60 ವರ್ಷ ಮೇಲ್ಪಟ್ಟ ಆರುವರೇ ಸಾವಿರ ಬಿಸಿಯೂಟ ನೌಕರರ ವಜಾ: 2ನೇ ದಿನಕ್ಕೆ ಮುಂದುವರೆದ ಪ್ರತಿಭಟನೆ

ಬೆಂಗಳೂರು: ವಯಸ್ಸಿನ ಕಾರಣ ನೀಡಿ, 60 ವರ್ಷ ತುಂಬಿದ 6,500 ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾ ಮಾಡಿರುವ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಶಿಕ್ಷಣ ಇಲಾಖೆಯು 60 ವರ್ಷ ತುಂಬಿದ ಕಾರಣಕ್ಕೆ 6,500 ನೌಕರರನ್ನು ಏಕಾಏಕಿ ಸೇವೆಯಿಂದ ವಜಾ ಮಾಡಿ ಅನ್ಯಾಯ ಮಾಡಿದೆ. ಈ ಕೂಡಲೇ ಆದೇಶವನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿರುವ ಪ್ರತಿಭಟನಾಕಾರರು, ನಗರದ ಸ್ವಾತಂತ್ರ್ಯ ಉದ್ಯಾನವದಲ್ಲಿ ಜಮಾಯಿಸಿದ್ದು, ಹೋರಾಟ ಇಂದು ಸಹ ಮುಂದುವರೆದಿದೆ. ಸಾವಿರಾರು ಮಹಿಳೆಯರು ಹಿಂದಿನ ದಿನ ರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಇದ್ದರು.

ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಬಿಸಿಯೂಟ ನೌಕರರಿಗೆ ಐದು ಪೈಸೆ ಪರಿಹಾರ ನೀಡದೇ ಸೇವೆಯಿಂದ ವಜಾ ಮಾಡಲಾಗಿದೆ. ಇವರುಗಳಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಣ್ಣ ಸಣ್ಣ ವಿಚಾರಗಳನ್ನು ಪ್ರಸ್ತಾಪಿಸಿ ಪ್ರೋತ್ಸಾಹ ನೀಡುತ್ತಾರೆ. ಆದರೆ, ಸಾವಿರಾರು ನೌಕರರ ಕಷ್ಟ ಕೇಳುವ ವ್ಯವದಾನ ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲವಾಗಿದೆ. ಮುಖ್ಯಮಂತ್ರಿಯಾಗಲೀ, ಸಚಿವರಾಗಲೀ ಬಿಸಿಯೂಟ ನೌಕರರ ಕಷ್ಟ ಕೇಳಲು ಬರದಿರುವುದು ಅವರ ಕಾರ್ಮಿಕ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಬಿಸಿಯೂಟ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿದವರಿಗೆ ಗ್ರಾಚ್ಯುಯಿಟಿ ನೀಡಬೇಕು. ಕನಿಷ್ಠ ಒಂದು ಲಕ್ಷ ರೂ. ಪರಿಹಾರ ನೀಡಬೇಕು. ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು. ಇವರನ್ನು ಸರ್ಕಾರಿ ಕಾರ್ಮಿಕರೆಂದು ಗುರುತಿಸಬೇಕು. ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 1 ಸಾವಿರ ರೂಪಾಯಿಗಳನ್ನ ಜಾರಿ ಮಾಡಬೇಕು. ಜೊತೆಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಟ್ಟಿಕೊಡಬೇಕು ಎಂಬ ಬೇಡಿಕೆಗಳು ಈಡೇರಿಸದ ಹೊರತು ಮುಷ್ಕರ ಕೈ ಬಿಡುವುದಿಲ್ಲ ಎಂದು ಹೋರಾಟ ಇಳಿದಿದ್ದಾರೆ.

ಸಿಐಟಿಯು ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸಕಾರತ್ಮಕವಾಗಿ ಸ್ಪಂದಿಸಿದ್ದು, ಭರವಸೆ ನೀಡಿದ್ದಾರೆ, ಸದ್ಯ 60 ಕೋಟಿ ರೂಪಾಯಿ ಹಣ ಮಂಜೂರು ಮಾಡಬೇಕೆಂದು ಆಗ್ರಹಿಸಲಾಗಿದೆ. ಅಲ್ಲದೆ, ಶಿಕ್ಷಣ ಸಚಿವರು, ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಪ್ರತಿಭಟನೆ ಸ್ಥಳಕ್ಕೆ ಬರಬೇಕೆಂದು ಒತ್ತಾಯವಾಗಿದೆ. ಇನ್ನೂ ಪ್ರತಿಭಟನೆ ಮುಂದಿನ ಹೋರಾಟದ ವಿಚಾರವಾಗಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಬಿಸಿಯೂಟ ನೌಕರರ ಪ್ರಮುಖ ಬೇಡಿಕೆ

  • 60 ವರ್ಷ ಮೇಲ್ಪಟ್ಟ ನೌಕರರನ್ನು ಕೆಲಸದಿಂದ ವಜಾಗೊಳಿಸುವಾಗ 1 ಲಕ್ಷ ರೂ ನಿವೃತ್ತಿ ವೇತನ ಕೊಡಬೇಕು.
  • ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು, ಇವರನ್ನು ಸರ್ಕಾರಿ ಕಾರ್ಮಿಕರೆಂದು ಗುರುತಿಸಬೇಕು.
  • ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 1 ಸಾವಿರ ರೂ. ಗಳನ್ನು ಜಾರಿ ಮಾಡಬೇಕು.
  • ಬೇಸಿಗೆ ಮತ್ತು ದಸರಾ ರಜೆಗಳ ವೇತನ ಕಟ್ಟಿಕೊಡಬೇಕು.
  • ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು.
  • ಬಿಸಿಯೂಟ ನೌಕರರ ವೇತನವನ್ನು 5 ಸಾವಿರಕ್ಕೆ ಹೆಚ್ಚಳ ಮಾಡಬೇಕು.
Donate Janashakthi Media

Leave a Reply

Your email address will not be published. Required fields are marked *