ಡಿಸೆಂಬರ್ 21, 2012. ಇಡೀ ಭೂಮಿ ಸರ್ವನಾಶ ! ಈ ಬೆದರಿಕೆ ಬಂದಿರುವುದು ಯಾವುದೋ ಭಯೋತ್ಪಾದಕ ಸಂಘಟನೆ ಗಳಿಂದಲ್ಲ. ಬದಲಿಗೆ ಭವಿಷ್ಯ ಹೇಳುವ ನಮ್ಮ ಜ್ಯೋತಿಷಿಗಳಿಂದ. ದಿನದ ಮೂರು ಹೊತ್ತೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದೇ ಸುದ್ದಿ, ಇದೇ ಚರ್ಚೆ ! ಮುಗ್ಧ ಜನ ಚಿಂತಿತರಾಗಿದ್ದಾರೆ, ಕೆಲವರಂತೂ ಇದ್ದಷ್ಟು ದಿನ ಮಜಾ ಉಡಾಯಿಸುವ ಗುಂಗಿನಲ್ಲಿದ್ದಾರೆ.
ಜನರಲ್ಲಿರುವ ಅಜ್ಞಾನವನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡದೆ, ಹೆದರಿದವರ ಮೇಲೆ ಹಾವು ಎಸೆದಂತೆ, ಈಗ ಒಂದು ಸಿನಿಮಾ ಬಂದಿದೆ. ಅದು `2012′. ವಿನಾಶದ ಭವಿಷ್ಯವಾಣಿಯನ್ನು ಬಂಡವಾಳ ಮಾಡಿಕೊಂಡು ಹೇಗೆಲ್ಲಾ ನಾಶವಾಗಬಹುದೆಂದು ಉನ್ನತ ತಂತ್ರಜ್ಞಾನದ ಗ್ರಾಫಿಕ್ಸ್ ಬಳಕೆಯಿಂದ ನೋಡುಗರನ್ನು ದಂಗು ಬಡಿಸುವ ಹಾಲಿವುಡ್ ಚಿತ್ರ ಇದು. ಜನ ಮುಗಿಬಿದ್ದು ನೋಡುತ್ತಿದ್ದಾರೆ.
ನಿಜವೇ? ಭೂಮಿಯ ಆಯಸ್ಸು ಮುಗಿಯಿತೇ? ಸಾಮಾನ್ಯ ಜ್ಞಾನವುಳ್ಳ, ವೈಜ್ಞಾನಿಕವಾಗಿ ಆಲೋಚಿಸುವ ಯಾರೇ ಆದರೂ ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಹಾಗಾದಲ್ಲಿ ಇಂತಹ ಭಯೋತ್ಪಾದನೆ ಸೃಷ್ಟಿಯಾಗಿದ್ದು ಹೇಗೆ? ಇದಕ್ಕೆ ಕಾರಣ `ಮಾಯನ್ ಕ್ಯಾಲೆಂಡರ್’!
ಕ್ರಿ.ಪೂ. 2600. ದಕ್ಷಿಣ ಅಮೆರಿಕಾದ ಮೆಕ್ಸಿಕೋ, ಗ್ವಾಟೆಮಾಲಾ, ಎಲ್ಸಾಲ್ವಡಾರ್ ಮುಂತಾದ ಪ್ರಾಂತ್ಯಗಳನ್ನೊಳಗೊಂಡ ಸಂಸ್ಕೃತಿಯೇ `ಮಾಯನ್ ಸಂಸ್ಕೃತಿ’. ಖಗೋಳ ಜ್ಞಾನದಲ್ಲಿ ಪರಿಣಿತಿ ಪಡೆದ ಅವರು ಗ್ರಹಗಳ ಚಲನೆಯನ್ನು ಅಭ್ಯಸಿಸಿ ತಮ್ಮ ದೈನಂದಿನ ಬದುಕಿನ ಅಗತ್ಯಕ್ಕಾಗಿ `ಕ್ಯಾಲೆಂಡರ್’ ರಚಿಸಿ ಕೊಂಡಿದ್ದರು (ಹಿಂದೂ `ಪಂಚಾಂಗ’ದಂತೆ). ವರ್ಷಕ್ಕೆ 360 ದಿನಗಳಂತೆ, 400 ವರ್ಷಗಳಿಗೆ ಒಂದು ಯುಗದಂತೆ ಒಟ್ಟು 13 ಯುಗದ ಕ್ಯಾಲೆಂಡರ್ ರಚಿಸಿದ್ದರು. 13ನೇ ಯುಗದ ಅಂತಿಮ ದಿನವೇ ಡಿಸೆಂಬರ್ 21, 2012. ಇದು ಮಾಯನ್ನರ ಕ್ಯಾಲೆಂಡರಿನ ಅಂತಿಮ ದಿನವೇ ಹೊರತು, ಭೂಮಿಯದ್ದಲ್ಲ.
