ಸಾರಿಗೆ ನೌಕರರಿಗೆ ಬಾಕಿ ಉಳಿದಿರುವ ವೇತನ; 11 ಬೇಡಿಕೆಗಳನ್ನು ಈಡೇರಿಸಿ: ಎನ್. ಶ್ರೀನಿವಾಸ್

ಬೆಂಗಳೂರು: ಜೂನ್‌ 26ರಂದು ರಾಜ್ಯದ ಸಾರಿಗೆ ನೌಕರರಿಗೆ ಬಾಕಿ ಉಳಿದಿರುವ ವೇತನ, ನಿವೃತ್ತಿ ಸೌಲಭ್ಯಗಳ ಪಾವತಿ, ವೇತನ ಪರಿಷ್ಕರಣೆ ಜಾರಿಗೊಳಿಸುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಶ್ರೀನಿವಾಸ್ ಕೋರಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಕಳುಹಿಸಿರುವ ಈ ಮನವಿಯಲ್ಲಿ, ಸಾರಿಗೆ ನೌಕರರ ಆರ್ಥಿಕ ಸ್ಥಿತಿಗತಿ ಮತ್ತು ಹಕ್ಕುಗಳ ಕುರಿತು 11 ಪ್ರಮುಖ ಬೇಡಿಕೆಗಳ ಪಟ್ಟಿ ನೀಡಲಾಗಿದೆ.

ಅನೇಕ ವರ್ಷಗಳಿಂದ ನೌಕರರಿಗೆ ಪ್ರಾಪ್ತವಾಗಬೇಕಾದ ವೇತನ ಬಾಕಿಯಿದೆ ಎಂಬುದು ಪ್ರಮುಖ ಅಂಶವಾಗಿದೆ. ನೌಕರರ ಪರವಾಗಿ ಸಲ್ಲಿಸಿರುವ ಈ ಮನವಿಗೆ ಸಂಬಂಧಪಟ್ಟಂತೆ ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಶ್ರೀನಿವಾಸ್ ಒತ್ತಾಯಿಸಿದ್ದಾರೆ.ನೌಕರರು ತಮ್ಮ ದುಡಿಯುವ ಶ್ರಮದಿಂದ ರಾಜ್ಯದ ಲಕ್ಷಾಂತರ ಜನತೆಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಸುಲಭ ಸಾರಿಗೆ ಸೇವೆ ಒದಗಿಸುತ್ತಿದ್ದಾರೆ.

ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ವಿಶೇಷಚೇತನರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಈ ಸೇವೆ ಅವಶ್ಯಕವಾಗಿದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಸಂಸ್ಥೆಗಳಾಗಿ ಹೆಮ್ಮೆಯಿಂದ ಕೆಲಸಮಾಡುತ್ತಿರುವ ನೌಕರರು, ತಮ್ಮ ಹಕ್ಕುಗಳಾದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಈ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ವಾಹನಗಳಿಗೆ ಕಲಬೆರಕೆ ಇಂಧನ; ಇದ್ದಕ್ಕಿದ್ದಂತೆ ರಸ್ತೆಯಲ್ಲಿ ನಿಂತ 19 ಕಾರುಗಳು

1. 2020ನೇ ಸಾಲಿನ ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ವೇತನ 2020ರ ಜನವರಿಯಿಂದ 2023ರ ಫೆಬ್ರವರಿ ವರೆಗೆ (38 ತಿಂಗಳು) ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಅನ್ವಯ ಬಾಕಿ ವೇತನ ಪಾವತಿಸಬೇಕಾಗಿದೆ.ಈ ಅವಧಿಗೆ ಒಟ್ಟು ₹1,750 ಕೋಟಿ (ಕೆಲವು ಮೂಲಗಳ ಪ್ರಕಾರ ₹1,785 ಕೋಟಿ) ವೇತನ ಬಾಕಿ ಉಳಿದಿದೆ ಎಂದು ನೌಕರರ ಸಂಘಗಳು ಆಗಾಗ್ಗೆ ಒತ್ತಾಯಿಸುತ್ತಿವೆ.ಈ ಬಾಕಿ ವೇತನ ಪಾವತಿಸಬೇಕೆಂದು ನೌಕರರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಈವರೆಗೆ ಈ ಬಾಕಿಯನ್ನು ಪೂರ್ತಿಯಾಗಿ ಪಾವತಿಸಿಲ್ಲ.

