BSFನ್ನು ರೈತರನ್ನು ತಡೆಯಲು ಬಳಸಿದ್ದು ಒಂದು ಭಯಾನಕ ರೂಪಕ

 

 

ಶಾಂತಿಯುತ ಪ್ರತಿಭಟನೆಗಾಗಿ ಬಂದ ರೈತರನ್ನು ತಡೆಯಲು ಕಂದಕಗಳನ್ನು ತೋಡಿ ಜಲಫಿರಂಗಿಗಳನ್ನು ಬಳಸಲಾಯಿತು. ಅಂದರೆ ಗಡಿದಾಟಿ ಬರುತ್ತಿರುವ ಶತ್ರುರಾಷ್ಟ್ರದ ಸೈನಿಕರನ್ನು ತಡೆಯುವ ಹಾಗೆ ರೈತರನ್ನು ತಡೆಯಲಾಯಿತು. ಬಿ.ಎಸ್.ಎಫ್ (Border Security Force) ಅನ್ನು ಬಳಸಿಕೊಂಡದ್ದು ಒಂದು ಭಯಾನಕ ರೂಪಕದಂತಿದೆ.  ಅಂದರೆ ಆಳುವವರ್ಗ, ಸರಕಾರ ಮತ್ತು ಬಂಡವಾಳಶಾಹಿಗಳು ಸೇರಿ ಒಂದು ರಾಷ್ಟ್ರವಿದೆ. ಕಾರ್ಮಿಕರು, ರೈತರದು ಇನ್ನೊಂದು ರಾಷ್ಟçವಿದೆ. ಹೀಗಾಗಿ ದೆಹಲಿಯ ಗಡಿಯಲ್ಲಿ ಈ ಶತ್ರುರಾಷ್ಟ್ರದವರನ್ನು ತಡೆಯಬೇಕು.

  • ಪ್ರೊ. ರಾಜೇಂದ್ರ ಚೆನ್ನಿ

 

ಕೋವಿಡ್ ಪಿಡುಗಿನ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಾಗಿನಿಂದ ಭಾರತದ ಉದ್ದಕ್ಕೂ ಪ್ರತಿಭಟನೆಗಳು ನಡೆಯುತ್ತಿವೆ.  ರೈತರು ಮತ್ತು ಕಾರ್ಮಿಕರು ಸರಿಯಾಗಿ ಗ್ರಹಿಸಿರುವಂತೆ ಆಳುವ ಪಕ್ಷವು ಬಂಡವಾಳಶಾಹಿಯ ಆಪ್ತಮಿತ್ರ ಮಾತ್ರವಲ್ಲ ಅದರ ಶಸ್ತ್ರವಾಗಿದೆ, ಆಯುಧವಾಗಿದೆ. ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಬಂಡವಾಳಶಾಹಿಯ ಪರವಾಗಿಯೇ ಇವೆ. ಅಲ್ಲದೆ ಜಾಗತೀಕರಣ, ಖಾಸಗೀಕರಣಗಳನ್ನು ಬೆಂಬಲಿಸುತ್ತಾ ಬಂದಿವೆ. ಎಷ್ಟರಮಟ್ಟಿಗೆ ಎಂದರೆ ಚಿಂತಕರಾದ ಐಜಾಜ್ ಅಹಮದ್ ಒಂದು ಸಾರಿ ಹೇಳಿದ್ದರು, ‘ಜಾಗತೀಕರಣವು ಯಶಸ್ವಿಯಾಗಿರುವುದು ಭಾರತದಲ್ಲಿ ಮಾತ್ರ’ ಎಂದು. ಈ ವಾಕ್ಯವು ಇಂದು ನಮ್ಮ ದುರಂತಗಳ ಸಂಕ್ಷಿಪ್ತ ಹೇಳಿಕೆಯಾಗಿದೆ. ಆಳುವ ಪಕ್ಷವು ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ, ನಾಶಮಾಡುತ್ತಿರುವ ಹಿಂದೆ ಇರುವ ಉದ್ದೇಶವು ಈಗ ಸ್ಪಷ್ಟವಾಗಿದೆ. ತಾನು ಅಧಿಕಾರದಲ್ಲಿರಬೇಕು ಎನ್ನುವುದು ಮಾತ್ರವಲ್ಲ, ತನ್ನ ಅಧಿಕಾರದಿಂದ ಬಂಡವಾಳಶಾಹಿಯನ್ನು ಪ್ರಬಲಗೊಳಿಸುವುದು ಅದರ ಉದ್ದೇಶವಾಗಿದೆ. ಆದರೆ ಈ ಕೆಲಸವನ್ನು ಇಷ್ಟು ನಿರ್ಲಜ್ಜವಾಗಿ ಕ್ರೂರವಾಗಿ ಮಾಡುತ್ತದೆಯೆಂದು ಬಹಳ ಜನ ನಿರೀಕ್ಷಿಸಿರಲಿಲ್ಲ.

