ಅಧ್ಯಕ್ಷ ಟ್ರಂಪ್ ಅವರ ಕಲ್ಯಾಣ ಯೋಜನೆಗಳ ಕಡಿತಗಳು ಹಾಗೂ ವಿವಾದಾಸ್ಪದ ನೀತಿಗಳ ವಿರುದ್ಧ, ಏಪ್ರಿಲ್ 5ರಂದು (ಶನಿವಾರ) ಯು.ಎಸ್ ನ 1200 ಸ್ತಳಗಳಲ್ಲಿ ನಡೆದ “ಹ್ಯಾಂಡ್ಸ್ ಆಫ್” (ಮುಟ್ಟಬೇಡಿ) ಪ್ರತಿಭಟನೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನಸಾಗರ ಕಂಡುಬಂದಿದೆ. ಲಕ್ಷಾಂತರ ಜನ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದು, ಇದು 2020ರ ನಂತರ ಅತಿ ದೊಡ್ಡ ಪ್ರತಿಭಟನೆಗಳು ಎನ್ನಲಾಗಿದೆ.
“ನಮ್ಮ ಪ್ರಜಾಪ್ರಭುತ್ವ ಮುಟ್ಟಬೇಡಿ”, “ನಮ್ಮ ಸಂವಿಧಾನ ಮುಟ್ಟಬೇಡಿ”, “ನಮ್ಮ ನಾಗರಿಕ ಹಕ್ಕುಗಳನ್ನು ಮುಟ್ಟಬೇಡಿ”, “ನಮ್ಮ ಯೂನಿಯನ್, ಉದ್ಯೋಗ ಮುಟ್ಟಬೇಡಿ”, “ನಮ್ಮ ಮೇಡಿಕೇರ್ ಯೋಜನೆ ಮುಟ್ಟಬೇಡಿ”, “ನಮ್ಮ ಪೋಸ್ಟ್ ಸೇವೆ ಮುಟ್ಟಬೇಡಿ”, “ನಮ್ಮ ಪಬ್ಲಿಕ್ ಸ್ಕೂಲ್ ಮುಟ್ಟಬೇಡಿ”, “ಬಿಲಿಯನೇರ್ ಗಳಿಗೆ ತೆರಿಗೆ ಹಾಕಿ” – ಇವು ಎಲ್ಲೆಡೆ ಕೇಳಿಬಂದ ಘೋಷಣೆಗಳು. ರಾಜಧಾನಿ ವಾಶಿಂಗ್ ಟನ್ ಡಿ.ಸಿ ಯಲ್ಲಿ “ನೇಶನಲ್ ಮಾಲ್” ಪ್ರದೇಶದಲ್ಲಿ ಮುಖ್ಯ ಮತ್ತು ಅತಿ ದೊಡ್ಡ ಪ್ರತಿಭಟನೆ ನಡೆಯಿತು.
ಕೆಲವು ಸಂಸತ್ ಸದಸ್ಯರನ್ನು ಒಳಗೊಂಡು ಹಲವು ಡೆಮೋಕ್ರಾಟಿಕ್ ಪಕ್ಷದ ಪ್ರಮುಖ ಮುಖಂಡರು ಈ ಪ್ರತಿಭಟನೆಗಳಲ್ಲಿ ಭಾಗವಹಿಸಿ,ಟ್ರಂಪ್ ಆಡಳಿತದ ದುರ್ವ್ಯವಸ್ಥೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳಿಂದ ವಿಮುಖವಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ಮೆರಿಲ್ಯಾಂಡ್‌ನ ಪ್ರತಿನಿಧಿ ಜೆಮಿ ರಾಸ್ಕಿನ್, ವಾಷಿಂಗ್ಟನ್ ಡಿ.ಸಿ.ಯ ನ್ಯಾಶನಲ್ ಮಾಲ್‌ನಲ್ಲಿ 1 ಲಕ್ಷಕ್ಕಿಂತ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಟ್ರಂಪ್ ಆಡಳಿತದ ಹಲವಾರು ನೀತಿಗಳನ್ನು ಟೀಕಿಸಿ, ಪ್ರತಿ ರಾಷ್ಟ್ರದ ಮೇಲೆ ಹೇರಿದ ಆಮದು ಸುಂಕಗಳನ್ನು “ಮೂರ್ಖತನ ಮತ್ತು ಅಸಂವಿಧಾನಿಕ” ಎಂದು ಕರೆದು, ಅದನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.
ವಾಷಿಂಗ್ಟನ್ ಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವರು, ತಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಭವಿಷ್ಯ ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. “ನಾನು ಚೆನ್ನಾಗಿ ನಿದ್ರೆ ಮಾಡಲಾಗುತ್ತಿಲ್ಲ. ನನಗೆ ಭಯವಾಗುತ್ತಿದೆ,” “ನಾವು ಜೀವವಿಡೀ ಉಳಿಸಿಕೊಂಡಿರುವ ನಿವೃತ್ತಿ ಹಣ, ಅದು ನಮ್ಮ ಬಳಿ ಉಳಿಯುವುದೇ ಎಂಬ ಅನುಮಾನ ಇದೆ. ಅಮೆರಿಕದ ಮಾರುಕಟ್ಟೆ ಏನೇನಾಗುತ್ತದೆ ಗೊತ್ತಿಲ್ಲ. ಮುಂಚೆ ಸ್ನೇಹಪೂರ್ಣ ಸಂಬಂಧ ಹೊಂದಿದ್ದ ದೇಶಗಳನ್ನೇ ಶತ್ರುಗಳನ್ನಾಗಿ ಮಾಡಲಾಗಿದೆ. ಎಲ್ಲವೂ ಅಸ್ಪಷ್ಟವಾಗಿದೆ.” ಇಂತಹ ಆತಂಕ ಸರ್ವೇ ಸಾಮಾನ್ಯವಾಗಿತ್ತು.
ಟ್ರಂಪ್ ನಂತರ ಎಲೊನ್ ಮಸ್ಕ್ ಪ್ರತಿಭಟನೆಗಳ ಘೋಷಣೆಗಳಲ್ಲಿ ಪೋಸ್ಟರ್ ಗಳಲ್ಲಿ ಅತ್ಯಂತ ಹೆಚ್ಚು ತೀವ್ರ ಟೀಕೆಗೊಳಗಾಗಿದ್ದರು. ಸರಕಾರಿ ದಕ್ಷತೆಯ ಹೆಸರಿನಲ್ಲಿ ಮಸ್ಕ್ ನಾಯಕತ್ವದ ಡಿ.ಒ.ಜಿ.ಇ ಕೈಗೊಂಡಿರುವ ಜನ-ವಿರೋಧಿ ಕ್ರಮಗಳು – ಎಲ್ಲ ಫೆಡರೆಲ್ ಉದ್ಯೋಗಿಗಳ ಯೂನಿಯನ್ ಹಕ್ಕನ್ನು ರದ್ದು ಮಾಡುತ್ತಿರುವುದು, ಶಿಕ್ಷಣ ಸೇರಿದಂತೆ ಹಲವಾರು ಇಲಾಖೆಗಳನ್ನು, ಕಲ್ಯಾಣ ಯೋಜನೆಗಳನ್ನು ರದ್ದು ಮಾಡಿರುವುದು – ಅತ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ವಾಶಿಂಗ್ ಟನ್ ಡಿ.ಸಿ ಅಲ್ಲದೆ ನ್ಯೂಯರ್ಕ್, ಬೋಸ್ಟನ್, ಚಿಕಾಗೊ, ಸಾನ್ ಫ್ರಾನ್ಸಿಸ್ಕೊ, ಸಾಂಡಿಯಾಗೊ, ಒಕಲ್ಯಾಂಡ್ ಗಳಲ್ಲಿ ಅತಿ ದೊಡ್ಡ ಪ್ರತಿಭಟನೆಗಳು ನಡೆದವು.