2. 2024ನೇ ಸಾಲಿಗೆ ವೇತನ ಪರಿಷ್ಕರಣೆ ಇನ್ನೂ ಜಾರಿಗೆ ಬಂದಿಲ್ಲ;2024ರ ಜನವರಿಯಿಂದ ಹೊಸ ವೇತನ ಪರಿಷ್ಕರಣೆ ಜಾರಿಗೆ ತರಬೇಕೆಂದು ನೌಕರರ ಒತ್ತಾಯ ಇದೆ.ನೌಕರರ ಸಂಘಗಳು 25% ವೇತನ ಹೆಚ್ಚಳ ಹಾಗೂ ಸರ್ಕಾರದ ನೌಕರರಿಗೆ ಇರುವ ಸಮಾನ ವೇತನ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸುತ್ತಿವೆ.ಈ ಬಗ್ಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ಇಂದಿಗೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ.

3. ನಿವೃತ್ತಿ ಹೊಂದಿದ ನೌಕರರಿಗೆ ಆರ್ಥಿಕ ಸೌಲಭ್ಯಗಳು ಪಾವತಿಯಾಗಿಲ್ಲ; ನಿವೃತ್ತರಾದ ನೌಕರರಿಗೆ ಪಾವತಿಸಬೇಕಾದ ಗ್ರ್ಯಾಚ್ಯುಟಿ, ಪಿಂಚಣಿ, ಡಿಯರ್ನೆಸ್ ಅಲಾವನ್ಸ್ ಸೇರಿದಂತೆ ವಿವಿಧ ಸೌಲಭ್ಯಗಳ ಬಾಕಿ ಮೊತ್ತ ₹399.29 ಕೋಟಿ (ಕೆಲವು ಮೂಲಗಳ ಪ್ರಕಾರ ₹325 ಕೋಟಿ) ಆಗಿದೆ.ಈ ಬಾಕಿ ಸೌಲಭ್ಯಗಳನ್ನು ಕೂಡಲೇ ಪಾವತಿಸಬೇಕೆಂದು ನಿವೃತ್ತ ನೌಕರರು ಹಾಗೂ ಸಂಘಗಳು ಆಗಾಗ್ಗೆ ಒತ್ತಾಯಿಸುತ್ತಿವೆ.

4. 2017-2018ರಿಂದ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ ಸ್ಥಗಿತ ;2017-18ನೇ ಸಾಲಿನಿಂದ ಕರ್ನಾಟಕದ ಸಾರಿಗೆ ಸಂಸ್ಥೆಗಳು ನೌಕರರ ಗಳಿಕೆ ರಜೆ (Leave Encashment) ನಗದೀಕರಣ ಸೌಲಭ್ಯವನ್ನು ಸ್ಥಗಿತಗೊಳಿಸಿದ್ದರಿಂದ ಸಾವಿರಾರು ನೌಕರರು ಈ ಹಕ್ಕಿನಿಂದ ವಂಚಿತರಾಗಿದ್ದಾರೆ. ಗಳಿಕೆ ರಜೆ ಹಣ(Leave encashment) ಸೌಲಭ್ಯ ನಿಲ್ಲಿಸಿದ ಪರಿಣಾಮ, ನೌಕರರು ತಮ್ಮ ಗಳಿಕೆ ರಜೆಯನ್ನು ಹಣವಾಗಿ ಪಡೆಯಲು ಸಾಧ್ಯವಾಗದೇ, ಬಳಸದೆ ಉಳಿದ ರಜೆಗೆ ಹಣ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೂಡ ನೌಕರರ ಸಂಘಗಳು ಈ ಗಳಿಕೆ ರಜೆ ಹಣ ಬಾಕಿಯನ್ನು ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿದ್ದವು.ಗಳಿಕೆ ರಜೆ ಹಣ (Leave encashment) ಹಾಗೂ ತುಟ್ಟಿಭತ್ಯೆ(Dearness Allowance) ಸೇರಿ ಸುಮಾರು ₹325 ಕೋಟಿ ಬಾಕಿ ಇದೆ ಎಂದು ಜಂಟಿ ಕ್ರಿಯಾ ಸಮಿತಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

7. ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳ ಬಗ್ಗೆ ನೀವು ಮತ್ತು ಸರ್ಕಾರದ ಪ್ರತಿನಿಧಿಗಳು ಹಲವು ಬಾರಿ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರೂ, ಹಲವು ತಿಂಗಳುಗಳು ಕಳೆದರೂ ಯಾವುದೇ ಸ್ಪಷ್ಟ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ನೌಕರರಲ್ಲಿ ನಿರಾಶೆ ಮತ್ತು ಅಸಮಾಧಾನ ಹೆಚ್ಚಾಗಿದೆ.

