ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾದಗಿನಿಂದಲೂ ಮಕ್ಕಳ ಶೈಕ್ಷಣಿಕದ ಉನ್ನತಿಗೆ, ಮಕ್ಕಳು ಶಾಲೆಗಳಲ್ಲಿ ಗೈರುಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಬಿಸಿಯೂಟ ನೌಕರರು 60 ವರ್ಷ ವಯೋಮಾನದ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ವಜಾ ಮಾಡುವುದನ್ನು ಖಂಡಿಸಿ ಇಂದು ರಾಜ್ಯದ್ಯಂತ ಪ್ರತಿಭಟನೆಗಳು ನಡೆದವು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನೌಕರರ ವಿರೋಧಿ ನೀತಿಯನ್ನು ಖಂಡಿಸಿದರು.
ರಾಜ್ಯ ಬಿಜೆಪಿ ಸರ್ಕಾರವು 60 ವರ್ಷ ಪೂರ್ಣಗೊಂಡಿದೆ ಎಂಬ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ರಾಜ್ಯದಲ್ಲಿನ ಸುಮಾರು 12000 ಬಿಸಿಯೂಟ ನೌಕರರನ್ನು ಸೇವೆ ವಜಾಗೊಳಿಸುತ್ತಿದೆ.
ಬಿಸಿಯೂಟ ನೌಕರರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ಬೇಯಿಸಿ ಉಣಬಡಿಸುತ್ತಿದ್ದಾರೆ. ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತನದ ಶ್ರಮವಿದೆ. ಆದರೆ, ನೌಕರರ ಬಗ್ಗೆ ಕಾಳಜಿ ವಹಿಸದಿರುವುದು ಖಂಡನೀಯ ಎಂದಿದ್ದಾರೆ.
ಅಕ್ಷರ ದಾಸೋಹ ಸಂಘ 2016ರಿಂದಲೂ ವಯೋಮಿತಿ ಆಧಾರದ ಮೇಲೆ ನಿವೃತ್ತಿ ಸೌಲಭ್ಯ ನೀಡಬೇಕೆಂದು ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದೆ. ಆದರೆ, ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಹೆಚ್ಚಿನ ಮುತುವರ್ಜಿ ವಹಿಸಿಲ್ಲ. ಆದಾಗ್ಯೂ, ಬಿಸಿಯೂಟ ನೌಕರರ ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಸಚಿವರೊಂದಿಗೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರೊಂದಿಗೆ, ಎಲ್ಐಸಿಯ ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಸಂಘಟನೆಯ ಮುಖಂಡರೊಂದಿಗೆ ಜಂಟಿಯಾಗಿ ಹಲವು ಸಭೆಗಳಾಗಿವೆ.
ಸಭೆಗಳಲ್ಲಿ ಬಿಸಿಯೂಟ ನೌಕರರ ವೇತನದಲ್ಲಿ 100 ರೂ.ಗಳು ಹಾಗೂ ಸರ್ಕಾರ ನೀಡಿ, ಎಲ್ಐಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆ ಜಾರಿಗೊಳಿಸಲು ಸೂಚಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಯಸ್ಸಿನ ಮಾಹಿತಿಯನ್ನೂ ಸಂಗ್ರಹಣೆ ಮಾಡಲಾಗಿತ್ತು. ಇಲಾಖೆಯ ಅಧಿಕಾರಿಗಳು ಹಾಗೂ ಸಂಘಟನೆಯ ಮುಖಂಡರನ್ನು ಒಳಗೊಂಡ ಸಮಿತಿಯೊಂದನ್ನೂ ರಚಿಸಲಾಗಿತ್ತು. ಆದಾಗ್ಯೂ, ಎಲ್ಲ ಕ್ರಮಗಳು ಜಾರಿಯಾಗುವ ಮೊದಲೇ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಖಂಡಿಸಿದ್ದಾರೆ.
ಮಹಿಳಾ ವಿರೋಧಿ ಧೋರಣೆಯಿಂದ ಈಗ ರಾಜ್ಯದ ಸುಮಾರು 12 ಸಾವಿರ ಬಿಸಿಯೂಟ ನೌಕರರ ಭವಿಷ್ಯಕ್ಕೆ ಕುತ್ತಾಗಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಹಾಗೂ ಬಡ, ವಿಧವಾ, ಅಲ್ಪಸಂಖ್ಯಾತ, ದಲಿತ, ಕೂಲಿಕಾರ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ ಅವರು, ಸರ್ಕಾರ ನಿವೃತ್ತಿ ವೇತನ ನಿಗದಿ ಮಾಡುವವರಿಗೆ ತಕ್ಷಣದಲ್ಲಿ ಬಿಡುಗಡೆಯಾದ ಬಿಸಿಯೂಟ ನೌಕರರಿಗೆ ಇಡಿಗಂಟು ಒಂದು ಲಕ್ಷ ರೂ.ಗಳ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.