ಪತ್ತನಂತಿಟ್ಟ: ಕೇರಳ ರಾಜ್ಯದಲ್ಲೊಂದು ಬೆಚ್ಚಿಬೀಳಿಸುವಂತ ಘಟನೆಯೊಂದು ನಡೆದಿದ್ದು, ತಮ್ಮ ಆರ್ಥಿಕ ಏಳಿಗೆಗಾಗಿ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಎಳಂದೂರಿನಲ್ಲಿ ನಡೆದಿದೆ.
ಮೂಢನಂಬಿಕೆಯ ಕಾರಣಕ್ಕಾಗಿ ಎರ್ನಾಕುಲಂ ಜಿಲ್ಲೆಯ ಇಬ್ಬರು ಮಹಿಳೆಯರನ್ನು ತಿರುವಳ್ಳದ ದೇವಸ್ಥಾನವೊಂದರಲ್ಲಿ ನರಬಲಿ ನೀಡಲಾಗಿದೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ದಂಪತಿಗಳು ಹಾಗೂ ಏಜೆಂಟ್‌ರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ತಮ್ಮ ಆರ್ಥಿಕ ಏಳಿಗೆಗಾಗಿ ಪೂಜೆ ನಡೆಸಿ ಮಾಟಮಂತ್ರದ ಭಾಗವಾಗಿ ಮಹಿಳೆಯರನ್ನು ಬಲಿಕೊಟ್ಟಿದ್ದಾರೆ. ಮೃತರನ್ನು ಕಡವಂತರ ನಿವಾಸಿ ಪದ್ಮಮ್ (52) ಮತ್ತು ಕಾಲಡಿ ನಿವಾಸಿ ರೋಸಿಲಿ (50) ಎಂದು ಗುರುತಿಸಲಾಗಿದೆ. ಇವರು ಸೆಪ್ಟೆಂಬರ್ 26 ರಂದು ನಾಪತ್ತೆಯಾಗಿದ್ದರು.
ಎಳಂದೂರು ಗ್ರಾಮದಲ್ಲಿ ಆರ್ಥಿಕ ಸಮೃದ್ಧಿಗಾಗಿ ಮಾಟಮಂತ್ರದ ಹೆಸರಿನಲ್ಲಿ ನರಬಲಿ ನಡೆದಿದ್ದು, ಮಾಂತ್ರಿಕ ಮತ್ತು ಆತನ ಪತ್ನಿಯ ಸಹಾಯದಿಂದ ಮಹಿಳೆಯರನ್ನು ಅಪಹರಿಸಿ ನಂತರ ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆ. ತಿರುವಳ್ಳ ಮೂಲದ ಭಗವಾಲ್ ಸಿಂಗ್, ಆತನ ಪತ್ನಿ ಲೈಲಾ ಹಾಗೂ ಪೆರುಂಬವೂರು ಮೂಲಕ ಏಜೆಂಟ್ ಮೊಹಮ್ಮದ್ ಶಫಿ ಅಲಿಯಾಸ್ ರಶೀದ್‌ನನ್ನು ಬಂಧಿತ ಆರೋಪಿಗಳು ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಮುಹಮ್ಮದ್ ಶಫಿ ಏಜೆಂಟ್ ಪೆರುಂಬವೂರು ಮೂಲದವನಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ನಂತರ ಅಪಹರಿಸಿದ್ದಾರೆ. ಆತನ ಸಹಾಯದಿಂದ ನರಬಲಿಗಾಗಿ ಇಬ್ಬರು ಮಹಿಳೆಯರನ್ನು ಭಗವಾಲ್ ಸಿಂಗ್ ಹಾಗೂ ಲೈಲಾ ಮೌಢ್ಯದ ಆಚರಣೆಯಲ್ಲಿ ಬಲಿ ನೀಡಿದ್ದಾರೆ. ಧನ ಸಂಪತ್ತು ಹಾಗೂ ನೆಮ್ಮದಿ ಬೇಕು ಎನ್ನುವ ಸಲುವಾಗಿ ದಂಪತಿಗಳು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.
