ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಘಟನೆ ಮಾಸುವ ಮುನ್ನವೇ ಜುಲೈ 1ರಂದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ ಶವ ಪತ್ತೆಯಾಗಿದೆ. ರಸ್ತೆ
ಕೋತಿಗಳನ್ನು ವಿಷವಿಕ್ಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೋತಿಗಳಿಗೆ ಬೇರೆಡೆ ವಿಷ ಹಾಕಿ ಕೊಂದು ನಂತರ ಇಲ್ಲಿ ತಂದು ಹಾಕಿರುವ ಅನುಮಾನವೂ ವ್ಯಕ್ತವಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ರಸ್ತೆ
ವಿಷವಿಕ್ಕಿ ಕೊಂದಿರುವುದು ಖಚಿತ
ಕೋತಿಗಳಿಗೆ ವಿಷವಿಕ್ಕಿ ಕೊಲೆ ಮಾಡಿರುವುದು ಖಚಿತ ಎಂದು ವೈದ್ಯ ಡಾ. ಮಹದೇಶ್ ಹೇಳಿದ್ದಾರೆ. ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಅವರು, ಒಟ್ಟು 18 ಕೋತಿಗಳು ಸಾವನ್ನಪ್ಪಿವೆ. ಎರಡು ಕೋತಿಗಳು ಜೀವಂತವಾಗಿದ್ದವು. ನಿತ್ರಾಣಗೊಂಡ ಅವುಗಳನ್ನು ಈಗಾಗಲೇ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದೇವೆ. ಚಿಕಿತ್ಸೆ ಪಡೆಯುತ್ತಿರುವ ಕೋತಿಗಳು ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿವೆ. ಇನ್ನು ಮೂರು ಕೋತಿಗಳಿಗೆ ಪ್ರಜ್ಞೆಯಿದ್ದು ಪರಾರಿಯಾಗಿವೆ ಎಂದು ಪಶು ವೈದ್ಯ ಡಾ. ಮಹದೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್‌ಸಿಜಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಹಗರಣ: ಪಿ. ಕೃಷ್ಣ ಭಟ್ ಆರೋಪ
ಕೋತಿಗಳಿಗೆ ವಿಷಹಾಕಿ ಕೊಲೆ ಮಾಡಿ ಬಳಿಕ ಗೋಣಿ ಚೀಲದಲ್ಲಿ ತಂದು ಎಸೆಯಲಾಗಿದೆ. ಕಂದೇಗಾಲ ಗ್ರಾಮದ ಹೊರವಲಯದಲ್ಲಿ ಸದ್ಯ 18 ಕೋತಿಗಳ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಕೋತಿಗಳ ಮೃತದೇಹಗಳು ನೀಲಿ ಬಣ್ಣಕ್ಕೆ ತಿರುಗಿವೆ. ಈಗ ಮೃತಪಟ್ಟ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತೇವೆ. ಕೋತಿಗಳ ಅಂಗಾಂಗಗಳ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ವರದಿ ಬಂದ ಬಳಿಕ ಯಾವ ವಿಷ ನೀಡಿ ಕೊಲ್ಲಲಾಗಿದೆ ಎಂಬುದು ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಮಲೆಮಹದೇಶ್ವರಬೆಟ್ಟ ವನ್ಯಧಾಮ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಐದು ಹುಲಿಗಳು ಅಸಹಜವಾಗಿ ಸಾವನ್ನಪ್ಪಿದ್ದವು. ತನಿಖೆಯ ನಂತರ ಹುಲಿಗಳಿಗೆ ವಿಷವಿಕ್ಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ನಂತರ ಆರೋಪಿಗಳನ್ನು ಬಂಧಿಸಲಾಗಿತ್ತು. ಜೂನ್ 23ರಂದು ಕೊಳ್ಳೇಗಾಲದ ಮೀಣ್ಯಂ ಅರಣ್ಯದಲ್ಲಿ ಹಸುವೊಂದನ್ನು ಹುಲಿ ಬೇಟೆಯಾಡಿತ್ತು. ಆರೋಪಿಗಳು, ಅದೇ ಹಸುವಿನ ದೇಹಕ್ಕೆ ವಿಷ ಬೆರೆಸಿದ್ದರು. ವಿಷಬೆರೆತ ಹಸುವಿನ ದೇಹವನ್ನು ತಿಂದಿದ್ದರಿಂದಲೇ ಹುಲಿ ಮತ್ತು 4 ಮರಿಗಳು ಪ್ರಾಣಬಿಟ್ಟಿರುವುದು ಈಗಾಗಲೇ ದೃಢಪಟ್ಟಿದೆ.
ಇದನ್ನೂ ನೋಡಿ: LIVE | ಬಲವಂತದ ಭೂ ಸ್ವಾಧೀನ ವಿರೋಧಿಸಿ ಭೂಮಿ ಸತ್ಯಾಗ್ರಹ | ಸಾಹಿತಿ ಕಲಾವಿದರ ಬೆಂಬಲ