8. ಇಂಧನ ವೆಚ್ಚ ಹೆಚ್ಚಳವನ್ನು ಸಮತೋಲನಗೊಳಿಸಲು ಟಿಕೆಟ್ ಮತ್ತು ಬಸ್ ಪಾಸ್ ದರವನ್ನು ಏರಿಸಲಾಗಿದ್ದು, ಸಾರ್ವಜನಿಕರಿಗೆ ಹೆಚ್ಚುವರಿ ಹೊರೆ ಬಿದ್ದಿದೆ. ಆದರೆ, ಈ ದರ ಏರಿಕೆಯ ಲಾಭವನ್ನು ನೌಕರರಿಗೆ ನೀಡಲಾಗಿಲ್ಲ. ಇದರಿಂದ ನೌಕರರು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

9. ಸಾರಿಗೆ ಸಂಸ್ಥೆಗಳ ಸಂಘಟನೆಗಳೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಜಾತಿ ಆಧಾರಿತ ಸಂಘಟನೆಗಳ ಕಾರಣ ನೌಕರರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಾಧ್ಯವಾಗುತ್ತಿಲ್ಲ. ಈ ಆಂತರಿಕ ಭಿನ್ನತೆಗಳ ಲಾಭವನ್ನು ಸರ್ಕಾರ ಬಳಸಿಕೊಂಡು, ಬೇಡಿಕೆಗಳ ಈಡೇರಿಕೆಯನ್ನು ನಿರಂತರವಾಗಿ ವಿಳಂಬಗೊಳಿಸುತ್ತಿದೆ.

10. ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮಂಡಳಿಯ ನಿರ್ದೇಶಕರು ಕಾಲಕಾಲಕ್ಕೆ ನೌಕರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರೆ, ಇಂದು ಈ ಸಮಸ್ಯೆಗಳು ಬೆಟ್ಟದಷ್ಟು ದೊಡ್ಡದಾಗುತ್ತಿರಲಿಲ್ಲ. ಆಡಳಿತದ ವಿಳಂಬ ನೀತಿಯೇ ನೌಕರರ ಸಮಸ್ಯೆಗಳಿಗೆ ಕಾರಣವಾಗಿದೆ.

11. ಸಮಾಜವಾದಿ ಮುಖ್ಯಮಂತ್ರಿಯೆಂದು ಬಿಂಬಿಸಿಕೊಳ್ಳುವ ಮಾನ್ಯ ಸಿದ್ದರಾಮಯ್ಯರವರು ಸರ್ಕಾರಿ ನೌಕರರ ಮತ್ತು ನಿಗಮ/ಮಂಡಳಿಗಳ ಬೇಡಿಕೆಗಳನ್ನು ಈಡೇರಿಸಿರುವಾಗ, ಸಾರಿಗೆ ನೌಕರರ ಬೇಡಿಕೆಗಳಿಗೆ ಮಾತ್ರ ವಿಳಂಬ ಮಾಡುತ್ತಿರುವುದು ಅನ್ಯಾಯವಾಗಿದೆ. ಸಾರಿಗೆ ನೌಕರರ ಕುಟುಂಬಗಳು ಕೂಡ ಸರಕಾರಿ ನೌಕರರ ಕುಟುಂಬಗಳಂತೆ ಮಾನವೀಯತೆ ಮತ್ತು ನ್ಯಾಯಕ್ಕೆ ಅರ್ಹ. ದಿನನಿತ್ಯದ ದುಬಾರಿ ದರಗಳಿಂದಾಗಿ ನಮ್ಮ ಕುಟುಂಬಗಳು ಸಂಕಷ್ಟದಲ್ಲಿವೆ.

ರಾಜ್ಯ ಮಟ್ಟದಲ್ಲಿ ಹಾಗೂ ಏಷ್ಯಾ ಖಂಡದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆಯೆಂದು ಗುರುತಿಸಿಕೊಂಡಿರುವ ಸಂಸ್ಥೆಯ ನೌಕರರಿಗೆ ಕೂಡಲೇ ವೇತನ ಪರಿಷ್ಕರಣೆಯ ಬಾಕಿ, ಗಳಿಕೆ ರಜೆ ನಗದೀಕರಣದ ಬಾಕಿ, ನಿವೃತ್ತಿ ಹೊಂದಿದ ನೌಕರರ ಆರ್ಥಿಕ ಸೌಲಭ್ಯಗಳನ್ನು ಪಾವತಿಸಿ, 2024ನೇ ಸಾಲಿನ ವೇತನ ಪರಿಷ್ಕರಣೆಯನ್ನು ಜಾರಿಗೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಎನ್. ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಇದನ್ನೂ ನೋಡಿ: ದೇವನಹಳ್ಳಿ ಚಲೋ | ಜೈಲಿಗೆ ಹಾಕುವುದಾದರೆ ಹಾಕಿ, ಜಾಮೀನು ಕೂಡ ತೆಗೆದುಕೊಳ್ಳುವುದಿಲ್ಲ : ಪ್ರಕಾಶ್‌ ರಾಜ್‌

Donate Janashakthi Media

Leave a Reply

Your email address will not be published. Required fields are marked *