ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 29 ವರ್ಷ

ಬಾಬರಿ ಮಸೀದಿಯ ಧ್ವಂಸ ಘಟನೆಗೆ 29 ವರ್ಷ. 1992 ರಲ್ಲಿ ಹಿಂದೂ ಕರಸೇವಕರು ಬಾಬರಿ ಮಸೀದಿ ಧ್ವಂಸ ಮಾಡಿದ್ದು ದೇಶಾದ್ಯಂತ ಕೋಮು ಹಿಂಸಾಚಾರವನ್ನು ಪ್ರಚೋದಿಸಿತು. ಇದು 2,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಬಾಬರಿ ಮಸೀದಿ ಧ್ವಂಸಗೊಂಡು 29 ವರ್ಷಗಳಾಗಿದ್ದರೂ, ಘಟನೆಯನ್ನು ಸ್ವಾತಂತ್ರ್ಯದ ನಂತರ ಭಾರತದ ಕರಾಳ ದಿನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಅಯೋಧ್ಯೆಯಲ್ಲಿ ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ಮಸೀದಿಯಿತ್ತು ಎಂದರೆ ಅದು ಬಾಬ್ರೀ ಮಸೀದಿ. ಈ ಬಾಬ್ರೀ ಮಸೀದಿಯನ್ನು ಮಸ್ವಿದ್-ಇ-ಜನ್ಮಸ್ಥಾನ್, ಜಾಮೀಮಸೀದಿ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಆ ಸ್ಥಳದಲ್ಲಿ ದೇವಸ್ಥಾನ ಇದ್ದಿದ್ದೆ ಹಿಂದೂ ಹಾಗೂ ಮುಸ್ಲಿಮರ ಮನಸ್ಥಾಪಕ್ಕೆ ಕಾರಣವಾಗಿದ್ದು, ಆ ಸ್ಥಳದಲ್ಲಿ ಹಿಂದೂ ಮತ್ತು ಮುಸ್ಲೀಮರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ದೇಗುಲ ನೆಪ ಮಾಡಿಕೊಂಡು ಹಿಂದೂ ಮತ್ತು ಮುಸಲ್ಮಾನರಿಗೆ ಮನಸ್ಥಾಪ ಉಂಟಾಗುವಂತೆ ಮಾಡಿದ್ದು ಹಿಂದೂಪರ ಸಂಘಟನೆಗಳು. ಕೋಮುವಾದದ ಬೆಂಕಿಯನ್ನು ಬಾಬ್ರೀ ಮಸೀದಿಯನ್ನು ಧ್ವಂಸಮಾಡುವ ಮೂಲಕ ಹಚ್ಚಿದರು. ಆ ಮೂಲಕ ಆತನಕವೂ ಇಲ್ಲದಿದ್ದ ಧರ್ಮ ಕಲಹ ಮೊಳಕೆಯೊಡೆಯಿತು. ಅದಕ್ಕೆ ಅವರು ನೆಪ ಮಾಡಿಕೊಂಡಿದ್ದು ರಾಮ ಮಂದಿರ ಘೋಷಾವಾಕ್ಯವನ್ನು.

1949 ರಲ್ಲಿ, ಕೆಲವು ಹಿಂದೂ ಗುಂಪುಗಳು ಮಸೀದಿಯನ್ನು ಪ್ರವೇಶಿಸಿ ರಾಮನ ವಿಗ್ರಹಗಳನ್ನು ಇರಿಸಿದವು. ಅದೇ ವರ್ಷದ ನಂತರ ಸರ್ಕಾರವು ಈ ಪ್ರದೇಶವನ್ನು ವಿವಾದಿತ ಎಂದು ಘೋಷಿಸಿತು ಮತ್ತು ಆವರಣಕ್ಕೆ ಗೇಟ್‌ಗಳನ್ನು ಲಾಕ್ ಮಾಡಿತು.

1950 ರಲ್ಲಿ ರಾಮ್‌ ಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಗೋಪಾಲ್‌ ಸಿಮ್ಲಾ ವಿಶಾರದ್‌ ಅವರು ಫೈಜಾಬಾದ್‌ ಸಿವಿಲ್‌ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದರು. ಪೂಜೆ ಸಲ್ಲಿಸಲು ಅವಕಾಶ ಕೊಡಿ ಎಂದು ಪರಮಹಂಸ ರಾಮಚಂದ್ರ ದಾಸ್‌ ಅವರಿಂದ ಅರ್ಜಿ ಸಲ್ಲಿಸಲಾಯಿತು.

