ಬೆಂಗಳೂರು: ನಾವು ಕೊಟ್ಟ ಭರವಸೆಯಂತೆ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದು ಖಚಿತ. ಯಾವಾಗ ನೀಡಬೇಕು ಎಂಬುವುದನ್ನು ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಮಾಡುತ್ತಾರೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ಕೆಜಿ ಅಕ್ಕಿ ಉಚಿತ ನೀಡುವ ವಿಚಾರವಾಗಿ ಸಿಎಂ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದ್ದಾರೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಇಲಾಖೆಗೆ ಬರಲಿದೆ. ಇದನ್ನು ಹೇಗೆ ಸರಿದೂಗಿಸಬೇಕು ಎಂಬ ನಿಟ್ಟಿನಲ್ಲಿ ಸುದೀರ್ಘ ಚೆರ್ಚೆ ಮಾಡಿದ್ದೇವೆ ಎಂದರು.
ಮೊದಲು ಕೇಂದ್ರ ಸರ್ಕಾರದ ಬಳಿ ಅಕ್ಕಿಯನ್ನು ಕೇಳುತ್ತೇವೆ. ಈಗ ಯಾವ ದರದಲ್ಲಿ ಅಕ್ಕಿ ಕೊಡುತ್ತಾರೆ ಅದೇ ದರದಲ್ಲಿ ನೀಡುವಂತೆ ಮನವಿ ಮಾಡುತ್ತೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೇಂದ್ರಕ್ಕೆ ಪತ್ರವನ್ನು ಬರೆಯುತ್ತಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡದೇ ಹೋದಲ್ಲಿ ಟೆಂಡರ್ ಕರೆಯುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಜೂನ್ 01 ರಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ
ಈ ನಿಟ್ಟಿನಲ್ಲಿಯೂ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದೇವೆ. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುವ ವಿಶ್ವಾಸ ಇದೆ. ಪ್ರತಿ ಕೆಜಿಗೆ 34 ರೂಪಾಯಿ ವೆಚ್ಚ ತಗಲುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 14,38,796 ಎಪಿಎಲ್ ಕಾರ್ಡ್ ಹೊಂದಿದವರು ಇದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿ ಬಿಡಲಿ ನಾವು ಟೆಂಡರ್ ಕರೆದು ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ತಿಳಿಸಿದರು. ಹೊಸ ಕಾರ್ಡ್‌ಗಳಿಗೆ ಬೇಡಿಕೆ ಬರುತ್ತಿದೆ. ಈ ನಿಟ್ಟಿನಲ್ಲಿ ಮಾನದಂಡಗಳನ್ನು ಆಧರಿಸಿ ಹೊಸ ಕಾರ್ಡ್ ವಿತರಣೆ ಮಾಡುತ್ತೇವೆ. ನಕಲಿ ಕಾರ್ಡ್‌ಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.