ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಮತ್ತು ಭಾನುವಾರ ಬೆಳಗಿನವರೆಗೂ ಕಳೆದ 41 ವರ್ಷಗಳಲ್ಲೇ ದಾಖಲೆಯ 153 ಮಿಮೀ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜುಲೈ 25, 1982ರ ನಂತರ ಒಂದೇ ದಿನದಲ್ಲಿ ಇಷ್ಟೊಂದು ದಾಖಲೆಯ ಮಳೆಯಾಗಿದೆ.
ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ ಮಾನ್ಸೂನ್ ಕೋಟಾ ಶೇ. 20 ರಷ್ಟನ್ನು ನಗರ ಪೊರೈಸಿದ್ದು, ಈ ಮುಂಗಾರಿನಲ್ಲಿ ದೆಹಲಿಯಲ್ಲಿ ಸರಾಸರಿ ದಾಖಲೆಯ 700 ಮಿ ಮೀ ಮಳೆಯಾಗಿದೆ.
ಇದನ್ನೂ ಓದಿ:ನಿರಂತರ ಮಳೆಯಿಂದಾಗಿ ಅಮರನಾಥ ಯಾತ್ರೆ ಮತ್ತೆ ಸ್ಥಗಿತ
ದೆಹಲಿಯಲ್ಲಿ 36 ಗಂಟೆ ಅವಧಿಯಲ್ಲಿ 260 ಮಿಲಿಮೀಟರ್ ಮಳೆಯಾಗಿದ್ದು, ಇದು ಇಡೀ ಜುಲೈ ತಿಂಗಳಲ್ಲಿ ಆಗುವ ಮಳೆಯ ಪ್ರಮಾಣಕ್ಕಿಂತಲೂ ಶೇಕಡ 32ರಷ್ಟು ಅಧಿಕ. ಸೋಮವಾರ ಕೂಡಾ ವ್ಯಾಪಕ ಮಳೆಯಾಗಿದೆ. ದೆಹಲಿ ಪ್ರಾಥಮಿಕ ಹವಾಮಾನ ಕೇಂದ್ರ ಸಫ್ದರ್‌ಜಂಗ್ ವೀಕ್ಷಣಾಲಯ ದಾಖಲಿಸಿದ ಮಳೆಯ ಮಾಹಿತಿಯ ಪ್ರಕಾರ, ನಗರವು ಶನಿವಾರ ಬೆಳಿಗ್ಗೆ 8:30 ರಿಂದ ಭಾನುವಾರ ಬೆಳಿಗ್ಗೆ 8:30 ರ ನಡುವೆ ಸುಮಾರು 153 ಮಿಮೀ ಮಳೆಯಾಗಿದೆ. ಇದು 1958 ರ ನಂತರ ಜುಲೈನಲ್ಲಿ ಸುರಿದ ಮೂರನೇ ದಿನದ ಅತ್ಯಧಿಕ ಹೆಚ್ಚಿನ ಮಳೆಯಾಗಿದೆ.
ನಿರಂತರ ಮಳೆಯು ದೆಹಲಿ ಎನ್‌ಸಿಆರ್ ನಿವಾಸಿಗಳಿಗೆ ವಾರಾಂತ್ಯದ-ಚಳಿಯ ವಾತಾವರಣವನ್ನು ತಂದರೆ, ಉದ್ಯಾನವನಗಳು, ಅಂಡರ್‌ಪಾಸ್‌ಗಳು, ಮಾರುಕಟ್ಟೆಗಳು ಮತ್ತು ಆಸ್ಪತ್ರೆ ಆವರಣಗಳು ಜಲಾವೃತಗೊಂಡು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಯಿತು.
ಬಲವಾದ ಗಾಳಿ ಮತ್ತು ತುಂತುರು ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕದಲ್ಲಿ ಅಡಚಣೆ ಉಂಟಾಗಿದೆ. ಪರಿಸ್ಥಿತಿಯನ್ನು ಸುಧಾರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳಿಗೆ ಭಾನುವಾರ ರಜೆಯನ್ನು ರದ್ದುಗೊಳಿಸಿದ ಸರ್ಕಾರ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು.