ಭಾರತ – ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯ: 140 ರನ್ ಗಳ ಜಯ ದಾಖಲಿಸಿದ ಭಾರತ ತಂಡ

ಅಹ್ಮದಾಬಾದ್: ಅಕ್ಟೋಬರ್ 2ರಿಂದ ಆರಂಭವಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ (100), ವಿಕೆಟ್ ಕೀಪರ್ ಧ್ರುವ ಜುರೆಲ್ (125), ಸ್ಪಿನ್ನರ್ ರವೀಂದ್ರ ಜಡೇಜಾ (ಅಜೇಯ 125) ಅವರ ಆಕರ್ಷಕ ಶತಕಗಳು ಹಾಗೂ ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ ನಿಂದಾಗಿ, ಗುಜರಾತ್ ನ ಅಹ್ಮದಾಬಾದ್ ನಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 140 ರನ್ ಗಳ ಜಯ ದಾಖಲಿಸಿದೆ.

ಪಂದ್ಯದ ಮೊದಲ ದಿನವಾದ ಅಕ್ಟೋಬರ್. 2ರಂದು, ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಆ ನಿರ್ಧಾರ ತಪ್ಪು ಎಂದು ಭಾರತೀಯ ಬೌಲರ್ ಗಳು ಸಾಬೀತು ಮಾಡಿದರು. ಮಾರಕ ಬೌಲಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಕ್ರಮವಾಗಿ 3 ಹಾಗೂ 4 ವಿಕೆಟ್ ಗಳಿಸಿ, ವೆಸ್ಟ್ ಇಂಡೀಸ್ ತಂಡದ ಮೊದಲ ಇನಿಂಗ್ಸ್ ಮೊತ್ತ ಕೇವಲ 90 ರನ್ ಇದ್ದಾಗಲೇ ಆರಂಭಿಕರೂ ಸೇರಿದಂತೆ ಪ್ರಮುಖ ಐದು ವಿಕೆಟ್ ಗಳನ್ನು ಕಬಳಿಸಿದರು.

ಇವರಿಬ್ಬರ ದಾಳಿಗೆ ಕೈ ಜೋಡಿಸಿದ ಕುಲ್ದೀಪ್ ಯಾದವ್ (25ಕ್ಕೆ) ಹಾಗೂ ವಾಷಿಂಗ್ಟನ್ ಸುಂದರ್ (9ಕ್ಕೆ 1) ಅವರೂ ವಿಂಡೀಸ್ ಪಡೆಯು 162 ರನ್ ಗಳಿಗೆ ಆಲೌಟ್ ಆಗಲು ಸಹಕರಿಸಿದರು.

ಇದನ್ನೂ ಓದಿ: ಭಾಗ 2| ಸಾಂಸ್ಥಿಕ ವ್ಯಕ್ತಿತ್ವದ ಹೋರಾಟದ ಬದುಕು – ಸಾಹಿತಿಯಾಗಿ ಪಾಪು

ಪಂದ್ಯದ ಮೊದಲ ದಿನವೇ ವಿಂಡೀಸ್ ತಂಡದ ಮೊದಲ ಇನಿಂಗ್ಸ್ ಮುಗಿದಿದ್ದರಿಂದ ಭಾರತ ತನ್ನ ಮೊದಲ ಇನಿಂಗ್ಸ್ ಆರಂಭಿಸಿತು. ಆರಂಭದಲ್ಲೇ ಯಶಸ್ವಿ ಜೈಪಾಲ್ (36) ಹಾಗೂ ಮೂರನೇ ಕ್ರಮಾಂಕದ ಸಾಯಿ ಸುದರ್ಶನ್ (7) ಅವರ ವಿಕೆಟ್ ಗಳು ಬೇಗನೇ ಪತನಗೊಂಡರೂ, ಮತ್ತೊಬ್ಬ ಆರಂಭಿಕ ಕೆಎಲ್ ರಾಹುಲ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಶುಭಮನ್ ಗಿಲ್ (50) ಅವರು ಗಟ್ಟಿಯಾಗಿ ಕ್ರೀಸ್ ನಲ್ಲಿ ತಳವೂರಿದ್ದರು.

ಮರುದಿನ, ಅ. 3ರಂದು ಆಟ ಮುಂದುವರಿದ ಕೆಲ ಹೊತ್ತಿನಲ್ಲೇ ಗಿಲ್ ಅವರ ವಿಕೆಟ್ ಪತನವಾಯಿತು. ಆದರೂ, ಶತಕ ಸಿಡಿಸುವ ಮೂಲಕ ಇನಿಂಗ್ಸ್ ಗೆ ಶಕ್ತಿ ತುಂಬಿದರು. ಆನಂತರ ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (ಅಜೇಯ 104) ಸಹಾಯದಿಂದ ಭಾರತ 448 ರನ್ ಗಳ ಭರ್ಜರಿ ಸ್ಕೋರ್ ದಾಖಲಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಅ. 4ರಂದು ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ ಗೆ ತರಗೆಲೆಗಳಂತೆ ಉದುರಿ ಹೋಗಿ ಕೇವಲ 146 ರನ್ ಗಳಿಗೆ ಆಲೌಟ್ ಆಯಿತಲ್ಲದೆ, ಭಾರತದ ವಿರುದ್ಧ ಇನಿಂಗ್ಸ್ ಹಾಗೂ 140 ರನ್ ಗಳ ಸೋಲೊಪ್ಪಿಕೊಂಡಿತು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡಿಯಾ ಮೊದಲ ಇನಿಂಗ್ಸ್ 162 (ಜಸ್ಟಿನ್ ಗ್ರೀವ್ಸ್ 32, ಶಯ್ ಹೋಪ್ 26; ಮೊಹಮ್ಮದ್ ಸಿರಾಜ್ 40ಕ್ಕೆ 3, ಜಸ್ ಪ್ರೀತ್ ಬುಮ್ರಾ 42ಕ್ಕೆ 3); ಭಾರತದ ಮೊದಲ ಇನಿಂಗ್ಸ್ 448ಕ್ಕೆ 5 (ಡಿಕ್ಲೇರ್) (ಧ್ರುವ್ ಜುರೆಲ್ 125, ರವೀಂದ್ರ ಜಡೇಜಾ 104, ಕೆಎಲ್ ರಾಹುಲ್ 100); ವೆಸ್ಟ್ ಇಂಡೀಸ್ ದ್ವಿತೀಯ ಇನಿಂಗ್ಸ್ 146 (ಅಲಿಕ್ ಅಥಾನೇಜ್ 38, ಜಸ್ಟಿನ್ ಗ್ರೀವ್ಸ್ 25; ರವೀಂದ್ರ ಜಡೇಜಾ 54ಕ್ಕೆ 4, ಮೊಹಮ್ಮದ್ ಸಿರಾಜ್ 31ಕ್ಕೆ 3).

ಇದನ್ನೂ ನೋಡಿ: ಧರ್ಮಸ್ಥಳ | ಕಾಗೆ – ಗಿಳಿ ಕಟ್ಟಿದ ಷಡ್ಯಂತ್ರ ಕಥೆ – ಸೂರ್ಯ ಮುಕುಂದರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *