ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್‌ ಬಂಧನ: ಅಮಿತ್‌ ಶಾ, ಜಾವಡೇಕರ್‌, ಸ್ಮೃತಿ ಇರಾನಿ ಖಂಡನೆ

 ನವದೆಹಲಿ: ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿರುವ ಮಹಾರಾಷ್ಟ್ರ ಪೊಲೀಸರ ಕ್ರಮದ ವಿರುದ್ಧ ಕೇಂದ್ರ ಸಚಿವರಾದ ಅಮಿತ್‌ ಶಾ,ಪ್ರಕಾಶ್ ಜಾವಡೇಕರ್‌, ಸ್ಮೃತಿ ಇರಾನಿ ಮತ್ತು ರವಿಶಂಕರ ಪ್ರಸಾದ್ ಖಂಡಿಸಿದ್ದಾರೆ. 

ಈ ವಿಚಾರವಾಗಿ ಬುಧವಾರ ಟ್ವೀಟ್‌ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‍ ಶಾ, ‘ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಅಣಕಿಸುವ ಕೆಲಸ ಮಾಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಗೋಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭದ ಮೇಲೆ ನಡೆದ ದಾಳಿಯಾಗಿದೆ.   ಅರ್ನಬ್‌ ಅವರನ್ನು ವಶಕ್ಕೆ ಪಡೆದಿರುವ ಘಟನೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ. ಮುಕ್ತ ಮಾಧ್ಯಮಗಳ ಮೇಲಿನ ದಾಳಿಯನ್ನು ವಿರೋಧಿಸಬೇಕಿದೆ’ ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಾವಡೇಕರ್, ‘ಮಹಾರಾಷ್ಟ್ರ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಸಿದ ದಾಳಿ’ ಎಂದು ಬಣ್ಣಿಸಿದ್ದು ‘ಇದು ತುರ್ತುಪರಿಸ್ಥಿತಿ ದಿನಗಳನ್ನು ನೆನಪಿಸುತ್ತದೆ ಎಂದಿದ್ದಾರೆ. ‘ಮಹಾರಾಷ್ಟ್ರದಲ್ಲಿ ನಡೆದಿರುವ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಈ ರೀತಿ ಮಾಧ್ಯಮದೊಂದಿಗೆ ನಡೆದುಕೊಳ್ಳುವುದು ಸರಿಯಾದ ವಿಧಾನ ಅಲ್ಲ. ಮಾಧ್ಯಮದ ಮೇಲೆ ನಡೆದಿರುವ ಈ ದಾಳಿ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಅರ್ನಬ್ ಬಂಧನ ಖಂಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ, ‘ಪತ್ರಿಕಾ ಸ್ವಾತಂತ್ರ್ಯದ ಪರ ನಿಲ್ಲುವವರು, ಈ ಕ್ರಮವನ್ನು ಖಂಡಿಸಬೇಕು. ಇಲ್ಲದಿದ್ದರೆ, ನೀವು ಮೌನವಾಗಿ ಫ್ಯಾಸಿಸಂ ಅನ್ನು ಬೆಂಬಲಿಸುತ್ತೀರಿ ಎಂದು ಅರ್ಥವಾಗುತ್ತದೆ‘ ಎಂದು ಹೇಳಿದ್ದಾರೆ.

‘ನೀವು ಅರ್ನಬ್‌ ಗೋಸ್ವಾಮಿಯನ್ನು ಇಷ್ಟಪಡದಿರಬಹುದು. ಅವರ ನಡೆಯನ್ನು ಒಪ್ಪದಿರಬಹುದು. ಆದರೆ, ಪತ್ರಿಕಾ ಸ್ವಾತಂತ್ರ್ಯದ ಪರ ಇರುವಂಥವರು, ಈ ಸಮಯ ದಲ್ಲಿ, ಅವರ ಬಂಧನವನ್ನು ಖಂಡಿಸದೇ ಮೌನವಾಗಿದ್ದರೆ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪರವಿದ್ದೀರಿ ಎಂದಾಗುತ್ತದೆ. ನೀವೇ ಮೌನವಾಗಿದ್ದರೆ, ಮುಂದೆ ನಿಂತು ಯಾರು ಮಾತನಾಡುತ್ತಾರೆ ಎಂದು ಸ್ಮೃತಿ ಇರಾನಿ ಮಾಧ್ಯಮದವರನ್ನು ಪಶ್ನಿಸಿದ್ದಾರೆ.

‘ಇದು ಮಹಾರಾಷ್ಟ್ರ ಸರ್ಕಾರದ ಆಕ್ಷೇಪಾರ್ಹ ನಡೆ. ಆತಂಕಕಾರಿ ಬೆಳವಣಿಗೆ‘ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಅರ್ನಬ್ ಬಂಧನಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಮಹಾರಾಷ್ಟ್ರ ಸಿಐಡಿ  ವಶಕ್ಕೆ

‘1975ರಲ್ಲಿ ನಾವು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದೇವೆ. ಈಗ ಅದೇ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ‘ ಎಂದು ಸರಣಿ ಟ್ವೀಟ್ ಮಾಡಿರುವ ಪ್ರಸಾದ್‌, ಇದೇ ವೇಳೆ ಕಾಂಗ್ರೆಸ್‌ ನಾಯಕತ್ವದ ಮೌನವನ್ನು ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ಮೇಲೆ ‘ಪ್ರಚೋದಿತ ಆರೋಪಗಳೊಂದಿಗೆ ದಾಳಿ ನಡೆಸುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ತಮ್ಮದೇ ಸರ್ಕಾರ ‘ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ದಯವಾಗಿ ಹತ್ತಿಕ್ಕುತ್ತಿದ್ದರೂ, ಅವರು ಸಂಪೂರ್ಣವಾಗಿ ಮೌನವಾಗಿದ್ದಾರೆ‘ ಎಂದು ಆರೋಪಿಸಿದ್ದಾರೆ.

53 ವರ್ಷದ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಕರಣದ ಆರೋಪದ ಮೇಲೆ ಅರ್ನಬ್ ಗೋಸ್ವಾಮಿಯನ್ನು ಬುಧವಾರ ಮುಂಬೈನ ಅಲಿಬಾಗ್‌ ಪೊಲೀಸರು ಬಂಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *