ಬೆಂಗಳೂರು : ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ಸಂಗ್ರಹಿಸಲಾಗಿದ್ದ 101 ಲ್ಯಾಪ್ಟಾಪ್ ಗಳು ಕಾರ್ಮಿಕ ಇಲಾಖೆ ಕಚೇರಿಯಿಂದಲೇ ಕಳ್ಳತನ ಆಗಿರುವ ಪ್ರಕರಣ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಅಪ್ರಾಮಾಣಿಕತೆ ಮತ್ತು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಆರೋಪಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕೆ. ಮಹಾಂತೇಶ ಪ್ರತಿಕ್ರಿಯಿಸಿದ್ದು, ಕಾರ್ಮಿಕ ಸಚಿವ ಶ್ರೀ ಸಂತೋಷಲಾಡ ಅವರ ತವರು ಜಿಲ್ಲೆಯಲ್ಲೇ ಜಿಲ್ಲೆಯಲ್ಲೇ ಹಾವೇರಿ ಜಿಲ್ಲೆಯ ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ಈ 101 ಲ್ಯಾಪ್ಟಾಪ್ ಗಳನ್ನು ಖರೀದಿಸಿ ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಒಂದು ಕಡೆ ಲಕ್ಷಾಂತರ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ಶೈಕ್ಷಣಿಕ ಧನ ಸಹಾಯ ನೀಡಲು ಹಣದ ಕೊರತೆ ತೋರಿಸುತ್ತಿರುವ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಸಚಿವರು ಇನ್ನೊಂದು ಕಡೆ 7000 ಕ್ಕೂ ಅಧಿಕ ಲ್ಯಾಪ್ಟಾಪ್ ಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿ ಹತ್ತಾರು ಕೋಟಿ ಹಣ ದುರುಪಯೋಗ ನಡೆಸಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಕಾರ್ಮಿಕ ಸಚಿವರು ಕಾರ್ಮಿಕ ಇಲಾಖೆಯಲ್ಲಿ ಹಾಗೂ ಕಲ್ಯಾಣ ಮಂಡಳಿಯಲ್ಲಿ ಇರುವ ಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಿಸಲು ಹಾಗೂ ಅಂತಹವರ ಮೇಲೆ ಯಾವುದೇ ಕಠಿಣಕ್ರಮ ಜರುಗಿಸಲು ವಿಫಲವಾಗಿರುವುದರಿಂದಲೇ ಬಾಗಲಕೋಟೆ,ಹಾವೇರಿ, ತುಮಕೂರು,ಕಲಬುರಗಿ, ಬೆಂಗಳೂರು, ಮಂಡ್ಯಮೊದಲಾದ ಕಡೆಗಳಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಮೀಸಲಿಟ್ಟ ಕೋಟ್ಯಾಂತರ ರೂಪಾಯಿ ಹಣ ದುರ್ಬಳಕೆ ನಡೆದು ಮಂಡಳಿಯ ನಿಧಿಯನ್ನು ಲಪಾಟಾಯಿಸಲಾಗಿದೆ. ಇದರ ಬಗ್ಗೆ ಕ್ರಮವಹಿಸಬೇಕಾದ ಕಾರ್ಮಿಕರ ಸಚಿವರು ಹಾಗೂ ಮಂಡಳಿ ಸಿಇಓ ಹಾಗೂ ಕಾರ್ಮಿಕ ಆಯುಕ್ತರು ಮೌನವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಸಚಿವರ ಜಿಲ್ಲೆಯಲ್ಲೇ 101 ಲ್ಯಾಪ್ಟಾಪ್ ಕಳ್ಳತನ ಪ್ರಕರಣ ನಡೆಸು ಕೇಸು ದಾಖಲಾಗಿ ಹಲವು ದಿನಗಳೇ ಕಳೆದರೂ ಆರೋಪಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲವಾಗಿರುವುದು ಅತ್ಯಂತ ಖೇಧಕರ.ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಅಲ್ಲಿನ ಸಹಾಯಕ ಕಾರ್ಮಿಕ ಆಯುಕ್ತೆ ಹಾಗೂ ಇತರೆ ಇಲಾಖೆ ಆಧಿಕಾರಿಗಳನ್ನು ಕೂಡಲೇ ಅಮಾನತ್ತಿನಲ್ಲಿಟ್ಟು ಸೂಕ್ತ ತನಿಖೆ ಗೆ ಕಾರ್ಮಿಕ ಸಚಿವರು ಆದೇಶಿಸಬೇಕು ಆಮೂಲಕ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ವಿಶ್ವಾಸಮೂಡಿಸಲು ಮುಂದಾಗಬೇಕು. ಅಲ್ಲದೆ ನಿಜವಾಗಿಯೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಧನ ಸಹಾಯ ವಿತರಿಸಲು ಕ್ರಮವಹಿಸಬೇಕು ಮತ್ತು ಲ್ಯಾಪ್ಟಾಪ್ ಮೊದಲಾದ ಅನವಶ್ಯಕ ಖರೀದಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಕೆ. ಮಹಾಂತೇಶ ಆಗ್ರಹಿಸಿದ್ದಾರೆ.