ಇಂದೋರ್ : ಕಲುಷಿತ ನೀರು ದುರಂತದಲ್ಲಿ ಇಂದೋರ್‌ನ ಭಗೀರಥಪುರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿದ್ದು, 26 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಆದರೆ, ಇಂದು ದುರಂತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಂಡಿದೆ. ನಿನ್ನೆಯವರೆಗೂ ಏಳು ಮಂದಿ ಮೃತರಾಗಿದ್ದರು. ಆದರೆ, ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಲು ನಿರಾಕರಿಸಿತ್ತು. ಆದರೂ, ಈ ಅಂಕಿ ಅಂಶದ ಬಗ್ಗೆ ಅನುಮಾನಗಳಿದ್ದು, ಸಾವಿನ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ.
ಇದನ್ನೂ ಓದಿ : ಜೈಪುರ | ರಾಜಸ್ಥಾನದಲ್ಲಿ ಹಾಲು ಕುಡಿದು ವಿಶೇಷ ಸಂದೇಶದೊಂದಿಗೆ ಹೊಸ ವರ್ಷಾಚರಣೆ
ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ ಅವರು ನಿನ್ನೆಯೇ ಏಳು ಸಾವಾದ ಬಗ್ಗೆ ಒಪ್ಪಿಕೊಂಡಿದ್ದರು. ಆರೋಗ್ಯ ಇಲಾಖೆ ಕಲುಷಿತ ನೀರು ದುರಂತದಲ್ಲಿ ನಾಲ್ವರು ಮಾತ್ರ ಸಾವಿಗೀಡಾದ ಬಗ್ಗೆ ತಿಳಿಸಿದೆ. ಉಳಿದ ಸಾವು ಕಲುಷಿತ ನೀರಿಗೆ ಲಿಂಕ್ ಮಾಡಲು ನಿರಾಕರಿಸಿತು. ಜಿಲ್ಲಾಧಿಕಾರಿ ಶಿವಂ ವರ್ಮಾ ಅವರು ಮೊದಲು ನಾಲ್ವರು ಮೃತಪಟ್ಟ ಬಗ್ಗೆ ತಿಳಿಸಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಐದು ತಿಂಗಳ ಮಗು ಸೇರಿದಂತೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದರು.
ಮುಖ್ಯ ಆರೋಗ್ಯಾಧಿಕಾರಿ ಡಾ. ಮಾಧವ್ ಹಸಾನಿ ಅವರ ಪ್ರಕಾರ, ಮೊದಲು ಮೂವರು ಮೃತಪಟ್ಟಿದ್ದರು. ನಂತರ ನಾಲ್ವರು ಅನಾರೋಗ್ಯಕ್ಕೀಡಾಗಿದ್ದರು. ಈ ಪೈಕಿ ಮೂವರು ರೋಗಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ಒಬ್ಬರು ಮನೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಒಬ್ಬರು ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಇನ್ನೂ, 26 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕತ್ಸೆ ನೀಡಲಾಗುತ್ತಿದೆ. ದಾಖಲಾದ ಉಳಿದ 162 ರೋಗಿಗಳ ಆರೋಗ್ಯ ಸ್ಥಿರವಾಗಿದೆ. ಆದರೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದರೆ, ಓರ್ವ ಎಂಜಿನಿಯರ್ರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇದನ್ನೂ ನೋಡಿ : ಉತ್ತರ ಪ್ರದೇಶದ ಬುಲ್ಡೋಜರ್ ನೀತಿ ಕರ್ನಾಟಕಕ್ಕೂ ಬೀಸಿತೆ!? Janashakthi Media
