ಮರ್ಯಾದೆಗೇಡು ಹತ್ಯೆ: ಆರೋಪಿಗಳ ಬಂಧನಕ್ಕೆ ಒತ್ತಾಯ

  • ದಲಿತ ಸಂಘರ್ಷ ಸಮಿತಿ ಒಕ್ಕೂಟ, ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಮಂಡ್ಯ: ಪಾಂಡವಪುರ ತಾಲ್ಲೂಕು ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ಒಕ್ಕೂಟ, ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಪೊಲೀಸರ ವಿರುದ್ಧ ದಿಕ್ಕಾರ ಕೂಗಿದರು. ಗಂಭೀರ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ. ಇಲ್ಲಿಯವರೆಗೂ ಯಾವೊಬ್ಬ ಆರೋಪಿಯನ್ನು ಬಂಧಿಸಿಲ್ಲ. ಹತ್ಯೆಗೀಡಾದ ಯುವತಿಯ ತಾಯಿಯನ್ನೇ ಪ್ರಶ್ನೆ ಮಾಡುತ್ತಿರುವ ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಳವಳ್ಳಿ ತಾಲ್ಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹಾದೇವಮ್ಮ ಅವರ ಪುತ್ರಿ ಹಾಗೂ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ ಬೆಂಗಳೂರಿನಲ್ಲಿದ್ದಾಗ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಇದು ಮರ್ಯಾದೆಗೇಡು ಹತ್ಯೆಯಾಗಿದ್ದು ಇದಕ್ಕೆ ಸಾಕ್ಷ್ಯಗಳಿದ್ದರೂ ಪೊಲೀಸರು ಅವುಗಳನ್ನು ಪರಿಗಣಿಸಿಲ್ಲ. ಡಿವೈಎಸ್‌ಪಿ ಅವರು ಯುವತಿಯ ತಾಯಿಗೆ ಸಮಾಧಾನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿಲ್ಲ. ಮಹಾದೇವಮ್ಮ ಅವರನ್ನೇ ಆರೋಪಿಯಂತೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿರುವ ಡಿವೈಎಸ್‌ಪಿಯನ್ನು ಬದಲಾವಣೆ ಮಾಡಿ ಸಮರ್ಥ ಪೊಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಣ್ಗಾವಲಿನಲ್ಲೇ ಸೂಕ್ತ ತನಿಖೆ ನಡೆಸಬೇಕು. ಜಾತಿ ಕಾರಣಕ್ಕೆ ಯುವತಿಯನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮರ್ಯಾದೆಗೇಡು ಹತ್ಯೆಗಳು ಮರುಕಳಿಸುತ್ತಿವೆ. ಇದಕ್ಕೆ ಪೊಲೀಸರು ಸೂಕ್ತ ರೀತಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಕಾರಣವಾಗಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳು ಕೆಲವೇ ದಿನಗಳಲ್ಲಿ ಕಾರಗೃಹದಿಂದ ಹೊರಬಂದಿದ್ದಾರೆ. ಈ ಪ್ರಕರಣ ಕೂಡ ಅದೇ ಹಾದಿ ಹಿಡಿಯುತ್ತಿದೆ. ಮಗಳನ್ನು ಕಳೆದುಕೊಂಡಿರುವ ಮಹಾದೇವಮ್ಮ ಅವರಿಗೆ ಪೊಲೀಸರು ನ್ಯಾಯ ಕೊಡಿಸಬೇಕು. ಮುಗ್ಧ ಯುವತಿಯ ಸಾವಿನ ವಿರುದ್ಧದ ಹೋರಾಟಕ್ಕೆ ಜಿಲ್ಲೆಯ ಜನರು ಕೈಗೂಡಿಸಲಿದ್ದಾರೆ ಎಂದರು.

ಯುವತಿಯ ತಾಯಿ ಮಹದೇವಮ್ಮ ಮಾತನಾಡಿ ‘ಮಗಳು ಪ್ರೀತಿಸಿ ಮದುವೆಯಾದ ನಂತರ ಆಕೆಯ ಬಗ್ಗೆ ಮಾಹಿತಿ ಇರಲಿಲ್ಲ. ಎಲ್ಲೋ ಬದುಕಲಿ ಎಂದು ಸುಮ್ಮನಾಗಿದ್ದೆ. ಆದರೆ ಆಕೆ ಮೃತಪಟ್ಟಿದ್ದಾಳೆ ಎಂಬ ವಿಚಾರ ತಿಳಿದ ನಂತರ ತಡೆಯಲು ಸಾಧ್ಯವಾಗಲಿಲ್ಲ. ತಿರುಮಲಾಪುರ ಗ್ರಾಮಕ್ಕೆ ಭೇಟಿ ನೀಡಿದಾಗ ಆಕೆಯನ್ನು ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂಬ ಗ್ರಾಮಸ್ಥರು ತಿಳಿಸಿದರು. ಪೊಲೀಸ್‌ ಠಾಣೆಗೆ ದೂರು ಕೊಡಲು ಹೋದರೆ ಇಲ್ಲಸಲ್ಲದ ಪ್ರಶ್ನೆ ಕೇಳಿ ಭಯ ಹುಟ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಮಗಳ ಭಾವಚಿತ್ರ ತೋರಿಸಿ ಅವರು ಕಣ್ಣೀರಿಟ್ಟರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ, ದಸಂಸ ರಾಜ್ಯ ಘಟಕದ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ಕೆಂಪಯ್ಯ ರಮಾನಂದ, ಹುರುಗಲವಾಡಿ ರಾಮಯ್ಯ, ಶೋಭಾ, ಸುಶೀಲಾ, ಮಂಜುಳಾ, ದೇವರಾಜು, ಪೂರ್ಣಿಮಾ, ಆರ್.ಕೃಷ್ಣ ಇದ್ದರು.

Donate Janashakthi Media

Leave a Reply

Your email address will not be published. Required fields are marked *