ಬೆಂಗಳೂರು: ದಸರಾ ಹಬ್ಬದ ಅಂಗವಾಗಿ ಸಾಲುಸಾಲು ರಜೆ ಇರುವುದರಿಂದಾಗಿ ರಾಜ್ಯದ ವಿವಿಧೆಡೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಇದೇ 13ರಿಂದ 21ರವರೆಗೆ ಒಂದು ಸಾವಿರ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.
ಹೆಚ್ಚುವರಿ ವಿಶೇಷ ಬಸ್‌ಗಳು ಬೆಂಗಳೂರು ನಗರದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ಸ್ಥಳಗಳಿಗೆ ಸಂಚರಿಸಲಿದೆ.
ಇದನ್ನು ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಎಸ್. ಎಂ. ಕೃಷ್ಣ ಅವರಿಂದ ವಿದ್ಯುಕ್ತ ಚಾಲನೆ
ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರಂ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮೊದಲಾದ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ಮಾಡಲಾಗುವುದು.
ಕೆಎಸ್‌ಆರ್‌ಟಿಸಿ ದಸರಾ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ದಸರಾ ಸಂದರ್ಭದಲ್ಲಿ ಸಾವಿರಾರು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಮೈಸೂರು ಮತ್ತು ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ನೋಡಲು ಅನುಕೂಲವಾಗುವಂತೆ ಪ್ರವಾಸಿ ಪ್ಯಾಕೇಜ್ ಘೋಷಿಸಲಾಗಿದೆ. ಮೈಸೂರು ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಅಕ್ಟೋಬರ್ 9ರಿಂದ 24ರ ತನಕ ಈ ಪ್ಯಾಕೇಜ್‌ಗಳಲ್ಲಿ ಸಂಚಾರಿಸಬಹುದಾಗಿದೆ.
ಈ ಹೆಚ್ಚುವರಿ ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮತ್ತು ಕರ್ನಾಟಕ ಮತ್ತು ಅಂತರರಾಜ್ಯದಲ್ಲಿರುವ ಗಣಕೀಕೃತ ಬುಕಿಂಗ್ ಕೌಂಟರ್‌ಗಳ ಮೂಲಕ ಹೆಚ್ಚುವರಿ ವಿಶೇಷ ಬಸ್‌ಗಳ ಆಸನಗಳನ್ನು ಕಾಯ್ದಿರಿಸಬಹುದು. ಜನರು ವಿಶೇಷ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.