ಉಸಿರುಗಟ್ಟಿ 2 ದಲಿತ ಕಾರ್ಮಿಕರು ಸಾವು | ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಘಟನೆ

ಚೆನ್ನೈ: ತಮಿಳುನಾಡಿನ ಆವಡಿಯಲ್ಲಿರುವ ಆರ್ಡನೆನ್ಸ್ ಬಟ್ಟೆ ಕಾರ್ಖಾನೆಯ (OCF) ಆವರಣದ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ವಿಷ ಗಾಳಿಯನ್ನು ಸೇವಿಸಿ ಉಸಿರುಗಟ್ಟಿ ಇಬ್ಬರು ದಲಿತ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯು ಸೆಪ್ಟೆಂಬರ್ 7ರ ಗುರುವಾರ ಸಂಭವಿಸಿದ್ದು, ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತಪಟ್ಟವರನ್ನು ಸಿ. ದೇವನ್ (53) ಮತ್ತು ಕೆ. ಮೋಸೆಸ್ (39) ಎಂದು ಗುರುತಿಸಲಾಗಿದೆ. ದಲಿತ ಕಾರ್ಮಿಕರಿಬ್ಬರ ಸಾವಿನ ಬಗ್ಗೆ ತನಿಖೆ ನಡೆಸಲು ಒಸಿಎಫ್ ತನಿಖಾ ಮಂಡಳಿಯನ್ನು ರಚಿಸಿದೆ.

ಮೃತಪಟ್ಟ ದೇವನ್ ಮತ್ತು ಮೋಸೆಸ್ ಅವರನ್ನು ಇತರ ಇಬ್ಬರು ಕಾರ್ಮಿಕರೊಂದಿಗೆ ಗುತ್ತಿಗೆದಾರ ಸಂಪತ್ ಮತ್ತು ಮೇಲ್ವಿಚಾರಕ ಮನೋ ತಿರುಪಾಲ್ ಅವರು ಒಸಿಎಫ್‌ನ ಸಿಬ್ಬಂದಿ ವಸತಿ ಕ್ವಾರ್ಟರ್ಸ್‌ನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ನೇಮಿಸಿಕೊಂಡಿದ್ದರು ಎಂದು ಎಫ್‌ಐಆರ್ ಹೇಳಿದೆ. ಪೊಲೀಸರು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) (ಎಸ್‌ಸಿ/ಎಸ್‌ಟಿ (ಪಿಒಎ)) ಕಾಯ್ದೆ ಹಾಗೂ ಮತ್ತಿತರ ಕಾಯ್ದೆ ಅಡಿಯಲ್ಲಿ ಸಂಪತ್ ಮತ್ತು ಮನೋ ತಿರುಪಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನ ಅಂತಿಮ: ಪ್ರತಾಪ್ ಸಿಂಹ

ಗುರುವಾರ ಮಧ್ಯಾಹ್ನ ದೇವನ್ ಅವರು ಮ್ಯಾನ್‌ಹೋಲ್ ತೆರೆದು ಸುಮಾರು 20 ಅಡಿ ಆಳದ ಟ್ಯಾಂಕ್‌ಗೆ ಪ್ರವೇಶಿಸಿದ್ದಾರೆ. ಈ ವೇಳೆ ಅವರು ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ಟ್ಯಾಂಕ್‌ಗೆ ಬಿದ್ದಿದ್ದಾರೆ. ಅವರಿಗೆ ಸಹಾಯ ಮಾಡಲು ಮೋಸೆಸ್ ಕೂಡಾ ಒಳಗೆ ಇಳಿದಿದ್ದು, ಅವರು ಕೂಡಾ ವಿಷ ಗಾಳಿ ಸೇವಿಸಿ ಮೂರ್ಛೆ ಹೋಗಿದ್ದಾರೆ.

ಈ ವೇಳೆ ಅವರೊಂದಿಗಿದ್ದ ಕಾರ್ಮಿಕರು ಅಗ್ನಿಶಾಮಕದಳ, ಹಾಗೂ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಟ್ಯಾಂಕ್‌ನಿಂದ ಹೊರತೆಗೆದಿದ್ದಾರೆ. ಮೋಸೆಸ್ ಸ್ಥಳದಲ್ಲೇ ಮೃತಪಟ್ಟರೆ, ದೇವನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ನಿಧನರಾಗಿದ್ದಾರೆ. ದೇವನ್ ಎಸ್‌ಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಮೋಸೆಸ್ ಅವರು ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

ಮೃತಪಟ್ಟ ದಲಿತ ಕಾರ್ಮಿಕರ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಈ ಮಧ್ಯೆ, ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕಾರ್ಮಿಕರನ್ನು ನೇಮಿಸಿಲ್ಲ ಎಂದು ಕಾರ್ಖಾನೆ ಹೇಳಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಿದೆ. “ಸೆಪ್ಟಿಕ್ ಟ್ಯಾಂಕ್‌ನಲ್ಲಿನ ಅಡಚಣೆಯ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ, ಇಬ್ಬರು ಕಾರ್ಮಿಕರು ತಮ್ಮ ಮೇಲ್ವಿಚಾರಕರಿಗೆ ಅಥವಾ OCF ನಲ್ಲಿರುವ ಅಧಿಕಾರಿಗಳಿಗೆ ಯಾವುದೇ ಸೂಚನೆ ನೀಡದೆ ಸ್ವಂತವಾಗಿ ಸ್ವಚ್ಛಗೊಳಿಸುವ ಕೆಲಸವನ್ನು ಮಾಡಿದ್ದಾರೆ” ಎಂದು OCF ಹೇಳಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಒಸಿಎಫ್‌ನಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಮೂಲಕ ಟ್ಯಾಂಕ್‌ಗಳನ್ನು ಸ್ವಚ್ಛ ಮಾಡಲಾಗುವುದಿಲ್ಲ ಎಂದು ಕಾರ್ಖಾನೆ ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.


ಜನಶಕ್ತಿ ಮೀಡಿಯಾದ ಯೂಟ್ಯೂಬ್ Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ


ವಿಡಿಯೊ ನೋಡಿ: ಸೌಜನ್ಯಳಿಗೆ ನ್ಯಾಯ ಕೊಡಿಸಿ ಎಂದರೆ ಧರ್ಮಸ್ಥಳಕ್ಕೆ ಹೇಗೆ ಅವಮಾನ ಆಗುತ್ತೆ? ಬಿ.ಎಂ ಭಟ್‌ ಪ್ರಶ್ನೆ Janashakthi Media

Donate Janashakthi Media

Leave a Reply

Your email address will not be published. Required fields are marked *