ಭಾರತದ ರಾಜತಾಂತ್ರಿಕ ಕಛೇರಿಯ 130 ಸಿಬ್ಬಂದಿಗಳು ಕಾಬೂಲ್‌ನಿಂದ ಪ್ರಯಾಣ

ನವದೆಹಲಿ:‌ ಆಫ್ಗಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಯ ಎಲ್ಲಾ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ. ರಾಯಭಾರ ಕಚೇರಿಯ 130 ಸಿಬ್ಬಂದಿ ಸೇರಿದಂತೆ 640 ಜನರು ಮತ್ತು  ಕೆಲ ಮುಖ್ಯ ದಾಖಲೆಗಳನ್ನು ಹೊತ್ತು ಕಾಬೂಲ್​ನ ಹಮೀದ್ ಕರ್ಜೈ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಿಂದ ಭಾರತದ ವಾಯುಪಡೆ ವಿಮಾನ ಬೆಳಗ್ಗೆ ಹೊರಟಿದೆ.

ಇಂದು ಸಂಜೆಯ ಹೊತ್ತಿಗೆ ದೆಹಲಿಯಿಂದ 39 ಕಿಲೊಮೀಟರ್ ದೂರದಲ್ಲಿರುವ ಹಿಂದೋನ್ ನಿಲ್ದಾಣಕ್ಕೆ‌ ವಿಮಾನವು ಬಂದು ಇಳಿಯಲಿದೆ ಎಂದು ಬಲ್ಲಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಭಾರತೀಯ ವಾಯುಪಡೆಯ (ಐಎಎಫ್) ಸಿ-17 ಹೆವಿ-ಲಿ ಸಾರಿಗೆ ವಿಮಾನವು ನಿನ್ನೆ ಕೆಲವು ಸಿಬ್ಬಂದಿಯನ್ನು ಭಾರತಕ್ಕೆ ವಾಪಸ್ ಕರೆ ತಂದಿದ್ದು ಇಂದು ಎರಡನೆಯ ವಿಮಾನ ತೆರಳಿದ್ದು, ಎಲ್ಲರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗುತ್ತಿದೆ.

ಇದನ್ನು ಓದಿ: ಅಫ್ಘಾನಿಸ್ತಾನ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ, ಗಾಳಿಯಲ್ಲಿ ಗುಂಡು

ಆಫ್ಘನ್​​​​ ಜೊತೆ ಸತತ ಸಂಪರ್ಕದಲ್ಲಿರುವ ವಿದೇಶಾಂಗ ಸಚಿವ  ಜೈಶಂಕರ್, 2000ಕ್ಕೂ ಹೆಚ್ಚು ಮಂದಿ ವಾಪಸ್​ ಕರೆತರುವ ಪ್ರಯತ್ನ ನಡೆದಿದೆ. ಇ-ವಿಸಾ ಮೂಲಕ ನಿರಾಶ್ರಿತರಿಗೂ ತುರ್ತು ಪ್ರಯಾಣ ಅವಕಾಶ ಮಾಡಿಕೊಡಲಾಗುವುದು, 2 ದಿನದಲ್ಲಿ ಎಲ್ಲರನ್ನೂ ಕರೆತರುತ್ತೇವೆ ಎಂದು  ಮಾಹಿತಿ ನೀಡಿದ್ದಾರೆ.

ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ತಿಳಿಸಿದ್ದಾರೆ. “ಕಾಬೂಲ್​ನಲ್ಲಿ ಕಳೆದ ಕೆಲ ದಿನಗಳಲ್ಲಿ ಭದ್ರತಾ ಪರಿಸ್ಥಿತಿ ಬಿಗಡಾಯಿಸಿದೆ. ಆಫ್ಘಾನಿಸ್ತಾನದಲ್ಲಿನ ಎಲ್ಲಾ ಬೆಳವಣಿಗೆಗಳನ್ನು ಭಾರತ ಸರ್ಕಾರ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲಿರುವ ಸಿಖ್ ಮತ್ತು ಭಾರತೀಯ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಅವರು ಭಾರತಕ್ಕೆ ಬರಲು ಬಯಸುವ ಜನರಿಗೆ ನಾವು ವ್ಯವಸ್ಥೆ ಮಾಡುತ್ತೇವೆ” ಎಂದು ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ದಾಳಿ ಆರಂಭವಾದಾಗಲೇ ಭಾರತ ತನ್ನ ನಾಗರಿಕರಿಗೆ ವಾಪಸ್ ಬರುವಂತೆ ಸೂಚಿಸಿತ್ತು. ಇದೀಗ ಆಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ವಶವಾಗಿದೆ. ಆಫ್ಘಾನಿಸ್ತಾನವು ಬಹಳ ವೇಗವಾಗಿ ತಾಲಿಬಾನ್​ಗಳ ವಶವಾದ ರೀತಿಗೆ ಭಾರತ ಸೇರಿದಂತೆ ಹಲವು ದೇಶಗಳು ಅಚ್ಚರಿಪಟ್ಟಿವೆ.

ಆಫ್ಘಾನಿಸ್ತಾನದಲ್ಲಿ ಭಾರತ ಸಾಕಷ್ಟು ಹೂಡಿಕೆ ಮಾಡಿದೆ. ಅಲ್ಲಿ ಅನೇಕ ಮೂಲಸೌಕರ್ಯ ಯೋಜನೆಗಳು ಭಾರತದಿಂದ ಆಗುತ್ತಿವೆ. ಒಂದು ಅಂದಾಜಿನ ಪ್ರಕಾರ ಸುಮಾರು 500 ಯೋಜನೆಗಳಿಗೆ 3 ಬಿಲಿಯನ್ ಡಾಲರ್ (22 ಸಾವಿರ ಕೋಟಿ ರೂ) ಹಣವನ್ನ ಹೂಡಿಕೆ ಮಾಡಿದೆ. ತಾಲಿಬಾನ್ ಕೈವಶವಾಗಿರುವುದರಿಂದ ಈ ಯೋಜನೆಗಳ ಭವಿಷ್ಯದ ಮೇಲೆ ಆತಂಕ ಎದುರಾಗಿದೆ.

 

Donate Janashakthi Media

Leave a Reply

Your email address will not be published. Required fields are marked *