ಹರಿಯಾಣ: ನಗರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿರುವ ನಡುವೆಯೇ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ರೋಹ್ಟಕ್ನ ಹಿಮಾನಿ ನರ್ವಾಲ್ ಕೊಲೆಯಾದವರು ಎಂದು ಗುರುತಿಸಲಾಗಿದೆ. ಹರಿಯಾಣ
ಬಸ್ ಸ್ಟ್ಯಾಂಡ್ ಒಂದರ ಬಳಿ ಸೂಟ್ ಕೇಸ್ನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಸಂಪ್ಲಾ ಬಸ್ ಸ್ಟ್ಯಾಂಡ್ ಬಳಿ ಸೂಟ್ಕೇಸ್ನಲ್ಲಿ ಮೃತದೇಹ ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿ ನೋಡಿದಾಗ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ರದ್ದು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಸರಕಾರ ವಿಶ್ವವಿದ್ಯಾಲಯವನ್ನು ಮುಚ್ಚುವ ಬದಲಾಗಿ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸಬೇಕು: ಎ. ಮುರಿಗೆಪ್ಪ
ಹಿಮಾನಿ ನರ್ವಾಲ್ ರ ಕುತ್ತಿಗೆಗೆ ದುಪಟ್ಟಾ ಬಿಗಿದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕೊಲೆ ಮಾಡಿದ ಬಳಿಕ ದೊಡ್ಡ ಸೂಟ್ ಕೇಸ್ ನಲ್ಲಿ ಆಕೆಯ ಶವವನ್ನು ತುರುಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾನುವಾರವೇ ಹರಿಯಾಣದ 33 ಮುನ್ಸಿಪಲ್ ಕಾರ್ಪೊರೇಷನ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತೆಯ ಶವ ಪತ್ತೆಯಾಗಿದೆ. ಇದು ರಾಜಕೀಯ ಕಾರಣಕ್ಕೆ ಕೊಲೆಯೇ ಎಂಬ ಶಂಕೆ ಮೂಡಿದೆ.
ಹಿಮಾನಿ ನರ್ವಾಲ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಅವರು ಪಕ್ಷದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲೂ ಪಾಲ್ಗೊಂಡಿದ್ದರು. ಇವರು ರಾಹುಲ್ ಗಾಂಧಿ ಜತೆಗೆ ತೆಗೆಸಿಕೊಂಡಿದ್ದ ಫೋಟೋಗಳು ಆನ್ಲೈನ್ನಲ್ಲಿ ವೈರಲ್ ಆಗಿದ್ದವು.
ತನಿಖೆಗೆ ಆಗ್ರಹ
ಹಿಮಾನಿ ನರ್ವಾಲ್ ಹತ್ಯೆಯ ಬೆನ್ನಲ್ಲೇ ಉನ್ನತ ಮಟ್ಟದ ತನಿಖೆಗೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಆಗ್ರಹಿಸಿದ್ದಾರೆ.
“ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಬರ್ಬರ ಹತ್ಯೆಯ ಸುದ್ದಿ ತಿಳಿದು ಮನಸ್ಸಿಗೆ ಬೇಸರವಾಗಿದೆ. ದೇವರು ಹಿಮಾನಿ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೆಯೇ, ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಿ, ಅಪರಾಧಿಗಳಿಗೆ ಶಿಕ್ಷೆ ನೀಡಬೇಕು. ಆ ಮೂಲಕ ಕಾರ್ಯಕರ್ತೆಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು” ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ನೋಡಿ: ಜನಪರ ನೀತಿ, ಕಾರ್ಮಿಕ ವರ್ಗದ ಬೇಡಿಕೆಗಳ ಜಾರಿಗಾಗಿ ಸಿಐಟಿಯುನಿಂದ ಅಹೋರಾತ್ರಿ ಧರಣಿ Janashakthi Media