ಇದಲ್ಲದೆ `ನಿಬಿರು’ ಎಂಬ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸುತ್ತದೆ ಎಂಬ ಭಯವನ್ನೂ ಹುಟ್ಟಿಸಿದ್ದಾರೆ. ಮುಂದಿನ ನೂರಾರು ವರ್ಷಗಳಲ್ಲಿ ಖಗೋಳದಲ್ಲಿನ ಚಲನವಲನಗಳನ್ನು ಅರಿತಿರುವ `ನಾಸಾ’ ವಿಜ್ಞಾನಿಗಳು ಇದನ್ನು ಅಲ್ಲಗಳೆದಿದ್ದಾರೆ.
ಈ ಹಿಂದೆಯೂ ಇಂತಹ ಅನೇಕ ಭವಿಷ್ಯಗಳು ಚಾಲ್ತಿಯಲ್ಲಿದ್ದು ಅವೆಲ್ಲಾ ಸುಳ್ಳಾಗಿರುವುದನ್ನು ನಾವು ಕಂಡಿದ್ದೇವೆ. ಆದರೂ ಅಲ್ಲಲ್ಲಿ ನಡೆಯುವ ನೈಸರ್ಗಿಕ ಅವಘಡ, ಪ್ರಕೃತಿ ವಿಕೋಪಗಳನ್ನು ನೆಪ ಮಾಡಿಕೊಂಡು ತಮ್ಮ ಭವಿಷ್ಯ ನಿಜವಾಗಿಯೆಂದು ಸಾಧಿಸಲು ಹೊರಟಿದ್ದಾರೆ ಕೆಲವರು. ಈಗ ಅವರ ಕೈಗೆ ಸಿಕ್ಕಿರುವುದೇ `ಡಿಸೆಂಬರ್ 2012 ರ ಪ್ರಳಯ’.
ತರ್ಕ ಹೀನ ಅಜ್ಞಾನ
ಇನ್ನು ಹಾಲಿವುಡ್ ಚಿತ್ರಕ್ಕೆ ಬರೋಣ. ಪ್ರಳಯಕ್ಕೆ ಸಿಲುಕಿದ ಕುಟುಂಬವೊಂದು ಅದರಿಂದ ಪಾರಾಗಲು ನಡೆಸುವ ಹೋರಾಟದ ಕಥೆಯೇ `2012′. ಎಳ್ಳಷ್ಟು ತರ್ಕಜ್ಞಾನವುಳ್ಳ ಯಾರೇ ಆದರೂ ಈ ಸಿನಿಮಾ ಪೂರ್ತಿ ನೋಡಲು ಸಾಧ್ಯವೇ ಇಲ್ಲ. ಅಷ್ಟೊಂದು ಬಂಡಲ್ ಈ ಚಿತ್ರ. ಭೂಮಿ ಬಾಯ್ತೆರೆಯುತ್ತದೆ, ಕಟ್ಟಡ-ಸೇತುವೆಗಳು ತರಗೆಲೆಯಂತೆ ಕಣ್ಣ ಮುಂದೆಯೇ ಉರುಳುತ್ತವೇ, ಬೆಂಕಿಯ ಮಳೆಯೇ ಸುರಿಯುತ್ತಿರುತ್ತದೆ. ಆದರೆ ಇದಾವುದೂ ಆ ಕುಟುಂಬಕ್ಕೆ ಆಕಸ್ಮಿಕವಾಗಿಯೂ ತಾಗುವುದಿಲ್ಲ. ಏನಿದ್ದರೂ ಅವರು ಮುಂದೆ ಹೋದಂತೆ ಹಿಂದೆ ಇದೆಲ್ಲಾ ಸಂಭವಿಸುತ್ತದೆ!-ಕ್ಷಮಿಸಿ, ಇಷ್ಟು ನೋಡುವಷ್ಟರಲ್ಲೇ ತಲೆ ಚಿಟ್ಟು ಹಿಡಿದು ಸಿನಿಮಾ ಪೂರ್ತಿ ನೋಡಲಾಗದೆ ಎದ್ದು ಬಂದಿದ್ದಾಯ್ತು!
ಬಂಡವಾಳಶಾಹಿ ವ್ಯವಸ್ಥೆ ಜಾರಿತ್ರಿಕ ವೈಫಲ್ಯದ ಫಲವಾಗಿ ಉಂಟಾದ ಜಾಗತಿಕವಾಗಿ ಆರ್ಥಿಕ ಕುಸಿತದ ಪರಿಣಾಮ ಸಾಮಾನ್ಯ ಜನರ ಮೇಲೆ ಬೀರುತ್ತಿರುವಾಗ, ಹಣಕಾಸು ಸಂಸ್ಥೆಗಳು, ಕಾರ್ಖಾನೆಗಳು ಮುಚ್ಚುತ್ತಾ, ವ್ಯಾಪಾರ ವಹಿವಾಟು ಕುಸಿದು ವ್ಯಾಪಕ ನಿರುದ್ಯೋಗ, ಆದಾಯ ಕುಸಿತ ಜನರನ್ನು ಕಾಡುತ್ತಿರುವಾಗ ಸಾಮ್ರಾಜ್ಯಶಾಹಿ ಅಮೆರಿಕಾ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಹೆಣಗುತ್ತಿರು ವಾಗ, ಇದರ ವಿರುದ್ಧ ಜಗತ್ತಿನಾದ್ಯಂತ ಜನ ಧ್ವನಿ ಎತ್ತುತ್ತಿರು ವಾಗ-ಈ ಚಿತ್ರದ ಪರಿಣಾಮವನ್ನು ಗಮನಿಸಬೇಕು. ಮೂಢನಂಬಿಕೆ, ಭಾವನಾತ್ಮಕ ವಿಚಾರಗಳನ್ನು ಬಂಡವಾಳ ಮಾಡಿಕೊಂಡು ಅವರನ್ನು ಮತ್ತಷ್ಟು ಭಯಭೀತರನ್ನಾಗಿಸಿ, ಸಮಸ್ಯೆಗಳ ವಿರುದ್ಧ ದನಿಯೆತ್ತದಂತೆ ಅವರನ್ನು ತಟಸ್ಥರನ್ನಾಗಿಸುವ ಅಥವಾ ವೈಯಕ್ತಿಕ ನಂಬಿಕೆಗಳ ಬಲೆಯೊಳಗೇ ಸಿಲುಕಿಸಿ, ಅಜ್ಞಾನದಲ್ಲೇ ಉಳಿಸಿಬಿಡುವ ಕುತಂತ್ರ ಕಾಣುತ್ತದೆ. ಜನತೆಯ ನಿಜವಾದ ಶತ್ರುವನ್ನು ಮರೆಮಾಚಿಸಿ ಜನರ ಗಮನ ಬೇರೆಡೆ ಸೆಳೆಯುವ ತಂತ್ರವಲ್ಲವೇ ಇದು?
ಭಯೋತ್ಪಾದನೆಯ ಇನ್ನೊಂದು ಮುಖದಂತಿರುವ ಇದು ಅಮೆರಿಕನ್ ಚಿತ್ರ! ಈ ಹಿಂದೆಯೂ ಅನೇಕ ಹಾಲಿವುಡ್ ಚಿತ್ರಗಳು ಇಂಥದ್ದೇ ವರಸೆ ತೋರಿವೆ. ಉದಾ: ಜೇಮ್ಸ್ಬಾಂಡ್ ಚಿತ್ರಗಳು. ನಾಯಕ ಜೇಮ್ಸ್ಬಾಂಡ್ ಏಕಾಂಗಿಯಾಗಿಯೇ ಅಮೆರಿಕಾ ವಿರೋಧಿ ದೇಶಗಳನ್ನು – ಅದರಲ್ಲೂ ಸಮಾಜವಾದಿ ದೇಶಗಳನ್ನು ಗುರಿಯಾಗಿಸಿಕೊಂಡು – ಏಕಾಂಗಿಯಾಗಿಯೇ ಸರ್ವನಾಶ ಮಾಡುವ ಕಥೆಗಳೇ ಹೆಚ್ಚು. `ರ್ಯಾಂಬೋ’ ಸರಣಿ ಕೂಡಾ ಇಂಥದ್ದೇ ಕಥೆಯುಳ್ಳ ಚಿತ್ರ.
ಸ್ವತಃ 2012ರ ನಿರ್ದೇಶಕ ರೊಲಾಡ್ ಎಮರಿಕ್ಗೆ 2012ರ ಪ್ರಳಯದ ನಂಬಿಕೆಯಿಲ್ಲ. ಜನರ ನಂಬಿಕೆಯೇ ತನ್ನ ಚಿತ್ರದ ಬಂಡವಾಳ ಎಂದು ಯಾವ ಎಗ್ಗಿಲ್ಲದೇ ಹೇಳಿಕೊಂಡಿದ್ದಾನೆ.
ಜಾಗತಿಕ ತಾಪಮಾನ ಏರಿಕೆಯ ಕುರಿತು ಚರ್ಚೆಗಳು ನಡೆದಿರುವ ಸಂದರ್ಭದಲ್ಲೇ ಅದರೊಂದಿಗೇ ಪ್ರಳಯವನ್ನು ತಳಕು ಹಾಕಿರುವ ಜ್ಯೋತಿಷಿಗಳು, ಭಯ ಸೃಷ್ಟಿಸಲು ಹೊರಟಿರುವ ಈ ಸಿನಿಮಾ – ಇವು ಬೀರುವ ಪರಿಣಾಮ ನಿಜಕ್ಕೂ ಗಂಭೀರ!