ಏಜೆಂಟ್ ಮೊಹಮ್ಮದ್ ಶಫಿ ಪ್ರಮುಖ ಆರೋಪಿಯಾಗಿದ್ದು, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ, ಮೊದಲು ತಿರುವಳ್ಳದ ಭಗವಾಲ್ ಸಿಂಗ್‌ನನ್ನು ಭೇಟಿಯಾದ ಬಳಿಕ ಪೆರುಂಬವೂರು ಮೂಲದವರನ್ನು ಸಂತುಷ್ಟಗೊಳಿಸಿದರೆ ಜೀವನದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ಭಗವಾಲ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ. ಇದಾದ ಬಳಿಕ ಮಹಿಳೆಯನ್ನು ಕಾಲಡಿಯಿಂದ ತಿರುವಳ್ಳಕ್ಕೆ ಕರೆದೊಯ್ಯಲಾಯಿತು.
ಪೊಲೀಸ್ ಆಯುಕ್ತ ನಾಗರಾಜು ಅವರು, “ಈಗಾಗಲೇ ದಂಪತಿಗಳು ಮತ್ತು ಏಜೆಂಟ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದಾರೆ. ಶವಗಳನ್ನು ದಂಪತಿಯ ಮನೆಯ ಪಕ್ಕದ ಜಮೀನಿನಲ್ಲಿ ಹೂಳಲಾಗಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ದೇವರನ್ನು ಒಲಿಸಿಕೊಳ್ಳಲು ಮತ್ತು ಬಿಕ್ಕಟ್ಟಿನಿಂದ ಹೊರಬರಲು ಬಲಿಕೊಡಲು ನಿರ್ಧರಿಸಿದ್ದಾರೆʼʼ ಎಂದು ಹೇಳಿದರು.
ಕಡವಂತರದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ತನಿಖೆಯ ದಾರಿ ತಿರುವಳ್ಳಕ್ಕೆ ತಲುಪುತ್ತಿದ್ದಂತೆ, ಕಾಲಡಿ ಮೂಲದ ಮತ್ತೊಬ್ಬ ಮಹಿಳೆಯೂ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಇಬ್ಬರೂ ಮಹಿಳೆಯರ ಶವಗಳನ್ನು ಸಮಾಧಿ ಮಾಡಲಾಗಿದೆ. ಕಾಲಡಿ ಮೂಲದ ಮಹಿಳೆಯನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ.
ಲಾಟರಿ ಟಿಕೆಟ್ ಮಾರಾಟಗಾರ್ತಿ ರೋಸ್ಲಿನ್ ಅವರನ್ನು ಜೂನ್‌ನಲ್ಲಿ ಮತ್ತು ಸೆಪ್ಟೆಂಬರ್‌ನಲ್ಲಿ ಪದ್ಮಾ ಅವರನ್ನು ತಿರುವಲ್ಲಾಗೆ ಕರೆದೊಯ್ದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸೆಪ್ಟೆಂಬರ್ 26 ರಂದು ಕಾಣೆಯಾದ ದೂರಿನ ಕುರಿತು ಕಡವಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಮೊಬೈಲ್ ತರಂಗದ ಜಾಡು ಹಿಡಿದ ಪೊಲೀಸರಿಗೆ ಇವರು ತಿರುವಳ್ಳದಲ್ಲಿ ಕೊಲೆಯಾಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, “ಆತ್ಮಸಾಕ್ಷಿಯ ಕೊರತೆ ಇರುವವರು ಮಾತ್ರ ಈ ರೀತಿ ಮಾಡಲು ಸಾಧ್ಯ. ಇಂತಹ ಮೌಢ್ಯತೆ ಮತ್ತು ಕಾನೂನುಬಾಹಿರ ಆಚರಣೆಗಳನ್ನು ನಾಗರಿಕ ಸಮಾಜವು ಒಡ್ಡುವ ಸವಾಲಾಗಿ ಮಾತ್ರ ನೋಡಬಹುದುʼʼ ಎಂದು ಹೇಳಿದ್ದಾರೆ.