ಹೊಸದಿಲ್ಲಿ: ಎರಡನೇ ಹಂತದಲ್ಲಿ ಕರ್ನಾಟಕವೂ ಸೇರಿ 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಒಟ್ಟು 88 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದೆ.
ಕೇರಳ (20), ಕರ್ನಾಟಕ (14), ರಾಜಸ್ಥಾನ (13), ಉತ್ತರ ಪ್ರದೇಶ (8), ಮಧ್ಯ ಪ್ರದೇಶ (6), ಅಸ್ಸಾಂ (5), ಬಿಹಾರ (5), ಛತ್ತೀಸ್‌ಗಢ (3), ಪಶ್ಚಿಮ ಬಂಗಾಳ (3), ಮಹಾರಾಷ್ಟ್ರ (8), ತ್ರಿಪುರಾ (1), ಮಣಿಪುರ (1) ಮತ್ತು ಜಮ್ಮು-ಕಾಶ್ಮೀರದ ಒಂದು ಕ್ಷೇತ್ರಕ್ಕೆ ಮತದಾನ ನಡೆಯಿತು. ಒಟ್ಟಾರೆ ಶೇ 63ರಷ್ಟು ಮತದಾನವಾಗಿದೆ.
ತ್ರಿಪುರಾದಲ್ಲಿ ಅತ್ಯಧಿಕ 78.53% ಮತದಾನವಾಗಿದೆ. ಇನ್ನುಳಿದಂತೆ ಮಣಿಪುರ (77.18%), ಛತ್ತೀಸ್‌ಗಢ (73.05%), ಪಶ್ಚಿಮ ಬಂಗಾಳ (71.84%), ಅಸ್ಸಾಂ (70.66%), ಕೇರಳ (71%), ಕರ್ನಾಟಕ (70%), ಉತ್ತರ ಪ್ರದೇಶ (54%), ಮಹಾರಾಷ್ಟ್ರ (54%), ಮಧ್ಯ ಪ್ರದೇಶ (56%), ರಾಜಸ್ಥಾನ (63%), ಬಿಹಾರ (55%) ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ 72% ಮತದಾನವಾಗಿದೆ.
ಏ. 19ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ 88 ಕ್ಷೇತ್ರಗಳಿಗೆ ಮತದಾನವಾಗಿದ್ದು, ಇದರೊಂದಿಗೆ 190 ಕ್ಷೇತ್ರಗಳಿಗೆ ಚುನಾವಣೆ ಸಂಪನ್ನಗೊಂಡಿದೆ. ತಮಿಳುನಾಡು, ಕೇರಳ, ರಾಜಸ್ಥಾನ, ತ್ರಿಪುರಾ, ಮಣಿಪುರದ ಎಲ್ಲಾ ಕ್ಷೇತ್ರಗಳಿಗೆ ಚುನಾವಣೆ ಮುಗಿದಂತಾಗಿದೆ.