1959 ರಲ್ಲಿ ವಿವಾದಿತ ಭೂಮಿಯ ಹಕ್ಕು ತಮಗೆ ನೀಡುವಂತೆ ನಿರ್ಮೋಹಿ ಅಖಾಡ ಅರ್ಜಿ ಸಲ್ಲಿಸುತ್ತಾರೆ.

1961 ರಲ್ಲಿ ಉತ್ತರ ಪ್ರದೇಶದ ಸೆಂಟ್ರಲ್‌ ವಕ್ಫ್‌ ಮಂಡಳಿಯಿಂದಲೂ ಅರ್ಜಿ ಸಲ್ಲಿಸಲಾಗುತ್ತದೆ.

1986 ಬೀಗ ತೆಗೆಯಲು ನ್ಯಾಯಾದೀಶರ  ಆದೇಶ

1989 ರಲ್ಲಿ ವಿವಾದಿತ ಜಾಗದ ಬಗ್ಗೆ ಇದ್ದ  ಬಾಕಿ ಇದ್ದ ಅರ್ಜಿ ಹೈಕೋರ್ಟ್‌ ಸುಪರ್ದಿಗೆ

1990 ರಲ್ಲಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಮೊದಲ ರಥಯಾತ್ರೆ ‘ರಾಮ ರಥಯಾತ್ರೆ’ ರಾಮ ಜನ್ಮ ಭೂಮಿಯನ್ನು ಸ್ವತಂತ್ರಗೊಳಿಸುವ ಉದ್ದೇಶಗೊಳೊಂದಿಗೆ ಬಿಜೆಪಿ 1990 ಸೆಪ್ಟೆಂಬರ್ 25 ರಂದು ಗುಜರಾತ್ನ ಸೋಮನಾಥದಲ್ಲಿ ರಥಯಾತ್ರೆಗೆ ಚಾಲನೆ ನೀಡಿದರು.

1992, ಡಿಸೆಂಬರ್ 6, ದೇಶದ ಮೂಲೆ ಮೂಲೆಗಳಿದ ಉತ್ತರ ಪ್ರದೇಶದ ಅಯೋಧ್ಯೆಗೆ ಕರಸೇವಕರ ದಂಡು ತೆರಳಿತು. ವಿಎಚ್ಪಿ, ಶಿವಸೇನೆ, ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಅಲ್ಲಿ ನೆರೆದಿದ್ದರು. ನೋಡ ನೋಡುತ್ತಿದ್ದಂತೆಯೇ ಕರಸೇವಕರ ಸೇನೆ ರಾಮ್ಕೋರ್ಟ್ ಪರ್ವತ ಏರಿ ಸಂಜೆಯ ಸೂರ್ಯ ಬಾನಂಚು ಸೇರುವುದೊಳಗೆ ಬಾಬರಿ ಮಸೀದಿಯ ಮೂರು ಗುಮ್ಮಟಗಳನ್ನು ನೆಲಕ್ಕುರುಳಿಸಿದರು. ಅವಶೇಷಗಳಡಿ ಸಿಕ್ಕಿ ಕೆಲ ಕರಸೇವಕರು ಪ್ರಾಣಬಿಟ್ಟರು.

ಇದನ್ನೂ ಓದಿ : ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸಿಬಿಐ ಕೋರ್ಟ್ ತೀರ್ಪು ಅಚ್ಚರಿ ಎಂದ ಮಾಜಿ ಗೃಹ ಕಾರ್ಯದರ್ಶಿ

ಪಿ.ವಿ.ನರಸಿಂಹರಾವ್ ನೇತೃತ್ವದ ಕೇಂದ್ರ ಸಕರ್ಾರ ಉತ್ತರ ಪ್ರದೇಶದ ಕಲ್ಯಾಣ್ಸಿಂಗ್ ಅವರ ಬಿ.ಜೆ.ಪಿ ಸರ್ಕಾರವನ್ನು ವಜಾಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಿತು. ಬಾಬ್ರಿ ಮಸೀದಿ ಬೆನ್ನಲ್ಲೆ ದೇಶದಾದ್ಯಂತ ಕೋಮುಗಲಭೆಗಳು ಆರಂಭವಾದವು. ಅಯೋಧ್ಯೆಗೆ ತೆರಳಿದ ಕರ ಸೇವಕರು ತವರಿಗೆ ಬಂದು ಸೇರುವುದಕ್ಕೂ ಮುನ್ನವೇ ಅವರ ಊರು ಹೊತ್ತಿ ಉರಿಯುತ್ತಿದ್ದವ್ತು. ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲೂ ಎರಡು ಕೋಮುಗಳ ನಡುವೆ ಸಂಘರ್ಷ ನಡೆಯಿತು. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಗುಲ್ಬರ್ಗ, ಬೀದರ್, ಹುಬ್ಬಳ್ಳಿ, ಧಾರವಾಡ, ದ.ಕನ್ನಡ, ರಾಯಚೂರು, ಚಿತ್ರದುರ್ಗ, ಮಂಡ್ಯ ಮತ್ತು ತುಮಕೂರು ಸೇರಿದಂತೆ ಕೋಮು ಗಲಭೆಗಳು ನಡೆದವು ಡಿ.7 ರಂದು ಆರಂಭವಾದ ಕರ್ನಾಟಕದಲ್ಲಿನ ಹಿಂಸಾಚಾರವು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯಿತು. ಇದಕ್ಕೆ 78 ಮಂದಿ ಬಲಿಯಾಗಿದ್ದರು, ಅದರಲ್ಲಿ ಪೊಲೀಸರ ಗುಂಡಿಗೆ ಬಲಿಯಾದವರು 33 ಜನ. ಒಟ್ಟಾರೆ ದೇಶದಾಧ್ಯಂತ ಈ ಕೋಮುಗಲಭೆಯಿಂದ ಸುಮಾರು 2000ಕ್ಕು ಹೆಚ್ಚು ಜನರು ಪ್ರಾಣಬಿಟ್ಟರು. ಇದಾದ ನಂತರ 1996ರಲ್ಲಿ ಕೇಂದ್ರದಲ್ಲಿ ಮೊದಲಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂತು. ಅಟಲ್ಬಿಹಾರಿ ವಾಜಪೇಯಿ ಪ್ರಧಾನಿಯಾದರು.

16 ಡಿಸೆಂಬರ್ 1992 ರಂದು ನ್ಯಾಯಮೂರ್ತಿ ಲಿಬ್ಹರಾನ್ ನೇತೃತ್ವದಲ್ಲಿ ಬಾಬ್ರಿ ಮಸೀದಿ ಧ್ವಂಸ ಕುರಿತು ತನಿಖೆಗಾಗಿ ಆಯೋಗವೊಂದನ್ನು ರಚಿಸಲಾಯಿತು. ಆಯೋಗಕ್ಕೆ ಮೊದಲ ಆದೇಶದಲ್ಲಿ ನೀಡಿದ್ದು ಮೂರೇ ತಿಂಗಳ ಅವಧಿ. ಆದರೆ ಪ್ರಧಾನಿಯ ಕೈಗೆ ನ್ಯಾಯಮೂರ್ತಿ ಲಿಬ್ಹರಾನ್ ವರದಿಯನ್ನು ಒಪ್ಪಿಸಿದ್ದು ಅದಾದ ಹದಿನೇಳು ವರ್ಷಗಳ ನಂತರ, 48 ಬಾರಿ ಕೇಂದ್ರ ಸರ್ಕಾರ ಆಯೋಗದ ಅವಧಿಯನ್ನು ವಿಸ್ತರಿಸಬೇಕಾಯಿತು. ವರದಿಯು 900 ಕ್ಕು ಹೆಚ್ಚು ಪುಟ್ಳನ್ನು ಒಳಗೊಂಡಿದ್ದು ಆಯೋಗದ ಕಾರ್ಯಕಲಾಪಕ್ಕೆ ಸುಮಾರು 8 ಕೋಟಿ ವೆಚ್ಚವಾಗಿದೆ. ಲಿಬ್ಹರಾನ್ ವರದಿಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಸಚಿವ ಮುರುಳಿ ಮನೋಹರ ಜೋಶಿ, ಉಮಾಭಾರತಿ ಇವರು ಧ್ವಂಸಕ್ಕೆ ನೇರ ಕಾರಣರು, ಇದಲ್ಲದೆ ಮಸೀದಿ ಧ್ವಂಸ ತಡೆಯಲು ಅಂದಿನ ಕಾಂಗ್ರೆಸ್ ಸರ್ಕಾರ ಪ್ರಧಾನಿಯಾದ ನರಸಿಂಹರಾವ್ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಅಡ್ವಾಣಿ ರಥಯಾತ್ರೆ ಮಾಡಿದ್ದು ತಪ್ಪು. ಇಡೀ ಘಟನೆಯಲ್ಲಿ ವಿ ಎಚ್ ಪಿ ನಾಯಕರ ಪಾತ್ರ ಪ್ರಮುಖ ಎಂದು ಹೇಳಿತು.

