ಕೋಲ್ಕತ್ತಾ: ಮೊಬೈಲ್ ಸ್ಮಾರ್ಟ್ಫೋನ್ ಖರೀದಿಸಲು ಹಣ ಹೊಂದಿಸುವ ನಿಟ್ಟಿನಲ್ಲಿ 16 ವರ್ಷದ ಬಾಲಕಿಯೊಬ್ಬಳು ತನ್ನ ರಕ್ತವನ್ನು ಮಾರಾಟ ಮಾಡಲು ಮುಂದಾದ ಆಘಾತಕಾರಿ ಘಟನೆಯೊಂದ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರದ ತಪನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಿನಾಜ್ಪುರದ ಕರ್ದಾ ನಿವಾಸಿಯಾಗಿರುವ ಬಾಲಕಿಯು 12ನೇ ತರಗತಿ ಓದುತ್ತಿದ್ದಾಳೆ. ಬಾಲಕಿಯು ರೂ. 9000 ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದಾಳೆ. ಆದರೆಮ ಆದರೆ ಅಷ್ಟೊಂದು ಹಣವನ್ನು ಹೇಗೆ ಹೊಂದಿಸಬೇಕು? ಮನೆಯಲ್ಲಿ ಕೇಳಿದರೆ ಆಗುವುದಿಲ್ಲ. ಇನ್ನು ಸ್ನೇಹಿತರ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು? ಆಗ ಆಕೆಗೆ ಹೊಳೆದದ್ದು ರಕ್ತದಾನ ಮಾಡಿ ಹಣವನ್ನು ಪಡೆಯುವುದು ಎಂಬ ಆಲೋಚನೆ ಮಾಡಿ, ಸಮೀಪದ ಬಾಲೂರ್ಘಾಟ್ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದಾಳೆ.
ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಮಾತನಾಡಿದ ಬಾಲಕಿಯು ರಕ್ತ ನೀಡುತ್ತೇನೆ ಅದರ ಬದಲು ಎಷ್ಟು ಹಣ ನೀಡುತ್ತೀರಿ ಎಂದು ಕೇಳಿದ್ದಾಳೆ. ಇದರಿಂದ ಅಲ್ಲಿನ ಉದ್ಯೋಗಿಗಳು ಅನುಮಾನಗೊಂಡಿದ್ದಾರೆ. ‘ಆ ಹುಡುಗಿ ಆಸ್ಪತ್ರೆಗೆ ಬಂದು, ತಾನು ರಕ್ತದಾನ ಮಾಡುತ್ತೇನೆ. ಆದರೆ ಅದರ ಬದಲಾಗಿ ಹಣ ಕೊಡಬೇಕು ಎಂದು ಕೇಳಿದಳು. ನಿಜಕ್ಕೂ ಇದನ್ನು ಕೇಳಿ ಆಘಾತ ಮತ್ತು ಅನುಮಾನ ಉಂಟಾಯಿತು’ ಎಂದು ರಕ್ತನಿಧಿ ಬ್ಯಾಂಕ್ ಸಿಬ್ಬಂದಿಯು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಆಸ್ಪತ್ರೆಯ ಸಿಬ್ಬಂದಿಯು ತಕ್ಷಣವೇ ಮಕ್ಕಳ ಸಹಾಯವಾಣಿ ಇಲಾಖೆಗೆ ವಿಷಯವನ್ನು ತಿಳಿಸಿತು. ಸದ್ಯ ಇಲಾಖೆಯ ಸದಸ್ಯೆ ರೀಟಾ ಮಹ್ತೋ ಈ ಹುಡುಗಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ‘ಇನ್ನೇನು ಸದ್ಯದಲ್ಲೇ ನನ್ನ ಸ್ಮಾರ್ಟ್ಫೋನ್ ಡೆಲಿವರಿ ಆಗಲಿದೆ. ಆದ್ದರಿಂದ ಅದಕ್ಕಾಗಿ ಹಣವನ್ನು ಹೊಂದಿಸಲು ಹೀಗೆಲ್ಲ ಯೋಚಿಸಿದೆ’ ಎಂದು ಬಾಲಕಿ ಹೇಳಿರುವುದಾಗಿ ವರದಿಯಾಗಿದೆ.