ನವದೆಹಲಿ: ಮಿಜೋರಾಂನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆ ಕುಸಿದು 17 ಕಾರ್ಮಿಕರು ಮೃತಪಟ್ಟಿರುವ ಘಟನೆ ಮಿಜೋರಾಂನ ಸಾಯಿರಂಗ್ ಪ್ರದೇಶದಲ್ಲಿ ನಡೆದಿದೆ.
ಆಗಸ್ಟ್ 23 ರ ಬೆಳಗ್ಗೆ 10ರ ವೇಳೆಗೆ ರಾಜಧಾನಿ ಐಜೋಲ್‌ನಿಂದ 21 ಕಿ.ಮೀ ದೂರದಲ್ಲಿರುವ ಸಾಯಿರಂಗ್‌ನಲ್ಲಿ ಈ ದುರಂತ ನಡೆದಿದೆ. ಈ ಘಟನೆಯ ಸಂದರ್ಭ ಸುಮಾರು 35-40 ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿದ್ದರು, ಹಾಗಾಗಿ ಮರಣದ ಸಂಖ್ಯೆ ಹೆಚ್ಚಾಗುವ ಸಾದ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ವಿಶ್ವ ಹಿಂದೂ ಪರಿಷತ್ ಯಾತ್ರೆಗೆ ಅನುಮತಿ ನಿರಾಕರಿಸಿದ ನೂಹ್ ಜಿಲ್ಲಾಡಳಿತ
ಇಲ್ಲಿಯವರೆಗೂ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ.ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕುರುಂಗ್ ನದಿ ಮೇಲೆ ನಿರ್ಮಾಣವಾಗುತ್ತಿದ್ದ ರೈಲ್ವೆ ಸೇತುವೆಯು ಬೈರಾಬಿಯಿಂದ ಸಾಯಿರಾಂಗ್ ಅನ್ನು ಸಂಪರ್ಕಿಸುತ್ತದೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಂತಾಪ ಸೂಚಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನಿಡಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ನೆರವು ಘೋಷಿಸಿದೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಎಕ್ಸ್ (ಟ್ವೀಟರ್)ನಲ್ಲಿ ಪೋಸ್ಟ್ ಮಾಡಿದೆ.
Under construction railway over bridge at Sairang, near Aizawl collapsed today; atleast 17 workers died: Rescue under progress.
Deeply saddened and affected by this tragedy. I extend my deepest condolences to all the bereaved families and wishing a speedy recovery to the… pic.twitter.com/IbmjtHSPT7
— Zoramthanga (@ZoramthangaCM) August 23, 2023
ಪರಿಹಾರ ಘೋಷಿಸಿದ ರೈಲ್ವೆ ಸಚಿವ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಮಿಜೋರಾಂನ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿತ ಪ್ರಕರಣದಲ್ಲಿನ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಮಿಜೋರಾಂನಲ್ಲಿ ನಡೆದ ಅಹಿತಕರ ಘಟನೆಯಿಂದ ದುಃಖಿತನಾಗಿದ್ದೇನೆ. ಎನ್‌ಡಿಆರ್‌ಎಫ್, ರಾಜ್ಯ ಸರ್ಕಾರ ಮತ್ತು ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗಿದೆ. ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ತಲಾ 10 ಲಕ್ಷ ರೂ., ಗಾಯಾಳುಗಳಿಗೆ 2 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಿಗೆ 50,000 ರೂ. ನೀಡಲಾಗುವುದು’ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇತುವೆ ಕುಸಿದು ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, ‘ಮಿಜೋರಾಂನ ಸಾಯಿರಾಂಗ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದು, ಕಾರ್ಮಿಕರು ಸೇರಿದಂತೆ ಹಲವರು ಸಾವಿಗೀಡಾದ ಭೀಕರ ದುರಂತದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ರಕ್ಷಣಾ ಮತ್ತು ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ನಾವು ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಇದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು’ ಎಂದಿದ್ದಾರೆ.
‘ಘಟನೆಯನ್ನು ತನಿಖೆ ಮಾಡಲು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ’ ಎಂದು ಉತ್ತರ ಫ್ರಾಂಟಿಯರ್ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.