 

2010 ಸೆಪ್ಟೆಂಬರ್ 30 ರಂದು ಅಲಹಬಾದ್ ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿತು. ನ್ಯಾಯಮೂರ್ತಿಗಳಾದ ಡಿ.ವಿ.ಶರ್ಮಾ, ಸುಧೀರ್ ಅಗರವಾಲ್ ಮತ್ತು ಎಸ್.ಯು ಖಾನ್ ಅವರಿದ್ದ ತ್ರಿಸದಸ್ಯ ಪೀಠ 2-1 ರ ಆಧಾರದ ಮೇಲೆ 2.77 ಎಕರೆ ಮಸೀದಿ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿತು. ಹಿಂದೂ ಮಹಾಸಭಾ ಪ್ರತಿನಿಧಿತ್ವದ ರಾಮಲಲ್ಲ, ಇಸ್ಲಾಂ ಪ್ರತಿನಿಧಿತ್ವದ ಸುನ್ನಿವಕ್ಫ್ ಮಂಡಳಿ ಹಾಗೂ ನಿರ್ಮೋಹಿ ಅಖಾಡಕ್ಕೆ ಸೇರಿದಂತೆ ಮೂರು ಭಾಗಮಾಡಿತು.

2010 ರ ಅಲಹಬಾದ್ ಕೋರ್ಟ್ ನ ತೀರ್ಪನ್ನು ಒಪ್ಪದ ರಾಮಲಲ್ಲ ಮತ್ತು ಸುನ್ನಿವಕ್ಫ್ ಬೋರ್ಡ್ ಇಬ್ಬರೂ ಸೇರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು 8 ವರ್ಷಗಳ ಸುಧೀರ್ಘ ವಿಚಾರಣೆಯ ನಂತರ 2019ಕ್ಕೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ಎಸ್.ಎ.ಬೊಬ್ಬೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಎ.ನಝೀರ್ ಅವರನ್ನೊಳಗೊಂಡ ಪೀಠ ತನ್ನ ತೀರ್ಪನ್ನು ಪ್ರಕಟಿಸಿತು. ಈ ಹಿಂದೆ ಅಲಹಬಾದ್ ಹೈಕೋರ್ಟ್ ಮೂವರಿಗು ಸಮನಾಗಿ ಹಂಚಿದರೆ ಸುಪ್ರೀಂಕೋರ್ಟ್ 2.77 ಎಕರೆ ಮಸೀದಿಯ ಜಾಗವನ್ನು ಮಂದಿರ ಕಟ್ಟಲು ಹಸ್ತಾಂತರಿಸಿ ಮಸೀದಿ ಕಟ್ಟಲು ಬೇರೆ ಕಡೆ ಭೂಮಿಯನ್ನು ನೀಡಲು ತೀರ್ಪು ನೀಡಿತು.

1992 ಡಿಸೆಂಬರ್ 6 ರಂದು ಅಡ್ವಾಣಿ ನೇತೃತ್ವದ ರಾಮರಥಯಾತ್ರೆಯ ಮೂಲಕ ಬಂದ ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದರು ಎಂಬುದು ಇಂದಿಗೂ ಅಂತರಾಷ್ಟ್ರೀಯ ವಿಚಾರ. ಈ ಒಂದು ಘಟನೆಯಿಂದ ದೇಶದಾಧ್ಯಂತ ಗಲಭೆಗಳು ನಡೆದಿವೆ 2000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸುಧೀರ್ಘವಾಗಿ 28 ವರ್ಷಗಳ ವಿಚಾರಣೆ ನಡೆದಿದೆ ಎರಡು ಬಾರಿ ಕೋರ್ಟ್ ತೀರ್ಪು ನಿಡಿವೆ. ಈಗಿರುವಾಗ ಮಸೀದಿಯ ಧ್ವಂಸಕ್ಕೆ ಯಾರು ಕಾರಣ ಎಂಬುದು ತನಿಖೆಯಲ್ಲಿ ತಿಳಿಯಲೇ ಇಲ್ಲವೆ? ವಿಚಾರಣೆಯಲ್ಲಿದ್ದವರೆಲ್ಲಾ ನಿರ್ದೋಷಿಗಳು ಎಂದಾದ ಮೇಲೆ ಮಸೀದಿ ಧ್ವಂಸ ಮಾಡಿದವರು ಯಾರು?  ಕೋಮು ಗಲಬೆಗೆ ಕಾರಣವಾದವರು ಹೇಗೆ ಬಚಾವಾದರು ಎಂಬ ಪ್ರಶ್ನೆ ಜನರನ್ನು ಇನ್ನೂ ಕಾಡುತ್ತಿದೆ.

Donate Janashakthi Media

Leave a Reply

Your email address will not be published. Required fields are marked *