ಪತ್ರಕರ್ತ ಜುಬೈರ್‌ ಜಾಮೀನು ನಿರಾಕರಣೆ: ಸಾಕ್ಷ್ಯ ನಾಶ, ವಿದೇಶಿ ದೇಣಿಗೆ ಆರೋಪ ಹೊರಿಸಿದ ದೆಹಲಿ ಪೊಲೀಸರು

ನವದೆಹಲಿ: ‘ಆಲ್ಟ್ ನ್ಯೂಸ್’ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಜಾಮೀನು ಅರ್ಜಿ ದೆಹಲಿ ನ್ಯಾಯಾಲಯ ತಿರಸ್ಕರಿಸಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೆಹಲಿ ಪೊಲೀಸರು  ಇನ್ನಷ್ಟು ಮತ್ತಷ್ಟು ಹೊಸ ಪ್ರಕರಣಗಳನ್ನು ದಾಖಲಿಸಿದ್ದಾರೆ. 2018ರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಟ್ವೀಟ್‌ ಸಂದೇಶ ಆಧಾರಿಸಿ ಪೊಲೀಸರು ಇವರನ್ನು ಮೊದಲ ಬಾರಿಗೆ ಬಂಧಿಸಿದ್ದರು. ಈಗ ಸಾಕ್ಷ್ಯ ನಾಶ, ಅಕ್ರಮ ವಿದೇಶಿ ದೇಣಿಗೆ ಪಡೆದ ಆರೋಪ ಹೊರೆಸಿ ಅವರ ವಿರುದ್ಧ ಮತ್ತಷ್ಟು ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ ಜುಬೈರ್‌ಗೆ ಬೆಂಬಲಿಸುವ ಬಹುತೇಕ ಟ್ವೀಟ್‌ಗಳು ಪಾಕಿಸ್ತಾನ, ಯುಎಇ, ಬಹ್ರೇನ್, ಕುವೈತ್ ದೇಶಗಳಿಂದ ಬಂದಿವೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2018ರಲ್ಲಿ ಟ್ವೀಟ್‌ ಮಾಡಿದ್ದ ಆಕ್ಷೇಪಾರ್ಹ ಸಂದೇಶ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ 33 ವರ್ಷದ ಪತ್ರಕರ್ತ ಜುಬೈರ್ ಅವರನ್ನು 2022ರ ಜೂನ್‌ 27ರಂದು ದೆಹಲಿ ಪೊಲೀಸರು ಬಂಧಿಸಿತ್ತು. ಜುಬೈರ್ ಅವರ ಹಿಂದಿನ ಟ್ವೀಟ್ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅವರ ಅನುಯಾಯಿಗಳ ಸಂಖ್ಯೆಯೂ ಹೆಚ್ಚಾಯಿತು. ಈ ಸಂಬಂಧ ಸರಣಿ ಚರ್ಚೆ ಹಾಗೂ ದ್ವೇಷವನ್ನು ಹುಟ್ಟು ಹಾಕಿದೆ ಎಂಬ ಆರೋಪ ದಾಖಲಾಗಿದೆ.

ಇದನ್ನೂ ಓದಿ :  ‘ಆಲ್ಟ್ ನ್ಯೂಸ್‍’ ನ ಜುಬೇರ್ ಬಂಧನಕ್ಕೆ ಪತ್ರಕರ್ತರ ಸಂಘಟನೆಗಳ ತೀವ್ರ ಖಂಡನೆ

ಮೊಹಮ್ಮದ್‌ ಜುಬೈರ್ ಅವರನ್ನು ಜೂನ್‌ 27ರಂದು ಬಂಧಿಸಲಾಗಿತ್ತು. ಅವರ ವಿರುದ್ಧ ಐಪಿಸಿ ಸೆಕ್ಷನ್‌ 153ಎ (ಧಾರ್ಮಿಕ, ಜನಾಂಗೀಯ, ಹುಟ್ಟಿದ ಸ್ಥಳ, ಭಾಷೆಯ ಹಿನ್ನೆಲೆಯಲ್ಲಿ ಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಹರಡುವುದು) ಹಾಗೂ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರನ್ನು ಬೆಂಗಳೂರಿನ ಮನೆಗೆ ಕರೆತಂದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು.

ಬಂಧನದ ದಿನವೇ ವಿಚಾರಣಾ ನ್ಯಾಯಾಲಯ ಅವರನ್ನು ಒಂದು ದಿನದ ಪೊಲೀಸರ ವಿಚಾರಣೆ ನೀಡಿತು. ಅದರ ಬೆನ್ನಲ್ಲಿಯೇ ದೆಹಲಿ ಪೊಲೀಸರು ವಿಚಾರಣೆ ಸಂಬಂಧ ಐದು ದಿನಗಳ ಸುಪರ್ದಿಗೆ ವಹಿಸುವಂತೆ ಮನವಿ ಮಾಡಿದ ಬಳಿಕ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಇನ್ನೂ ನಾಲ್ಕು ದಿನಗಳವರೆಗೆ ಬಂಧನವನ್ನು ವಿಸ್ತರಿಸಿತ್ತು.

 

Donate Janashakthi Media

Leave a Reply

Your email address will not be published. Required fields are marked *