ಮೈಸೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ವರ್ಗಾವಣೆ ಭಾರೀ ಸದ್ದು ಮಾಡ್ತಿದೆ. ಭೂ ಹಗರಣವೇ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣ ಎಂದು ಹೇಳಲಾಗ್ತಾ ಇತ್ತು. ಆದರೆ ಇದೀಗ ಈ ಮಾತಿಗೆ ಪುಷ್ಠಿ ನೀಡುವಂತಹ ರೋಹಿಣಿ ಸಿಂಧೂರಿಯವರ ಆಡಿಯೋವೊಂದು ವೈರಲ್ ಆಗಿದೆ.
ಭೂ ಮಾಫಿಯಾ ವಿರುದ್ಧ ಹೋರಾಡಿದ್ದಕ್ಕೆ ನನಗೆ ವರ್ಗಾವಣೆ ಭಾಗ್ಯ ಸಿಕ್ಕಿದೆ. ಶಾಸಕ ಸಾ.ರಾ. ಮಹೇಶ್ ಹಾಗೂ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಷಡ್ಯಂತ್ರದಿಂದ ನನ್ನನ್ನ ವರ್ಗಾವಣೆ ಮಾಡಲಾಗಿದೆ.
ಅಧಿಕಾರಿಗಳಿಗೆ ಬೆದರಿಸಿ, ಆಮಿಷ ತೋರಿಸಿ ಭೂ ಮಾಫಿಯಾ ಮಾಡುತ್ತಿದ್ದಾರೆ. ಲಿಂಗಾಬುದಿ ಕೆರೆ ಬಳಿ ಭೂಮಿ ಒತ್ತುವರಿ ಮಾಡಿ ನಿರ್ಮಾಣವಾಗುತ್ತಿರುವ ರೆಸಾರ್ಟ್ನಲ್ಲಿ ಇವರಿಬ್ಬರೂ ಪಾಲುದಾರರಿದ್ದಾರೆ ಎಂಬ ಅಂಶ ಆಡಿಯೋದಲ್ಲಿದೆ.
ರಾಜ ಕಾಲುವೆ ಮೇಲೆ ಸಾರಾ ಕಲ್ಯಾಣ ಮಂಟಪ: ನಗರದ ದಟ್ಟಗಳ್ಳಿಯ ಸಾರಾ ಕಲ್ಯಾಣ ಮಂಟಪವು ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ. ಇದರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದ್ದರಿಂದಲೇ ನನ್ನ ವಿರುದ್ಧ ಷಡ್ಯಂತರ ನಡೆದಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆರೋಪಿಸಿದ್ದಾರೆ.
ಶಾಸಕ ಸಾರಾ ಮಹೇಶ್ ಅವರ ಒಡೆತನದ ಸಾರಾ ಕಲ್ಯಾಣ ಮಂಟಪವು ಅಕ್ರಮವಾಗಿ ರಾಜಕಾಉವೆ ಮೇಲೆ ನಿರ್ಮಾಣವಾಗಿದೆ. ಅದರ ವಿರುದ್ಧ ಕ್ರಮ ಜರುಗಿಸಲು ಮುಂದಾದ ಹಿನ್ನೆಲೆಯಲ್ಲಿ ನಾನು ವರ್ಗಾವಣೆಯಾದ ನಂತರವೂ ಸಾರಾ ಮಹೇಶ್ ಅವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಇದನ್ನು ಓದಿ: ನನ್ನ ವರ್ಗಾವಣೆ ಹಿಂದೆ ಭೂಮಾಫಿಯಾ ಪಿತೂರಿ ಇದೆ – ರೋಹಿಣಿ ಸಿಂಧೂರಿ
ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳನ್ನು ಬೆದರಿಸುವುದು ಮತ್ತು ಹೆದರಿಸುವುದಕ್ಕೆ ಸುಳ್ಳು ಆರೋಪದ ತಂತ್ರ ಬಳಸುತ್ತಿದ್ದಾರೆ.ನನ್ನ ವಿರುದ್ಧ ಆರೋಪಗಳ ಸುರಿಮಳೆಯ ಹಿಂದಿನ ಉದ್ದೇಶವು ಇದೇ. ಆದರೆ ಅವರ ಈ ಯಾವುದೇ ಆರೋಪ, ಬೆದರಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಶಿಲ್ಪನಾಗ್ ಅವರು ರಾಜಕಾರಣಿಗಳ ಜತೆಗೆ ಕೈಜೋಡಿಸಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದರು. ನನ್ನನ್ನು ವರ್ಗಾವಣೆ ಮಾಡುವುದೇ ಅದರ ಹಿಂದಿನ ಉದ್ದೇಶವಾಗಿತ್ತು ಎಂದೂ ಅವರು ಹೇಳಿದ್ದಾರೆ.