್ ನ್ಯಾಯಶಾಸ್ತ್ರವನ್ನು ಪುನರ್ರಚಿಸಿ ಜನರ ಹಕ್ಕುಗಳ ಮೇಲೆ ದಾಳಿಗಳನ್ನು ಹರಿಯ ಬಿಡುವ ನವ ಉದಾರವಾದಿ ಶಕ್ತಿಗಳ ಹಿತಾಸಕ್ತಿಗಳಿಗೆ ಸರಿಹೊಂದುವ ಕ್ರಮ ಎಂದಿರುವ ಕೇಂದ್ರೀಯ ಕಾರ್ಮಿಕ ಸಂಘಗಳು, ನೌಕರರ ಒಕ್ಕೂಟಗಳ ವೇದಿಕೆಯು ಈ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಪ್ರಸ್ತಾಪಿಸಲಾದ ಯಾವುದೇ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮತ್ತು ಅನುಷ್ಠಾನಗೊಳಿಸುವ ಮೊದಲು ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದೆ.
ಇದನ್ನೂ ನೋಡಿ: ರೈಲು ಚಾಲಕರಿಗೆ ವಿಶ್ರಾಂತಿ ಇಲ್ಲ! ನಿದ್ದೆ ಇಲ್ಲ!! ಹಾಗಾಗಿಯೇ ಅಪಘಾತಗಳು ಹೆಚ್ಚಾಗುತ್ತಿವೆ!!! Janashakthi Media