ಬೆಂಗಳೂರು: ನಾನು ಆರೇಳು ತಿಂಗಳಿಂದ ಹೇಳ್ತಾನೇ ಇದ್ದೆ. ನನಗೆ ಯಡಿಯೂರಪ್ಪ ಅವರನ್ನು ಇಳಿಸುವ ಬಗ್ಗೆ ಖಚಿತ ಮಾಹಿತಿ ಇತ್ತು. ಅವರನ್ನು ಸಿಎಂ ಸ್ಥಾನದಿಂದ ತೆಗೆಯೋದ್ರಿಂದ ಲಾಭವೇನಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಭ್ರಷ್ಟರು. ಅವರ ಜೊತೆ ಬಿಜೆಪಿಯಲ್ಲಿರುವ ಹಲವರು ಭ್ರಷ್ಟಚಾರಿಗಳು. ಯಾವಾಗಲೂ ಭ್ರಷ್ಟರು ಉಳಿಯೋದಿಲ್ಲ ಅನ್ನೋದು ತಿಳಿಯಬೇಕು ಎಂದರು. ಸಿಎಂ ಬದಲಾವಣೆ ಕುರಿತು ನಾನು ಹೇಳಿದಾಗ ಅದನ್ನು ಯಾರೂ ನಂಬಿರಲಿಲ್ಲ. ನನಗೆ ಖಚಿತ ಮಾಹಿತಿ ಇತ್ತು, ಇವತ್ತು ಅದು ಸತ್ಯವಾಗಿದೆ. ಯಡಿಯೂರಪ್ಪನವರನ್ನು ತೆಗೆಯುವುದರಿಂದ ಬಿಜೆಪಿಯಲ್ಲಿ ಮತ್ತೊಬ್ಬ ಪ್ರಾಮಾಣಿಕ ಮುಖ್ಯಮಂತ್ರಿ ಬರುತ್ತಾರೆ ಎಂದು ನಾನು ಅಂದುಕೊಂಡಿಲ್ಲ. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ , ಅದರಲ್ಲಿರುವ ಸಚಿವರುಗಳೂ ಭ್ರಷ್ಟರು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇನ್ನು ದೇಶದಲ್ಲಿ 50ಲಕ್ಷ ಜನ ಎರಡನೇ ಅಲೆಯಲ್ಲಿ ಸತ್ತಿದ್ದಾರೆ. ನಮ್ಮಲ್ಲಿ ಸರ್ಕಾರ ಕೊಟ್ಟಿರುವ ಅಂಕಿಗಿಂತ 10ಪಟ್ಟು ಹೆಚ್ಚು ಜನ ಸತ್ತಿದ್ದಾರೆ. ಇವರ ದುರಾಡಳಿತದಿಂದ ಜನ ಸತ್ತಿದ್ದಾರೆ. ಸತ್ತವರಿಗೆ ಯಾವ ಪರಿಹಾರ ಕೊಡಲಿಲ್ಲ. ಇವರು ಅಧಿಕಾರ ಬಿಟ್ಟು ತೊಲಗಲಿ. ಚುನಾವಣೆ ಬಂದರೆ ಎದುರಿಸೋಕೆ ನಾವು ರೆಡಿ ಎಂದು ಬಿಜೆಪಿಗೆ ಸವಾಲ್ ಹಾಕಿದ್ದಾರೆ.