ತಿರುಪತಿ: ನೆನ್ನೆ ರಾತ್ರಿ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಐಸಿಯುನಲ್ಲಿ ದಾಖಲಾಗಿದ್ದ 11 ಮಂದಿ ಕೋವಿಡ್ ರೋಗಿಗಳು ಮರಣ ಹೊಂದಿದ್ದಾರೆ.
ಈ ಘಟನೆಯು ನೆನ್ನೆ ರಾತ್ರಿ ಸಂಭವಿಸಿದೆ. ಆಮ್ಲಜನಕ ತುಂಬಿದ್ದ ಸಿಲಿಂಡರ್‌ಗಳನ್ನು ಖಾಲಿಯಾಗಿದ್ದ ಜಾಗದಲ್ಲಿ ಸ್ಥಾಪಿಸುವುದು ಐದು ನಿಮಿಷ ತಡವಾಗಿದ್ದರಿಂದ ಈ ಘಟನೆ ಸಂಭವಿಸಿದೆ. ತಿರುಪತಿ ಬಳಿಯ ಶ್ರೀ ವೆಂಕಟೇಶ್ವರ ರಾಮ ನಾರಾಯಣ್ ರುನಿಯಾ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ಜರುಗಿದೆ ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ ಹರಿನಾರಾಯಣ್ ಅವರು ಹೇಳಿದ್ದಾರೆ.
ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ವೆಂಟಿಲೇಟರ್ ಸಿಗದೆ ಮೂವರ ದಾರುಣ ಸಾವು
ಚಿತ್ತೂರು, ನೆಲ್ಲೂರು ಮತ್ತು ಕಡಪ ಜಿಲ್ಲೆಗಳ ಕೋವಿಡ್ ಸೋಂಕಿತ ರೋಗಿಗಳು ಆಸ್ಪತ್ರೆಯ ಐಸಿಯು ಮತ್ತು ಆಮ್ಲಜನಕದ ವ್ಯವಸ್ಥೆ ಹೊಂದಿರುವ ಹಾಸಿಗೆಗಳಲ್ಲಿ ಸರಿಸುಮಾರು 700 ಮಂದಿ ಮತ್ತು ಸಾಮಾನ್ಯ ವಾರ್ಡ್ಗಳಲ್ಲಿ 300 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನಿಖೆಗೆ ಆದೇಶಿಸಿದ ಸಿಎಂ ಜಗನ್‌ಮೋಹನ್ ರೆಡ್ಡಿ
ಈ ಘಟನೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿ, ತನಿಖೆಗೆ ಆದೇಶಿಸಿದ್ದಾರೆ. ವಿಸ್ತೃತವಾಗಿ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. ಇಂತಹ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸುವಂತೆ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಆರೋಗ್ಯ ಸಚಿವ ಅಲ್ಲಾ ಕಲಿಕೃಷ್ಣ ಶ್ರೀನಿವಾಸ್ ಅವರು ಚಿತ್ತೂರು ಜಿಲ್ಲೆಯ ಅಧಿಕಾರಿಗಳ ಜತೆ ಮತ್ತು ರೂಯಾ ಆಸ್ಪತ್ರೆ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ದು, ಆಮ್ಲಜನಕ ಪೂರೈಕೆ ಸಮರ್ಪಕವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನು ಓದಿ: ವಾಹನ ಓಡಾಟಕ್ಕೆ ಬ್ರೇಕ್ : 8 ಕಿಮಿ ನಡೆದ ತುಂಬು ಗರ್ಭಿಣಿ
ನೆನ್ನೆ ಸಂಜೆ ದುರಂತ ಸಂಭವಿಸಿದ ಸಂದರ್ಭದಲ್ಲಿ ಕೆಲವು ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು ಎನ್ನಲಾಗಿದೆ. ಆದರೆ ಕನಿಷ್ಠ 25 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಾಗಿರಲಿಲ್ಲ ಎಂದು ಸೋಂಕಿತರ ಕುಟುಂಬದವರು, ಸಂಬಂಧಿಗಳು ಆರೋಪಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿವೆ.
ಈ ಘಟನೆ ಗಂಭೀರ ಸ್ವರೂಪ ಪಡೆದಿದ್ದು ಮೃತರ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ್ದರಿಂದ ಎನ್ನಲಾಗಿದೆ. ಇದರಿಂದ ಆಸ್ಪತ್ರೆಯ ಕಿಟಕಿ ಗಾಜು, ಚಿಕಿತ್ಸಾ ಉಪಕರಣಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಾಂಧಲೆಯಿಂದ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.