ಆಸ್ಪತ್ರೆ ಅಗ್ನಿ ಅವಘಡ: ನಾಲ್ಕು ಕಂದಮ್ಮಗಳು ಸಜೀವ ದಹನ

ಭೋಪಾಲ್: ಮಧ್ಯ ಪ್ರದೇಶದ ಸರ್ಕಾರಿ ಸ್ವಾಮ್ಯದ ಕಮಲಾ ನೆಹರು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇನ್ನೂ ಪ್ರಪಂಚವನ್ನೇ ನೋಡದ ನಾಲ್ಕು ಕಂದಮ್ಮಗಳು ಸಜೀವ ದಹನವಾಗಿವೆ.

ಅಗ್ನಿ ಅವಘಡ ಸಂಭವಿಸಿದಾಗ 50 ಮಕ್ಕಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಮೃತಪಟ್ಟ ನಾಲ್ಕು ಕಂದಮ್ಮಗಳಿಗೆ ಒಂದರಿಂದ ಒಂಬತ್ತು ದಿನಗಳಾಗಿವೆ. ಅವರ ಪೋಷಕರು ಇನ್ನೂ ನಾಮಕರಣ ಸಹ ಮಾಡಿರಲಿಲ್ಲ.

ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇದು ಅತ್ಯಂತ ನೋವಿನ ಸಂಗತಿ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಬೆಂಕಿಯ ಕೆನ್ನಾಲಿಗೆ ತಹಬದಿಗೆ ಬಂದಿದೆ ಎಂದು ಸಿಎಂ ಶಿವರಾಜ ಸಿಂಗ್  ಚೌಹಾಣ್ ಟ್ವೀಟ್ ಮಾಡಿದ್ದಾರೆ.

 

ಕಮಲಾ ನೆಹರು ಮಕ್ಕಳ ಆಸ್ಪತ್ರೆಯ ವಿಶೇಷ ನವಜಾತ ಶಿಶು ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ಕಾರಣ ವಾರ್ಡ್‍ನೊಳಗೆ ಕತ್ತಲೆ ಆವರಿಸಿತ್ತು. ತಕ್ಷಣವೇ ಮಕ್ಕಳನ್ನು ಪಕ್ಕದ ವಾರ್ಡ್‍ಗೆ ಸ್ಥಳಾಂತರಿಸಲಾಯಿತು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಹೇಳಿದ್ದಾರೆ.

ಐಸಿಯು ಹೊಂದಿರುವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ವಾರ್ಡ್‍ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 8-10 ಅಗ್ನಿಶಾಮಕ ಇಂಜಿನಿಯರ್‍ ಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಫತೇಘರ್ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಜುಬರ್ ಖಾನ್ ಅವರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *