ಕೋಹಿಮಾ: ನಾಗಾಲ್ಯಾಂಡ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸದ್ಯ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್)ನ 25 ಶಾಸಕರ ಪೈಕಿ 21 ಮಂದಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೇಸಿವ್ ಪಕ್ಷ(ಎನ್‌ಡಿಪಿಪಿ)ಕ್ಕೆ ಪಕ್ಷಾಂತರಗೊಂಡಿದ್ದಾರೆ.
21 ಮಂದಿ ಶಾಸಕರ ಸೇರ್ಪಡೆಯೊಂದಿಗೆ 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನೆಫಿಯೂ ರಿಯೋ ನೇತೃತ್ವದ ಎನ್‌ಡಿಪಿಪಿ ಸರ್ಕಾರದ ಸದಸ್ಯ ಬಲ 42ಕ್ಕೆ ಏರಿಕೆಯಾಗಿದೆ. 21 ಶಾಸಕರ ಪಕ್ಷಾಂತರದಿಂದಾಗಿ, ಪ್ರಸ್ತುತ ಎನ್‌ಪಿಎಫ್ ಪಕ್ಷದಲ್ಲಿ ನಾಲ್ವರು ಶಾಸಕರನ್ನು ಮಾತ್ರ ಹೊಂದಿದೆ. ಉಳಿದಂತೆ 12 ಮಂದಿ ಬಿಜೆಪಿ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರಿದ್ದಾರೆ.
ಇದನ್ನು ಓದಿ: ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ: ಹೊಣೆ ಹೊತ್ತುಕೊಂಡ ಸೇನೆ – ಭದ್ರತಾ ಪಡೆ ವಿರುದ್ಧ ಪ್ರತಿಭಟನೆ
ಎನ್‌ಡಿಪಿಪಿಗೆ ‘ವಿಲೀನ’ವಾಗುವ ಪ್ರಸ್ತಾವನ್ನು 21 ಶಾಸಕರು ವಿಧಾಸಭಾಧ್ಯಕ್ಷ ಸೇರಿಂಗೈನ್ ಲೋಕನ್ ಕುಮಾರ್ ಅವರಿಗೆ ನೀಡಿದ್ದಾರೆ. ಅವರು ಕೂಡ ಈ ಪ್ರಸ್ತಾವವನ್ನು ಸ್ವೀಕರಿಸಿದ್ದಾರೆ.
ಪಕ್ಷಾಂತರ ಬೆಳವಣಿಗೆ ನಂತರ ಪ್ರತಿಕ್ರಿಯೆ ನೀಡಿರುವ ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುರ್ಹೋಜೆಲಿ ಲೀಝೆಯೆಟ್ಸು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ ಎಂದು ಗುರುವಾರವಷ್ಟೇ(ಏಪ್ರಿಲ್ 28) ಘೋಷಿಸಿದ್ದರು.
ಇದನ್ನು ಓದಿ: ನಾಗಾಲ್ಯಾಂಡ್‌ನಿಂದ ಅಫ್ ಸ್ಪಾ ಹಿಂದಕ್ಕೆ ಪಡೆಯುವ ಕುರಿತು ಪರಿಶೀಲನಾ ಸಮಿತಿ ರಚನೆ
ನಾಗಲ್ಯಾಂಡ್‌ನಲ್ಲಿ ಕಳೆದ ವರ್ಷ ವಿರೋಧಪಕ್ಷ ಮುಕ್ತ, ಸರ್ವಪಕ್ಷಗಳ ಸರ್ಕಾರ (ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್–ಯುಡಿಎ) ರಚನೆಯಾಗಿತ್ತು. ಸಮಾನ ಪಾಲುದಾರರಾಗಿ ಎನ್‌ಪಿಎಫ್ ಮತ್ತು ಎನ್‌ಡಿಪಿಪಿ ಪಕ್ಷಗಳು ಆಡಳಿತ ಪಕ್ಷಗಳಾದವು. ಕೇಂದ್ರ ಸರ್ಕಾರ ಮತ್ತು ನಾಗಾ ಸಂಘಟನೆಗಳು ಹಾಗೂ ಇತರ ಗುಂಪುಗಳ ನಡುವಿನ ‘ನಾಗಾ ರಾಜಕೀಯ ಸಮಸ್ಯೆ’ಯನ್ನು ಪರಿಹರಿಸಿಕೊಳ್ಳಲು ಯುಡಿಎ ಅಡಿಯಲ್ಲಿ ಸರ್ವಪಕ್ಷ ಸರ್ಕಾರವನ್ನು ರಚನೆ ಮಾಡಲಾಗಿತ್ತು.