ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ ಇಂದು ವಿಶೇಷ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ, ಇದು ನನ್ನ ಸೌಭಾಗ್ಯ, ಇಂದು ಎರಡು ವಿಶೇಷ ರೈಲುಗಳಿಗೆ ಚಾಲನೆ ನೀಡಲಾಗಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನು, 20 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಕೆಂಪೇಗೌಡ ಪ್ರತಿಮೆ, ಥೀಮ್ ಪಾರ್ಕ್ಗೆ ಒಟ್ಟಾರೆ 84 ಕೋಟಿ ರೂ. ವೆಚ್ಚವಾಗಿದೆ.
ಕೆಂಪೇಗೌಡ ಪ್ರತಿಮೆಯ ಒಟ್ಟು ತೂಕ 218 ಟನ್ ಆಗಿದೆ. ಕೆಂಪೇಗೌಡರ ಖಡ್ಗವೇ ಬರೋಬ್ಬರಿ 4000 ಸಾವಿರ ಕೆಜಿ ತೂಕವಿದೆ. 23 ಎಕರೆಯಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರತಿಮೆಗೆ 98 ಟನ್ ಕಂಚು ಮತ್ತು 120 ಟನ್ ಹುಕ್ಕು ಬಳಕೆ ಮಾಡಲಾಗಿದೆ.
ನಾಡಪ್ರಭು ಕೆಂಪೇಗೌಡರ 108 ಪ್ರಗತಿ ಪ್ರತಿಮೆ ನಿರ್ಮಾಣಕ್ಕೆ ಜೂನ್ 26, 2020ರಂದು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು.
ಕಾರ್ಯಕ್ರಮದಲ್ಲಿ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ, ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.