“ಪ್ರಬಲ ನಾಯಕ”, ‘ಹಿಂದೂ ರಾಷ್ಟ್ರ ಮುಂತಾದ ಆಫೀಮುಗಳ ಪ್ರಭಾವದಿಂದಾಗಿ ಸಮೂಹಸನ್ನಿಯಲ್ಲಿರುವ ಪ್ರಜೆಗಳು ಏನಾದರೂ ಸರಿ ಆಳುವ ಪಕ್ಷವನ್ನು ಚುನಾವಣೆಗಳಲ್ಲಿ ಆಯ್ಕೆ ಮಾಡಿಯೇ ಮಾಡುತ್ತಾರೆ ಎನ್ನುವುದು ಗೊತ್ತಾದ ಕೂಡಲೇ ಸರಕಾರವು ತನ್ನ ಪಶುಬಲವನ್ನು ಬಳಸಿಕೊಂಡು ರೈತರನ್ನು ಕಾರ್ಮಿಕರನ್ನು ದಮನ ಮಾಡುತ್ತಿದೆ. ಶಾಂತಿಯುತ ಪ್ರತಿಭಟನೆಗಾಗಿ ಬಂದ ರೈತರನ್ನು ತಡೆಯಲು ಕಂದಕಗಳನ್ನು ತೋಡಿ ಜಲಫಿರಂಗಿಗಳನ್ನು ಬಳಸಲಾಯಿತು. ಅಂದರೆ ಗಡಿದಾಟಿ ಬರುತ್ತಿರುವ ಶತ್ರುರಾಷ್ಟ್ರದ ಸೈನಿಕರನ್ನು ತಡೆಯುವ ಹಾಗೆ ರೈತರನ್ನು ತಡೆಯಲಾಯಿತು. ಬಿ.ಎಸ್.ಎಫ್ (Border Security Force) ಅನ್ನು ಬಳಸಿಕೊಂಡದ್ದು ಒಂದು ಭಯಾನಕ ರೂಪಕದಂತಿದೆ.  ಅಂದರೆ ಆಳುವವರ್ಗ, ಸರಕಾರ ಮತ್ತು ಬಂಡವಾಳಶಾಹಿಗಳು ಸೇರಿ ಒಂದು ರಾಷ್ಟ್ರವಿದೆ. ಕಾರ್ಮಿಕರು, ರೈತರದು ಇನ್ನೊಂದು ರಾಷ್ಟ್ರವಿದೆ. ಹೀಗಾಗಿ ದೆಹಲಿಯ ಗಡಿಯಲ್ಲಿ ಈ ಶತ್ರುರಾಷ್ಟ್ರದವರನ್ನು ತಡೆಯಬೇಕು. ಈಗಾಗಲೇ ಆಳುವ ಪಕ್ಷದ ಬಾಡಿಗೆ ಬಾಯಿಗಳು, ರೈತರು ‘ಖಲಿಸ್ಥಾನಿಗಳು’, ‘ಭಯೋತ್ಪಾದಕರು’, ‘ದೇಶದ್ರೋಹಿಗಳು’ ಎಂದು ಹೇಳತೊಡಗಿವೆ. ಇಂಥ ಒಂದು ಮೆಸೇಜ್‌ಗೆ ಎರಡು ರೂಪಾಯಿ ಕೂಲಿ ಪಡೆಯುವ “ನೆಟ್ಟಿಗರು” ರೈತರ ಮೇಲೆ ಗುಂಡು ಹಾರಿಸಿ ಎಂದು ಹೇಳುತ್ತಿದ್ದಾರೆ. ನನಗೆ ವೈಯಕ್ತಿಕವಾಗಿ ಆಶ್ಚರ್ಯವೆಂದರೆ ಅನೇಕ ಕೋಟಿ ವಲಸೆ ಕಾರ್ಮಿಕರು ಸಾವಿರಾರು ಮೈಲಿ ನಡೆದುಕೊಂಡು ಹೋಗುತ್ತಿರುವಾಗಲೂ ಭಾರತೀಯ ಪ್ರಜೆಗಳ ಮನಸ್ಸಿಗೆ ಏನೂ ಅನ್ನಿಸಲಿಲ್ಲ.  ಹಠಾತ್ತನೆ ಲಾಕ್‌ಡೌನ್ ವಿಧಿಸಿದಾಗ ನರಕವನ್ನು ಅನುಭವಿಸಿದಾಗಲೂ ಇವರಿಗೆ ಏನೂ ಅನ್ನಿಸಲಿಲ್ಲ.  ಈಗ ಲಕ್ಷಾನುಗಟ್ಟಲೆ ರೈತರು ಕೊರೆಯುವ ಚಳಿಯಲ್ಲಿ ಪ್ರತಿಭಟನೆ ಮಾಡಿದರೂ ಏನೂ ಅನ್ನಿಸಲಿಲ್ಲ.  ಬುದ್ಧಿ, ಮನಸ್ಸುಗಳು ಹೀಗೆ ಸಂಪೂರ್ಣ ಮುರುಟಿ ಹೋಗಲು ಸಾಧ್ಯವೆ?  ಮನುಷ್ಯ ಸಂವೇದನೆಯೇ ಸತ್ತು ಹೋಗಿದೆಯೆ?

