ಕಲಬುರಗಿ: ಯುವಕರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ಇಬ್ಬರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮೇಳಕುಂದಾ ಗ್ರಾಮದ ನಾಗೇಶ್, ಬೆಳಗಾವಿ ಜಿಲ್ಲೆಯ ಅಭಿಷೇಕ್ ಬಂಧಿತ ಆರೋಪಿಗಳು.
ಇವರು ಅಮಾಯಕ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಸರ್ಕಾರಿ ಇಲಾಖೆಗಳಲ್ಲಿ ಡಿ ಗ್ರೂಪ್ ಹುದ್ದೆಯಿಂದ ಹಿಡಿದು ಗ್ರೇಡ್ -2 ತಹಶೀಲ್ದಾರ್ ವರೆಗಿನ ಹುದ್ದೆಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾಂತರ ಹಣ ಪಡೆದು ನಕಲಿ ನೇಮಕಾತಿ ಆದೇಶ ಪತ್ರ ಕೊಟ್ಟು ಕಳುಹಿಸುತ್ತಿದ್ದರು.
ಇದನ್ನೂ ಓದಿ: ವೃದ್ಧೆಯ ಮೇಲೆ ಅತ್ಯಾಚಾರ: ವಿಚಾರಣೆಯ12ನೇ ದಿನಕ್ಕೆ ಕೋರ್ಟ್ ತೀರ್ಪು
ಈ ಆದೇಶ ಪ್ರತಿ ತೆಗೆದುಕೊಂಡು ಆಯಾ ಇಲಾಖೆಗೆ ಕೆಲಸಕ್ಕೆ ಸೇರಲು ಹೋದವರಿಗೆ ನಕಲಿ ಆದೇಶ ಎಂದು ಗೊತ್ತಾಗಿದೆ. ಬಳಿಕ ಹಣ ವಾಪಸ್ ಕೇಳಿದಾಗ ಹಣ ಕೊಡದೆ ಬೆದರಿಕೆ ಹಾಕಿದ್ದಾರೆ. ಇದುವರೆಗೆ ನಾಗೇಶ್ ಮತ್ತು ಅಭಿಷೇಕ್ ಸೇರಿಕೊಂಡು 11 ಜನರಿಗೆ ನಕಲಿ ನೇಮಕಾತಿ ಆದೇಶ ಪ್ರತಿ ನೀಡಿ 14 ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ.
ವಂಚನೆಗೊಳಗಾದವರು ದೂರು ನೀಡಿರಲಿಲ್ಲ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಅಮರದೀಪ್ ಎಂಬ ಯುವಕನಿಗೆ ಡಿಸಿ ಕಚೇರಿಯ ಪರಿಚಾರಕರ ಹುದ್ದೆಗೆ ನೇಮಕಾತಿ ಆದೇಶ ನೀಡಿರುವುದು ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮಾಹಿತಿ ತಿಳಿದ ಡಿಸಿ ಕಚೇರಿ ಸಿಬ್ಬಂದಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣೆ ಪೊಲೀಸರು ಅಮರದೀಪ್ ಸಹಾಯದಿಂದ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ನೋಡಿ: ಮಂಗಳೂರು | ಕುಡಿಯಲು ನೀರು ಕೊಡಿ : ಖಾಲಿ ಕೊಡಗಳೊಂದಿಗೆ ಪಾಲಿಕೆಗೆ ಬರ್ತಿವಿ Janashakthi Media