ಗೋವಾದಲ್ಲಿ ಕಾಂಗ್ರೆಸ್ ಶೋಚನೀಯ ಸ್ಥಿತಿ: 17 ಶಾಸಕರಲ್ಲಿ ಉಳಿದಿದ್ದು ಇಬ್ಬರು ಮಾತ್ರ!

ಪಣಜಿ: ಗೋವಾದಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಕಾಂಗ್ರೆಸ್ ಸ್ಥಿತಿ ಈಗ ಶೋಚನೀಯವಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿತ್ತು. ಆದರೆ ಅದಕ್ಕೆ ಅಧಿಕಾರ ಹಿಡಿಯುವ ಅವಕಾಶ ಸಿಕ್ಕಿರಲಿಲ್ಲ. ಈಗ ನಾಲ್ಕು ವರ್ಷದಲ್ಲಿ ಅದು 15 ಶಾಸಕರನ್ನು ಕಳೆದುಕೊಂಡಿದೆ. ಅಲ್ಲಿ ಈಗ ಕೇವಲ ಇಬ್ಬರು ಶಾಸಕರು ಉಳಿದಿದ್ದಾರೆ.

ಶಾಸಕ ಅಲೀಕ್ಸೋ ರೆಜಿನಾಲ್ಡೋ ಲಾರೆನ್ಸೊ ಅವರು ಸೋಮವಾರ ಹಠಾತ್ ರಾಜೀನಾಮೆ ನೀಡಿದ್ದಾರೆ. ಲಾರೆನ್ಸೋ ಅವರು ಕಳೆದ ಕೆಲವು ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ಎರಡನೇ ಶಾಸಕರಾಗಿದ್ದಾರೆ. ಮಂಗಳವಾರ ಕೋಲ್ಕತಾಗೆ ತೆರಳಿದ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೇರ್ಪಡೆಯಾಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಎಂಟು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಲಾರೆನ್ಸೋ ಅವರ ಹೆಸರೂ ಇತ್ತು.

ಲಾರೆನ್ಸೋ ಅವರ ನಿರ್ಗಮನದಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಹಿರಿಯ ನಾಯಕರು ಹೇಳಿದ್ದಾರೆ. ಪಕ್ಷದ ಚುನಾವಣಾ ಕಾರ್ಯತಂತ್ರಕ್ಕೆ ಅಡ್ಡಿಯಾಗುವುದಿಲ್ಲ. ಈ ವಿಶ್ವಾಸದ್ರೋಹ ಜನರಿಗೂ ಅರ್ಥವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.  ಮುಂಬರುವ ಚುನಾವಣೆ ಅನ್ನುವಷ್ಟರಲ್ಲಿ ಉಳಿದ ಇಬ್ಬರು ಶಾಸಕರು ಕಾಂಗ್ರೆಸ್‌ನಲ್ಲಿ ಇರಬಹುದು ಅಥವಾ ಪಕ್ಷಾಂತರ ಮಾಡಬಹುದು ಎಂದು ಗೋವಾದ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *