ಮಧ್ಯಪ್ರದೇಶ ಜ,14: ಹುಡುಗಿಯರು 15ನೇ ವರ್ಷಕ್ಕೆ ಮಕ್ಕಳನ್ನು ಹೆರುವ ಸಾಮರ್ಥ್ಯ ಹೊಂದಿದಾಗ ಅವರ ಮದುವೆಯ ವಯಸ್ಸನ್ನು ಯಾಕೆ 18 ವರ್ಷದಿಂದ 21 ವರ್ಷಕ್ಕೆ ಏರಿಸುವ ಚಿಂತನೆ ನಡೆಸಲಾಗಿದೆ ಎಂದು ಮಧ್ಯಪ್ರದೇಶ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ ಪ್ರಶ್ನಿಸಿದ್ದಾರೆ. ಇವರ ಈ ಹೇಳಿಕೆ ಹಲವು ವಿವಾದಗಳಿಗೆ ಕಾರಣವಾಗಿದ್ದು, ಟೀಕೆಗಳಿಗೆ ಗುರಿಯಾಗಿದೆ. ಅನೇಕ ಮಹಿಳಾ ಸಂಘಟನೆಗಳು ಸಜ್ಜನ್ ಸಿಂಗ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿವೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಣ್ ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡುವತ್ತ ಕೇಂದ್ರ ಚಿಂತನೆ ನಡೆಸಬೇಕು ಎಂದಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಸಜ್ಜನ್ ಸಿಂಗ್ ಈ ರೀತಿ ಹೇಳಿದ್ದರು. ಇವರು ಮಾಜಿ ಸಿಎಂ ಕಮಲನಾಥ್ ರವರ ಆಪ್ತವಲಯದಲ್ಲಿ ಗುರಿತಿಸಿಕೊಂಡಿದ್ದಾರೆ.
ಸಜ್ಜನ್ ಸಿಂಗ್ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ತಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರು ಹೆಣ್ಣು ಮಕ್ಕಳು ಎಂಬುದನ್ನು ವರ್ಮಾ ಮರೆತಿದ್ದಾರೆ. ಅವರ ಹೇಳಿಕೆಗೆ ಅವರು ಸಾರ್ವಜನಿಕವಾಗಿ ಹುಡುಗಿಯರಿಂದ ಕ್ಷಮೆಯಾಚಿಸಬೇಕು ಎಂದು ಮಧ್ಯಪ್ರದೇಶ ರಾಜ್ಯ ಬಿಜೆಪಿ ವಕ್ತಾರ ನೇಹಾ ಬಗ್ಗಾ ಆಗ್ರಹಿಸಿದ್ದಾರೆ.
ಆಳುವ ಸರಕಾರಗಳು ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲು ವಿಫಲವಾಗಿವೆ. ಸಜ್ಜನ್ ಸಿಂಗ್ ಹೇಳಿಕೆ ಪುರುಷಪ್ರಧಾನ ಮೌಲ್ಯ ಜೀವಂತವಿದೆ ಎಂಬುದನ್ನು ತೋರಿಸುತ್ತದೆ. ಹೆಣ್ಣು ಸಂತಾನದ ಯಂತ್ರವಲ್ಲ. ಇದನ್ನು ರಾಜಕಾರಣಿಗಳು ಅರಿಯಬೇಕು ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.