ಪ್ರಜಾಪ್ರಭುತ್ವ ದಿನದ ಅಂಗವಾಗಿ 31 ಜಿಲ್ಲೆಗಳಲ್ಲಿ 2500 ಕಿ.ಮೀ ಬೃಹತ್ ಮಾನವ ಸರಪಳಿಗೆ

ಬೆಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇಂದು ರಾಜ್ಯಾದ್ಯಂತ ಬೀದರ್ನಿಂದ ಚಾಮರಾಜನಗರದವರೆಗೂ 31 ಜಿಲ್ಲೆಗಳಲ್ಲಿ 2,500 ಕಿ.ಮೀ. ಮಾನವ ಸರಪಳಿಯನ್ನು ನಿರ್ಮಿಸಲಾಗಿದೆ. ಪ್ರಜಾಪ್ರಭುತ್ವದ ಆಶಯಗಳಾದ ಸಮಾನತೆ, ಅಸ್ಪಶ್ಯತೆ ನಿವಾರಣೆ, ಸೌಹಾರ್ದತೆ, ಭಾವೈಕ್ಯತೆ, ಕೋಮುವಾದ ಹತ್ತಿಕ್ಕುವುದು ಸೇರಿದಂತೆ ಹಲವು ಆಶಯಗಳೊಂದಿಗೆ ಇಂದು ನಡೆದ ಮಾನವಸರಪಳಿಯಲ್ಲಿ 25 ಲಕ್ಷಕ್ಕೂ ಹೆಚ್ಚು ಅಧಿಕ ಮಂದಿ ಭಾಗವಹಿಸಿದ್ದರು.

ಶಾಲಾ ಮಕ್ಕಳು, ಶಿಕ್ಷಕರು, ಶೈಕ್ಷಣಿಕ ಸಂಸ್ಥೆಗಳ ಎಲ್ಲರನ್ನೂ ತೊಡಗಿಸಿಕೊಳ್ಳಲಾಗಿತ್ತು. ಭಾರೀ ಉದ್ದದ ಈ ಮಾನವ ಸರಪಳಿ ನಿರ್ಮಾಣ ವಿಶ್ವದಾಖಲೆಗೆ ಸೇರ್ಪಡೆಯಾಗಿದೆ.ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ಶೈಲಜಾ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕೀರಣವು ನಡೆಯಿತು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ವೇಳೆ ಪ್ರಜಾಪ್ರಭುತ್ವ ದಿನದ ರಾಯಭಾರಿ ಹರೇಕಳ ಹಾಜಪ್ಪ, ಪೌರ ಕಾರ್ಮಿಕ ತಾಯಂದಿರಾದ ನಾಗಲಕ್ಷಿ, ಮಂಜುಳ ಹಾಗೂ ತೃತೀಯ ಲಿಂಗಿ ಪ್ರಿಯಾಂಕ ಮತ್ತು ಇಬ್ಬರು ವಿಶೇಷ ಚೇತನ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡ-ಬಲದಲ್ಲಿ ನಿಂತು ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣಗೊಳಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮದ್, ಯು.ಬಿ.ವೆಂಕಟೇಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ವಿಶ್ವಸಂಸ್ಥೆಯ ಭಾರತೀಯ ಪ್ರತಿನಿಧಿ ಕೆ.ಪಿ.ಅಶ್ವಿನಿಯವರಿಗೆ ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂವಿಧಾನದ ಪೀಠಿಕೆಯನ್ನು ವಿತರಿಸಿದರು. ಜೊತೆಗೆ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ 10 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೂ ಇದೇ ವೇಳೆ ಸಿದ್ದರಾಮಯ್ಯ ಚಾಲನೆ ನೀಡಿದರು.

 

Donate Janashakthi Media

Leave a Reply

Your email address will not be published. Required fields are marked *