2030ರ ಒಳಗಾಗಿ ರಾಜ್ಯದ 35 ಸಾವಿರ ಬಸ್‌ಗಳು ಎಲೆಕ್ಟ್ರಿಕ್‌ ಬಸ್ಸುಗಳಾಗಿ ಪರಿವರ್ತನೆ: ಸಚಿವ ಶ್ರೀರಾಮುಲು

ಬೆಂಗಳೂರು: ಇಂಧನ ದರಗಳ ಹೆಚ್ಚಳದಿಂದಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಿರ್ವಹಿಸುವುದು ದುಬಾರಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಡೀಸೆಲ್‌ ನಿಂದ ಎಲೆಕ್ಟ್ರಿಕ್‌ ಬಸ್ಸುಗಳಾಗಿ ಪರಿವರ್ತಿಸಲಾಗುವುದು. ಮುಂದಿನ 2030ರ ಒಳಗಾಗಿ ಎಲೆಕ್ಟ್ರಿಕ್‌ ಬಸ್ಸುಗಳಾಗಿ ಪರಿವರ್ತಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ತನ್ವೀರ್‌ಸೇಠ್‌ ಅವರಿಗೆ ಉತ್ತರಿಸಿದ ಸಚಿವರು, ಒಂದೆಡೆ ಡೀಸೆಲ್‌ ದರ ಹೆಚ್ಚಳ, ಇನ್ನೊಂದೆಡೆ ನಿರ್ವಹಣೆ ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡೀಸೆಲ್‌ ದರ ಹೆಚ್ಚಳದಿಂದ ಸಂಸ್ಥೆಗಳನ್ನು ನಿರ್ವಹಣೆ ಮಾಡುವುದೇ ಸವಾಲಾಗಿದೆ. ಎಲೆಕ್ಟ್ರಿಕ್‌ ಬಸ್ಸುಗಳಾಗಿ ಪರಿವರ್ತನೆಯಿಂದ ನಿರ್ವಹಣೆ ಸುಲಭವಾಗಲಿದೆ. ಅಲ್ಲದೇ, ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಇದಕ್ಕಾಗಿ ಇಲಾಖೆಯು ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ ಎಂದರು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಇಆರ್‌ಟಿಸಿ ಮತ್ತು ಎನ್‌ಡಬ್ಲ್ಯುಆರ್‌ಟಿಸಿ ಅಡಿಯಲ್ಲಿ ಪ್ರಸ್ತುತ 35,000 ಬಸ್‌ಗಳು ಸಂಚರಿಸುತ್ತಿವೆ. ಬಿಡ್‌ದಾರರೇ ಬಸ್‌ಗಳ ನಿರ್ವಹಣೆ ಮಾಡಬೇಕು ಎಂದರು. ಬಸ್ ಡಿಪೋಗಳು ಮತ್ತು ಬಸ್ ನಿಲ್ದಾಣಗಳನ್ನು ಸಂಬಂಧಪಟ್ಟ ನಿಗಮಗಳು ನಿರ್ವಹಿಸುತ್ತವೆ. ಡೀಸೆಲ್ ಬಸ್‌ಗಳ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀಗೆ ಸುಮಾರು 68.53 ರೂ.ಗಳಾಗಿದ್ದು, ಎಲೆಕ್ಟ್ರಿಕ್ ಬಸ್‌ಗಳ ಬೆಲೆ ಪ್ರತಿ ಕಿ.ಮೀಗೆ 54 ರಿಂದ 64 ರೂ. ಇರುತ್ತದೆ.

ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಿಎಂಟಿಸಿ ಸಂಸ್ಥೆಯು 90 ಎಲೆಕ್ಟ್ರಿಕ್‌ ಬಸ್‌ಗಳನ್ನು 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಫೇಮ್‌-2 ಯೋಜನೆಯಡಿ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲಾಗಿದೆ. ಈ ಪೈಕಿ 75 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಅಲ್ಲದೇ, ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಅಡಿಯಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳಿಗೆ  ಆರ್ಡರ್ ಮಾಡಲಾಗಿದೆ. ಎಲೆಕ್ಟ್ರಿಕ್‌ ಬಸ್‌ಗಳ ಪ್ರತಿ ಕಿ.ಮೀ. ವೆಚ್ಚವು 54 ರೂ. ಆಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳನ್ನು ಹಂತ ಹಂತವಾಗಿ ಖಾಸಗೀರಣಗೊಳಿಸಲು ಸಿದ್ಧತೆ ನಡೆಸಿದೆ.

Donate Janashakthi Media

Leave a Reply

Your email address will not be published. Required fields are marked *