ಬೆಂಗಳೂರು- ಇಂದು ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 2ನೇ ಪಟ್ಟಿಯಲ್ಲೇ ಹಾಸನ ಟಿಕೆಟ್ ಕೂಡ ಘೋಷಣೆಯಾಗಲಿದೆ.ಬಂಡಾಯ ಇದ್ದರೂ ಸೊಪ್ಪು ಹಾಕುವುದಿಲ್ಲ.
ಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತರ ಮನಸ್ಸಿಗೆ ನೋವು ಮಾಡಲ್ಲ. ಜೆಡಿಎಸ್ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುತ್ತೇವೆ. ಎಷ್ಟೇ ಒತ್ತಡವಿದ್ದರೂ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದರು.
ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಗೊಂದಲದಲ್ಲಿರುವ ಹಾಸನ ಕ್ಷೇತ್ರ ಸೇರಿ ಉಳಿದ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮುಂದಿನ ಸೋಮವಾರ ಬೆಳಗ್ಗೆ ಬಿಡುಗಡೆ ಮಾಡುತ್ತೇವೆ. ಹಾಸನ ಕ್ಷೇತ್ರದ ಬಂಡಾಯಕ್ಕೆ ಸೊಪ್ಪು ಹಾಕುವ ಪ್ರಶ್ನೆಯೇ ಇಲ್ಲ, ನಮ್ಮ ಪಕ್ಷದಲ್ಲಿ ಕಾರ್ಯಕರ್ತರ ಭಾವನೆಗಳು ಮುಖ್ಯ, ಕಾರ್ಯಕರ್ತರಿಗೆ ಯಾವುದೇ ರೀತಿಯಲ್ಲಿ ನೋವುಂಟುಮಾಡುವುದಿಲ್ಲ ಎಂದಿದ್ದಾರೆ.
ಇಂದಿನಿಂದ ವಿವಿಧೆಡೆ ಪ್ರಚಾರ:ಇಂದಿನಿಂದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಗುವುದು. ಚಾಮರಾಜನಗರ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಲ್ಲಿ ಏಪ್ರಿಲ್ 12ರವರೆಗೆ ಪ್ರಚಾರ ನಡೆಸಲಾಗುವುದು. ಏಪ್ರಿಲ್ 13ರಿಂದ ಏಪ್ರಿಲ್ 20ರವರೆಗೆ ನಾಮಪತ್ರ ಸಲ್ಲಿಕೆಗೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು.
ಏಪ್ರಿಲ್ 21ರಿಂದ ಏಪ್ರಿಲ್ 24ರವರೆಗೆ ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿ ಪ್ರಚಾರ ಮಾಡುತ್ತೇನೆ. ಎಲ್ಲಿಯೂ ಸಮಯ ವ್ಯರ್ಥ ಮಾಡುವುದಿಲ್ಲ. ಇನ್ನು, ಸಮೀಕ್ಷೆ ವರದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಗುರಿ ತಲುಪುವುದಕ್ಕೆ ಬೇಕಾದ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು ಖಚಿತ: ಸಿದ್ದರಾಮಯ್ಯ
ಇನ್ನು ಸಚಿವ ನಾರಾಯಣಸ್ವಾಮಿ ವಿರುದ್ದ ಕಿಡಿಕಾರಿದ ಕುಮಾರಸ್ವಾಮಿ, ಇವರನ್ನು ಬೆಳೆಸುವುದಕ್ಕೆ ನಾನು ಪಕ್ಷ ಹಾಳುಮಾಡಿಕೊಳ್ಳಬೇಕಾ? ಇವರೇನು ಮಹಾನ್ ಕೆಲಸ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು. ಅಂದು ಕೃಷ್ಣ ವಿರುದ್ಧ ಅಭ್ಯರ್ಥಿ ಆಗಬೇಕು ಎಂದಾಗ ಪರಿಜ್ಞಾನ ಇರಲಿಲ್ವಾ. ನಿನ್ನ ನಡವಳಿಕೆ ನೋಡಿ ಟಿಕೆಟ್ ನೀಡಲಿಲ್ಲ. ಟಿಕೆಟ್ ಕೊಡಿಸಿದ್ದು ನಾನು, ಕುತ್ತಿಗೆ ಕುಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. ಈ ಚುನಾವಣೆಯಲ್ಲಿ ಕೆ.ಆರ್.ಪೇಟೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.