ಬೆಂಗಳೂರು: ಮತದಾರರ ದತ್ತಾಂಶ ಕಳವು, ಗುರುತಿನ ಚೀಟಿ ಪರಿಷ್ಕರಣೆ ಅಕ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಐಎಎಸ್ ಅಧಿಕಾರಗಳನ್ನು ಅಮಾನತುಗೊಳಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗ ಅಮಾನತು ಸೂಚನೆ ನೀಡಿದ್ದು, ಇಲಾಖಾ ವಿಚಾರಣೆ ಆರಂಭಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಯೋಗ ನಿರ್ದೇಶನ ನೀಡಿದೆ.
ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಆದೇಶ ಮಾಡಿದೆ. ಐಎಎಸ್ ಅಧಿಕಾರಿಗಳಾದ ಬಿಬಿಎಂಪಿ ವಿಶೇಷ ಆಯುಕ್ತ ಎಸ್. ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಪ್ರಕಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.
ಶಿವಾಜಿನಗರ, ಚಿಕ್ಕಪೇಟೆ ಕ್ಷೇತ್ರದ ಉಸ್ತುವಾರಿ ಆಗಿದ್ದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಎಸ್. ರಂಗಪ್ಪ ಮತ್ತು ಮಹದೇವಪುರ ಕ್ಷೇತ್ರದ ಉಸ್ತುವಾರಿ ಅಧಿಕಾರಿಯಾಗಿದ್ದ ಕೆ. ಶ್ರೀನಿವಾಸ್ ಕಾರ್ಯನಿರ್ವಹಿಸುತ್ತಿದ್ದರು, ವಿಚಾರಣೆಗೆ ಸೂಚಿಸಿದೆ. ಈ ಕ್ಷೇತ್ರಗಳಲ್ಲಿ ಮತ್ತೊಮ್ಮೆ ಶೇ 100ರಷ್ಟು ಮತದಾರರ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಬೇಕೆಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಲಾಗುವುದು. ಈ ವಿಚಾರದಲ್ಲಿ ನೀತಿ, ನಿಯಮಗಳ ಉಲ್ಲಂಘನೆಯನ್ನು ಆಯೋಗ ಕಿಂಚಿತ್ತೂ ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕವನ್ನು ಡಿಸೆಂಬರ್ 24ರವರೆಗೆ ವಿಸ್ತರಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಬಿಎಂಪಿಯಿಂದ ಹೊರತಾದ ಇಬ್ಬರು ವಿಶೇಷಾಧಿಕಾರಿಗಳ ನೇಮಿಸಬೇಕು, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅನಧಿಕೃತವಾಗಿ ಅಥವಾ ಪರೋಕ್ಷವಾಗಿ ದಾಖಲೆ ಸಂಗ್ರಹಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ 24 ಲಕ್ಷ ಮತದಾರರ ಹೆಸರನ್ನು ಕೈ ಬಿಡಲಾಗಿದ್ದು, ಹೊಸದಾಗಿ 11 ಲಕ್ಷ ಮತದಾರರ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದು ಮತ್ತು ಹೊಸಬರ ಸೇರ್ಪಡೆ ಕುರಿತು ಸಂಪೂರ್ಣ ತನಿಖೆಗೆ ಮೂವರು ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚಿಕ್ಕಪೇಟೆಗೆ ಡಾ. ಆರ್. ವಿಶಾಲ್, ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಮಹದೇವಪುರಕ್ಕೆ ಅಜಯ್ ನಾಗಭೂಷಣ್ ಅವರನ್ನು ನೇಮಿಸಲಾಗಿದೆ.
ತನಿಖೆಗೆ 7 ಐಎಎಸ್ ಅಧಿಕಾರಿಗಳ ನೇಮಕ
ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ದೂರು ದಾಖಲಾಗುತ್ತಿದ್ದಂತೆಯೇ ಚಿಲುಮೆ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಸರ್ಕಾರಿ ಅಧಿಕಾರಿಗಳ ಪ್ರಭಾವದಿಂದ ಖಾಸಗಿ ಕಂಪನಿ ನೌಕರರು ಮತದಾರರ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಗಾಗಿ ಕೇಂದ್ರ ಚುನಾವಣೆ ಆಯೋಗ 7 ಐಎಎಸ್ ಅಧಿಕಾರಿಗಳನ್ನು ನೇಮಿಸಿದೆ.
ಖಾಸಗಿ ಸಂಸ್ಥೆಯಿಂದ ಮತದಾರರ ಮಾಹಿತಿ ಸಂಗ್ರಹಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಿಂದ ಮತದಾರರ ಹೆಸರು ತೆಗೆದು ಹಾಕಿರುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆಗೆ ಆದೇಶಿಸಿದ್ದು, ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವುದು, ಸೇರ್ಪಡೆ, ತಿದ್ದುಪಡಿ ಬಗ್ಗೆ ಪೂರ್ಣ ಮಟ್ಟದಲ್ಲಿ ಪರಿಶೀಲನೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಲ್ಲೂ ಚಿಕ್ಕಪೇಟೆ, ಶಿವಾಜಿನಗರ, ಮಹಾದೇವಪುರ ವಲಯದಲ್ಲಿ ವಿಶೇಷವಾಗಿ ಪರಿಶೀಲನೆ ಮಾಡಲು ಸೂಚನೆ ನೀಡಿದೆ.