ಹಫ್ಲಾಂಗ್ (ಅಸ್ಸಾಂ): ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ದಿಮಾ ಹಸಾವೊ ಜಿಲ್ಲೆಯ ಮತಗಟ್ಟೆಯೊಂದಲ್ಲಿ 90 ಜನ ಮಾತ್ರ ಅರ್ಹ ಮತದಾರರಿದ್ದಾರೆ. ಆದರೆ ಮತಯಂತ್ರದಲ್ಲಿ ಮತ ಚಲಾವಣೆಯಾದದ್ದು 181.
ದಿಮಾ ಹಸಾವೊ ಹಫ್ಲಾಂಗ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 107 (ಎ)ಯ ಖೋಟ್ಲೀರ್ ಎಲ್‌ಪಿ ಶಾಲೆಯಲ್ಲಿ ಏಪ್ರಿಲ್ 1ರಂದು ಮತದಾನ ನಡೆದಿತ್ತು. ಕ್ಷೇತ್ರದಲ್ಲಿ ಅಂದು ಶೇ 74ರಷ್ಟು ಮತದಾನವಾಗಿತ್ತು.
ಇದನ್ನು ಓದಿ : ಭ್ರಷ್ಟಚಾರ ಆರೋಪ ಪ್ರಕರಣ : ದೇಶ್ ಮುಖ್ ರಾಜೀನಾಮೆ ಅಂಗೀಕಾರ, ವಾಲ್ಸೆ ಗೆ ಹೆಚ್ಚುವರಿ ಹೊಣೆಗಾರಿಕೆ
‘ಮತಗಟ್ಟೆಯ ಅಧಿಕಾರಿಗೆ ನೀಡಿದ್ದ ಮತದಾರರ ಪಟ್ಟಿಯಲ್ಲಿ 90 ಜನರ ಹೆಸರಷ್ಟೇ ಇತ್ತು. ಆ ಊರಿನ ಮುಖಂಡ ಬಂದು, 181 ಜನರ ಹೆಸರು ಇರುವ ಮತದಾರರ ಪಟ್ಟಿಯನ್ನು ತೋರಿಸಿದ್ದಾರೆ. ಅವರೆಲ್ಲರಿಗೂ ಮತದಾನ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಅವರ ಒತ್ತಾಯಕ್ಕೆ ಅಧಿಕಾರಿಗಳು ಏಕೆ ಮಣಿದರು ಎಂಬುದು ಗೊತ್ತಿಲ್ಲ. ಮತಗಟ್ಟೆಯಲ್ಲಿದ್ದ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆಗಿರುವ ಲೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಚುನಾವಣಾ ಆಯೋಗವು ಹೇಳಿದೆ.
ಆ ಮತಗಟ್ಟೆಯ 5 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಅಧಿಕಾರಿಗಳನ್ನು ಏಪ್ರಿಲ್ 2ರಂದೇ ಅಮಾನತು ಮಾಡಲಾಗಿದೆ. ಅಮಾನತುಗೊಂಡ ಅಧಿಕಾರಿಗಳು ಸೀಖೋಸಿಯಮ್ ಲಾಂಗುಮ್ (ಸ್ಥಳೀಯ ಮುಖ್ಯ ಅಧಿಕಾರಿ), ಪ್ರಹ್ಲಾದ್ ಚಿ ರಾಯ್ (ಚುನಾವಣಾಧಿಕಾರಿ), ಪರಮೇಶ್ವರ ಚರಂಗ್ಸಾ (1 ನೇ ಮತಗಟ್ಟೆ ಅಧಿಕಾರಿ), ಸ್ವರಾಜ್ ಕಾಂತಿ ದಾಸ್ (2 ನೇ ಮತಗಟ್ಟೆ ಅಧಿಕಾರಿ) ಮತ್ತು ಲಾಲ್ಜಮ್ಲೊ ಥೀಕ್ (3 ನೇ ಮತದಾನ ಅಧಿಕಾರಿ) ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಲಾಗಿದೆ. ಆದರೆ, ಈ ವಿಚಾರ ಈಗಷ್ಟೇ ಬೆಳಕಿಗೆ ಬಂದಿದೆ. ಅಲ್ಲದೆ, ಈ ಮತಗಟ್ಟೆಯಲ್ಲಿ ಮರುಮತದಾನ ಆದೇಶಿಸಲಾಗಿದೆ.
ಇದನ್ನು ಓದಿ : ಪಶ್ಚಿಮ ಬಂಗಾಳದ ಉದ್ಯೋಗ ಬಿಕ್ಕಟ್ಟು: ತೃಣಮೂಲದ ಒಂದು ದಶಕದ ಆಡಳಿತ
ಈಗ ಹೆಚ್ಚುವರಿ ಮತಗಳು ಚಲಾವಣೆ ಆಗಿರುವ ಕಾರಣ, ಕ್ಷೇತ್ರದಲ್ಲಿ ಭಾರಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಅಸ್ಸಾಂನಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡುತ್ತಿರುವ ಎರಡನೇ ಬೆಳವಣಿಗೆ ಇದಾಗಿದೆ. ಈ ಹಿಂದೆ ಬಿಜೆಪಿ ನಾಯಕನ ಕಾರಿನಲ್ಲಿ ಇವಿಎಂ ಪತ್ತೆಯಾದ ಸಂಬಂಧ ಕರೀಮ್‌ಗಂಜ್‌ನಲ್ಲಿ ಮರು ಮತದಾನಕ್ಕೆ ಆಯೋಗ ಆದೇಶ ನೀಡಿತ್ತು.