ಬೆಂಗಳೂರು : ಪಠ್ಯಪುಸ್ತಕ, ನೋಟ್‌ಪುಸ್ತಕಗಳನ್ನು ನೀಡದೆ ಶಾಲೆಗಳನ್ನು ಆರಂಭವಿಸುವುದರ ಅಗತ್ಯವಿತ್ತೆ ಎಂದು ಹೈಕೋರ್ಟ್ ಸರಕಾರವನ್ನು ಪ್ರಶ್ನಿಸಿದೆ.
ಶಾಲಾ ಅರಂಭ ಹಾಗೂ ಪಠ್ಯಪುಸ್ತಕಗಳ ವಿತರಣೆ ಒಟ್ಟಿಗೆ ನಡೆಯಬೇಕು. ಇದೆರಡೂ ಹೊಂದಾಣಿಕೆಯಾಗಬೇಕು. ಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಪ್ರಕ್ರಿಯೆ ಅರ್ಥಹೀನ ಎಂದು ಸರಕಾರಕ್ಕೆ ಚಾಟಿ ಬೀಸಿದೆ.
ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೃಷ್ಣ ಪಿ ಭಟ್ ಅವರಿದ್ದ ವಿಭಾಗೀಯ ಪೀಠವು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಕೇಳಲು ಅನುವಾಗುವಂತೆ ಇಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಮನವಿಯ ವಿಚಾರಣೆಯನ್ನು ನಡೆಸಿತು. ಈ ವೇಳೆ ಪಠ್ಯಪುಸ್ತಕ ಹಾಗೂ ನೋಟ್ ಪುಸ್ತಕಗಳನ್ನು ವಿತರಣೆಯನ್ನು ಮಾಡದೆ ಶಾಲೆಗಳನ್ನು ಆರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯಾದ್ಯಂತ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಪರ ವಕೀಲರು ನೀಡಿದ ಮಾಹಿತಿಯಿಂದ ತೃಪ್ತವಾಗದ ಪೀಠವು, “ಪಠ್ಯಪುಸ್ತಕ, ನೋಟ್ ಪುಸ್ತಕಗಳಿಲ್ಲದೆ ಅವರು (ವಿದ್ಯಾರ್ಥಿಗಳು) ಶಾಲೆಗೆ ಬರುವುದರ ಉಪಯೋಗವಾದರೂ ಏನು?” ಎಂದು ಪ್ರಶ್ನಿಸಿತು.
ಮುಂದುವರೆದು ತನ್ನ ಆದೇಶದಲ್ಲಿ ಅದು ಹೀಗೆ ದಾಖಲಿಸಿತು, “ಪುಸ್ತಕಗಳ ವಿತರಣೆಯ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಸೆಪ್ಟೆಂಬರ್ ಅಂತ್ಯದ ವೇಳೆಗೆ ನೀಡಲಾಗುವುದು ಎಂದಿದ್ದಾರೆ. 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಆಗಸ್ಟ್ 23ರಿಂದ ಆರಂಭವಾಗಿವೆ ಎಂದಾದ ಮೇಲೆ ಅವರಿಗೆ ಪಠ್ಯ ಮತ್ತು ನೋಟ್ ಪುಸ್ತಕಗಳನ್ನು ಒದಗಿಸಬೇಕಾದದ್ದು ಅಗತ್ಯ ಬದ್ಧತೆಯಾಗಿದೆ. ಇದು ಶಾಲೆಯಲ್ಲಿನ ಅವರ ಹಾಜರಾತಿಗೆ ಅರ್ಥಪೂರ್ಣವೂ ಮತ್ತು ಶಿಕ್ಷಣದ ಕಲಿಕೆಗೆ ಉಪಯುಕ್ತವೂ ಆಗಲಿದೆ. ಈ ಸಂಬಂಧ ಎಜಿಎ ಅವರ ಉತ್ತರದಿಂದ ನಾವು ತೃಪ್ತರಾಗಿಲ್ಲ.” ಎಂದಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರಾದ ಹರೀಶ್ ನರಸಪ್ಪ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಕೆಗೆ ಯಾವುದೇ ರೀತಿಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ನೀಡಲಾಗದು ಎಂದು ಸರ್ಕಾರವು ಹೇಳುವ ಮೂಲಕ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ ಎಂದು ವಾದಿಸಿದರು. ಪ್ರಸ್ತುತ ಶಿಕ್ಷಣ ನೀಡುವ ಮಾದರಿಯು ಆನ್‌ಲೈನ್ ಆಗಿದ್ದರೆ, ಸಂವಿಧಾನದ 21 ಎ ವಿಧಿಯಡಿ ಮಕ್ಕಳಿಗೆ ಕಲಿಕೆಗೆ ಟ್ಯಾಬ್ಲೆಟ್‌ಗಳನ್ನು ಒದಗಿಸಬೇಕಾದದ್ದು ಸರ್ಕಾರದ ಬದ್ಧತೆಯಾಗಿರುತ್ತದೆ ಎಂದರು.
ಇನ್ನು ಪಠ್ಯಪುಸ್ತಕಗಳ ಮುದ್ರಣದ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಲಿಕಾ ಅಪ್ಲಿಕೇಷನ್‌ನಲ್ಲಿ ಪಠ್ಯಪುಸ್ತಕಗಳ ಲಭ್ಯತೆಯನ್ನು ಮಾಡುವಂತೆ ಸರ್ಕಾರಕ್ಕೆ ಪೀಠವು ಸೂಚಿಸಿತು. ಇದರಿಂದ ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳಾದರೂ ಪಠ್ಯಪುಸ್ತಕಗಳ ಪ್ರಿಂಟ್‌ಔಟ್ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 30ಕ್ಕೆ ನಿಗದಿಯಾಗಿದೆ.