ನಾನು ಈ ಲೇಖನ ಬರೆಯುತ್ತಿರುವಾಗ ಇದು ಪ್ರತಿಭಟನೆಯ ಎಂಟನೇಯ ದಿನ.  ನೆನ್ನೆವರೆಗೆ ಮಾತುಕತೆಗಳು ವಿಫಲವಾಗಿವೆ. ರೈತರ ನಿಲುವು ಸರಿಯಾಗಿದೆ. ಮೊದಲು ರೈತ ವಿರೋಧಿ ಕಾನೂನುಗಳನ್ನು ವಾಪಸ್ಸು ತೆಗೆದುಕೊಳ್ಳಬೇಕು. ಆನಂತರವೇ ಮಾತುಕತೆ. ಸರಕಾರದ ತಂತ್ರಗಳ ಬಗ್ಗೆ ಯಾವ ಸಂಶಯವೂ ಬೇಡ.  ಅದು ಪ್ರತಿಭಟನೆ ಮಾಡುತ್ತಿರುವವರಲ್ಲಿ ಒಡಕು ಹುಟ್ಟಿಸುತ್ತದೆ. ಅದು ಸಾಧ್ಯವಾಗದಿದ್ದರೆ ಕೋಮು ಗಲಭೆಯನ್ನು ಸೃಷ್ಟಿಸುತ್ತದೆ. ಇನ್ನೊಂದು ತಂತ್ರವೆಂದರೆ ಗಡಿಯಲ್ಲಿ ಫುಲ್ವಾಮಾದಂಥ ಘಟನೆಯನ್ನು ಸೃಷ್ಟಿಸಿ ದೇಶದ ಭದ್ರತೆಯು ಅಪಾಯದಲ್ಲಿದೆ ಎಂದು ಹೇಳಿ ರೈತರ ಮೇಲೆ ನೈತಿಕ ಒತ್ತಡ ತರುತ್ತದೆ. ಕಾಂಗ್ರೆಸ್‌ನ ಮೂರ್ಖ ಹಾಗೂ ಬೇಜವಾಬ್ದಾರಿಯ ನಡೆಯ ಪ್ರತೀಕವಾಗಿ ಪಂಜಾಬ್‌ನ ಮುಖ್ಯಮಂತ್ರಿ “ರೈತರು ಹಠ ಹಿಡಿಯಬಾರದು. ಇದು ದೇಶದ ಭದ್ರತೆಯ ಪ್ರಶ್ನೆ” ಎಂದು ಹೇಳಿದ್ದಾರೆ, ಆಳುವ ಪಕ್ಷವೂ ಹೇಳದೇ ಇದ್ದ ದೇಶದ ಭದ್ರತೆಯನ್ನು ರೈತರ ಪ್ರತಿಭಟನೆಗೆ ಜೋಡಿಸುವ ಈ ರೈತದ್ರೋಹಿ ಪ್ರಾಯಶಃ ಆಳುವ ಪಕ್ಷಕ್ಕೆ ಒಂದು ತಂತ್ರವನ್ನು ಹೇಳಿಕೊಟ್ಟಿದ್ದಾನೆ. ರೈತರ ಜೊತೆಗೆ ಸಂಧಾನವಾಗದಿದ್ದರೆ, ಅಥವಾ ಅವರಲ್ಲಿ ಒಡಕು ಮೂಡಿಸಲು ಸಾಧ್ಯವಾಗದಿದ್ದರೆ ಗಡಿಯಲ್ಲಿ ಒಂದು ಘಟನೆಯನ್ನು “ನಡೆಸಲಾಗುತ್ತದೆ” ಎನ್ನುವುದರ ಬಗ್ಗೆ ಅನುಮಾನವೇ ಬೇಡ.

ಈಗಿರುವ ಮುಖ್ಯಪ್ರಶ್ನೆಯೆಂದರೆ ಈ ಚಳುವಳಿಯನ್ನು ಉದ್ದೇಶ ಈಡೇರುವವರೆಗೆ ಮುಂದುವರೆಸಿಕೊಂಡು ಹೋಗುವುದು ಹೇಗೆ ಎನ್ನುವುದು. ದೇಶದ ಎಲ್ಲಾ ಪ್ರಜೆಗಳು ಈ ಪ್ರತಿಭಟನೆಯಲ್ಲಿ ಭಾಗಿಗಳಾಗುವುದೊಂದೇ ಪರಿಹಾರ. ಅದು ರೈತರ ಸಮಸ್ಯೆ ಎಂದು ಸುಮ್ಮನಾದರೆ ಬರುವ ದಿನಗಳಲ್ಲಿ ಪ್ರಭುತ್ವವು ಇನ್ನೂ ಹೆಚ್ಚು ಕ್ರೂರವಾಗುತ್ತದೆ, ಹಿಂಸಾಪರವಾಗುತ್ತದೆ.

ಇನ್ನು ಕರ್ನಾಟಕದ ಕೃಷಿಮಂತ್ರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳೆಂದು ಅಪ್ಪಣೆ ಕೊಡಿಸಿದ್ದಾರೆ. ಅವರು ಹೇಳಿದ್ದು ನಿಜ. ಏನೇ ಆದರೂ ಆತ್ಮಹತ್ಯೆ ಮಾಡಿಕೊಳ್ಳದ ಧೀರರು ರಾಜಕಾರಣಿಗಳು ಮಾತ್ರ. ಏಕೆ ಗೊತ್ತೆ? ಅವರಿಗೆ ಬೀದಿ ನಡುವೆ ಉಗಿಯಿರಿ; ಅವರ ಭ್ರಷ್ಠಾಚಾರವು ಸಾಕ್ಷಿ ಸಮೇತ ಹೊರಬರಲಿ; ಅವರು ಹೆಂಗಸರ ಮಾನಭಂಗ ಮಾಡುವ ವೀಡಿಯೋಗಳು ಬರಲಿ; ಅವರೆಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.  ಇಂಥ ಧೀರರ ಎದುರಿಗೆ ಒಂದೆರಡು ಲಕ್ಷ ರೂಪಾಯಿ ಸಾಲ ತೀರಿಸಲಿಕ್ಕಾಗದೆ ಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ರೈತನು ಹೇಡಿಯಲ್ಲವೆ?!

Donate Janashakthi Media

Leave a Reply

Your email address will not be published. Required fields are marked *