ಕೋಲಾರ: ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಜೊತೆಗೆ ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಒದಗಿಸಬೇಕು ಹಾಗೂ ಸರೋಜಿನಿ ಮಹಿಷಿ ವರದಿಯ ಜಾರಿಗಾಗಿ ಆಗಸ್ಟ್ 14 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡಿವೈಎಫ್‌ಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಬುಧವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಿಲ್ಲಾ ಸಮಿತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮನ್ನು ಆಳುವ ಸರಕಾರಗಳು ಜಿಲ್ಲೆಯ ಒಟ್ಟು ಜನಸಂಖ್ಯೆಯ ಆಧಾರದಲ್ಲಿ ಉದ್ಯೋಗ ಸೃಷ್ಟಿಸಬೇಕು ನಿರುದ್ಯೋಗದ ಸಮಸ್ಯೆಯಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಾ ಇವೆ ಇವುಗಳನ್ನು ತಡೆಗಟ್ಟಲು ಯುವಜನರಿಗೆ ಉದ್ಯೋಗದ ಬದುಕಿನ ಬವಣೆಯನ್ನು ನೀಡಬೇಕಾಗಿದೆ ಎಂದರು
ರಾಜ್ಯ ಮತ್ತು ಕೇಂದ್ರ ಸರಕಾರಗಳು ರೂಪಿಸುತ್ತಿರುವ ನೀತಿಗಳು, ಆಡಳಿತದ ವೈಫಲ್ಯಗಳಿಂದಾಗಿ ನಿರುದ್ಯೋಗದ ಪ್ರಮಾಣ ಸ್ವಾತಂತ್ರ್ಯ ಭಾರತದಲ್ಲಿ ಎಂದೂ ಕಂಡರಿಯದ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಇದರಿಂದ ತಮ್ಮ ಅರ್ಹತೆಗೆ ಯೋಗ್ಯವಾದ ಉದ್ಯೋಗ, ಬದುಕಿನ ಭದ್ರತೆಗೆ ಬೇಕಾದ ಆದಾಯ ಇಲ್ಲದೆ ಯುವಜನತೆ ಹತಾಶರಾಗುತ್ತಿದ್ದಾರೆ ನಿರುದ್ಯೋಗದ ಪ್ರಮಾಣ ಹೆಚ್ಚಾಗಿ ಸಮಾಜದ ಮೇಲೆ ಪರಿಣಾಮಗಳನ್ನು ಬೀರುತ್ತಾ ಇವೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2,70,000 ಉದ್ಯೋಗಗಳು ಭರ್ತಿಯಾಗದೆ ಖಾಲಿ ಬಿದ್ದಿವೆ. ಖಾಸಗಿ ಉದ್ಯಮಗಳು ಕಾರ್ಮಿಕರನ್ನು ಬಳಸಿ ಬಿಸಾಕುವ ನೀತಿ ಅನುಸರಿಸುತ್ತಿವೆ. ಗುತ್ತಿಗೆ ಪದ್ದತಿಗಳು ಜೀತಪದ್ದತಿಯ ಹೊಸ ರೂಪದಂತೆ ಮಾರ್ಪಾಡಾಗಿದ್ದು ಜೀವನ ನಿರ್ವಹಣೆಗೆ ಬೇಕಾದ ವೇತನ, ಉದ್ಯೋಗ ಭದ್ರತೆ ಇಲ್ಲದೆ ಅಮಾನವೀಯ ದುಡಿಮೆಗೆ ಸಾಕ್ಷಿಯಾಗಿದೆ ಎಂದರು
ಚಿಕ್ಕ ಚಿಕ್ಕ ಉದ್ಯಮಗಳು ಸರಕಾರದ ನೀತಿಗಳಿಂದ ಮುಚ್ಚಲ್ಪಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ, ಕೈಗಾರಿಕೆಗಳ ಸ್ಥಾಪನೆಯ ಕಣ್ಣೋಟ ಸರಕಾರಗಳಲ್ಲಿ ಇಲ್ಲವೇ ಇಲ್ಲ ಎಂಬಂತಾಗಿದೆ. ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ನೇಮಕಾತಿಯ ಸಂದರ್ಭ ಸ್ಥಳೀಯರನ್ನು ಪೂರ್ಣವಾಗಿ ಕಡೆಗಣಿಸಿ ಹೊರಗಿನವರಿಗೆ ಮಣಿಹಾಕಲಾಗುತ್ತಿದೆ ಎಂದರು
ಡಿವೈಎಫ್ ಐ ಮಾಜಿ ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್, ಮಾತನಾಡಿ ಸರಕಾರದ ನೀತಿಗಳಿಂದ ಯುವಜನರು ಕಂಗಾಲಾಗುತ್ತಿದ್ದು, ತಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ, ಜೀವನ ಭದ್ರತೆ ಇಲ್ಲವಾಗಿ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ. ಶಿಕ್ಷಣ ಸಂಸ್ಥೆಗಳಿಂದ ಪದವಿಗಳನ್ನು ಹಿಡಿದು ಹೊರ ಬರುವ ಪರಿಣಿತ ಯುವ ಜನರು ತಮ್ಮ ಪದವಿಗೆ ಯೋಗ್ಯವಾದ ಉದ್ಯೋಗ ಇಲ್ಲದೆ ಅಸಹಾಯಕಾರಿ ನರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಉದ್ಯೋಗದ ಹಕ್ಕಿಗಾಗಿ ಹೋರಾಟ ರೂಪಿಸಲು ನಿರ್ಧರಿಸಿದೆ. ಅದರ ಭಾಗವಾಗಿ “ಉದ್ಯೋಗದ ಸೃಷ್ಟಿ ಹಾಗೂ ಸರೋಜಿನಿ ಮಹಿಷಿ ವರದಿಯ ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದ್ದು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಡಿವೈಎಫ್ ಐ ಜಿಲ್ಲಾ ಅಧ್ಯಕ್ಷ ಪಿ.ತಂಗರಾಜು, ಮಾಜಿ ಜಿಲ್ಲಾ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಮುಖಂಡರಾದ ವಿ.ಅಂಬರೀಷ್, ಮುಂತಾದವರು ಇದ್ದರು