ಜಾರ್ಖಂಡ್ : ತಂದೆ, ತಾಯಿ, ಗಂಡ ಯಾರೇ ಅದ್ರು ಅಂತ್ಯಸಂಸ್ಕಾರವನ್ನ ಪುರುಷರೇ ನೆರವೇರಿಸಬೇಕು, ಚಿಥೆಗೆ ಗಂಡುಮಕ್ಕಳೇ ಬೆಂಕಿ ಇಡಬೇಕು.. ಈ ರೀತಿಯಾದ ಪದ್ದತಿ ರಿವಾಜು ತುಂಬಾನೆ ಹಳೆಯದ್ದು.. ಆದ್ರೆ ಕೆಲವೊಮ್ಮೆ ಪುರುಷರು ಇಲ್ಲದ ಮನೆಯಲ್ಲಿ ಹೆಣ್ಮಕ್ಕಳೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ..
ಅದರಂತೆಯೇ ಜಾರ್ಖಂಡ್ ನಲ್ಲಿಯೂ ಒಂದು ಘಟನೆ ನಡೆದಿದೆ. ತಾಯಿಯ ಅಂತ್ಯಸಂಸ್ಕಾರಕ್ಕೆ ಗ್ರಾಮದ ಪುರುಷರು ಯಾರೊಬ್ಬರೂ ಮುಂದೆ ಬರದಿದ್ದಾಗ ಮೃತ ಮಹಿಳೆಯ ಹೆಣ್ಣು ಮಕ್ಕಳೇ ಅಂತಿಮ ವಿಧಿವಿಧಾನ ಪೂರೈಸಿದ್ದಾರೆ. ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ಟಿಟಿಝರಿಯಾದ ಖಂಡ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಯಾವುದೋ ಒಂದು ವಿಚಾರವಾಗಿ 4 ವರ್ಷಗಳ ಹಿಂದೆ ಮೃತ ಕುಂತಿದೇವಿಯನ್ನ ಗ್ರಾಮದ ಮುಖಂಡರು ತಮ್ಮ ಜಾತಿಯಿಂದ ಬಹಿಷ್ಕಾರ ಹಾಕಿದ್ದರು. 4 ವರ್ಷಗಳಿಂದಲೂ ಗ್ರಾಮಸ್ಥರು ಕುಂತಿದೇವಿ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಬಹಿಷ್ಕಾರ ಹಾಕಿದ್ದರಿಂದ ಕುಂತಿದೇವಿ ಪಂಚತತ್ವದಲ್ಲಿ ವಿಲೀನ ಆಗಿದ್ದರು. ಪತಿ ದಿನಗೂಲಿ ಮಾಡುತ್ತಿದ್ದು, 8 ಹೆಣ್ಣು ಮಕ್ಕಳ ಪೈಕಿ 7 ಜನರ ಮದುವೆ ಮಾಡಿದ್ದರು.
ಕಳೆದ ಕೆಲ ದಿನಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದ ಕುಂತಿದೇವಿ ಇಂದು ವಿಧಿವಶರಾಗಿದ್ದರು. ಆದ್ರೆ ಗ್ರಾಮಸ್ಥರು ಕುಂತಿದೇವಿ ಮನೆಯತ್ತ ಬರದೇ ಸಮುದಾಯದ ಮುಖಂಡರ ಆದೇಶವನ್ನ ಪಾಲಿಸಿದ್ದಾರೆ. ಕೊನೆಗೆ ಹೆಣ್ಮಕ್ಕಳೇ ಸೇರಿ ಮೃತದೇಹವನ್ನ ಹೆಗಲ ಮೇಲೆ ಹೊತ್ತು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಸದ್ಯ ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.