‘ಅಚ್ಚೇದಿನ’ಗಳಿಗೆ 10 ವರ್ಷ ಕಾದಿದ್ದು ಮರೆತು ಬಿಡಿ! ಗ್ಯಾರಂಟಿಗಳಿರುವ ‘ವಿಕಸಿತ ಭಾರತ’ಕ್ಕೆ 23 ವರ್ಷ ಕಾಯಿರಿ!

-‌ ಎನ್‌. ಕೆ. ವಸಂತ್‌ರಾಜ್

ಬಿಜೆಪಿ ಕೊನೆಗೂ ಅಂಬೇಡ್ಕರ್ ಜನ್ಮದಿನದಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಸಾಮಾಜಿಕ ನ್ಯಾಯ ಮತ್ತು ಇತರ ಮೂಲಭೂತ ಸಾಂವಿಧಾನಿಕ ಆಶಯಗಳ ನಾಶ, ಸಂವಿಧಾನವನ್ನು ಬದಲಿಸುವ ಅಪಾಯದ ಆರೋಪಗಳಿಗೆ ಇದು ಬಹುಶಃ ಬಿಜೆಪಿಯ ಉತ್ತರವಾಗಿತ್ತು. ಹಲವು ದಿನಗಳ ಹಿಂದೆ ಬಂದ ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಪ್ರಧಾನಿ ತಮ್ಮ ಸಭೆಯ ಭಾಷಣಗಳಲ್ಲಿ ಟೀಕೆ ಮಾಡುತ್ತಾ ತಿರುಗಾಡಿದಾಗ, ನಿಮ್ಮ ಪ್ರಣಾಳಿಕೆ ಎಲ್ಲಿ ಎಂಬ ಪ್ರಶ್ನೆಗಳು ಬಂದಿದ್ದಕ್ಕೂ ಉತ್ತರವಾಗಿತ್ತು. ಚುನಾವಣಾ ನಿಯಮಗಳ ಪ್ರಕಾರ ಮೊದಲ ಹಂತದ ಮತದಾನದ ಆರಂಭವಾಗುವ 48 ಗಂಟೆಗಳ ಮೊದಲು ಮಾನ್ಯತೆ ಪಡೆದ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಲೇ ಬೇಕಾಗಿತ್ತು. ಅಚ್ಚೇದಿನ

ಬಿಜೆಪಿ ಚುನಾವಣಾ-ಪೂರ್ವ ಪ್ರಚಾರದಲ್ಲಿ ಮೋದಿ ಮತ್ತು ಇತರ ನಾಯಕರು ಮಾಡಿದ ಭಾಷಣಗಳು, ಹೇಳಿಕೆಗಳಲ್ಲಿ, ಜಾಹೀರಾತುಗಳಲ್ಲಿ ಕೊಟ್ಟ ಭರವಸೆಗಳು, ಘೋಷಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಪ್ರಣಾಳಿಕೆಗೆ ಯಾವತ್ತೂ ಹೆಚ್ಚು ಮಹತ್ವ ಕೊಟ್ಟಿರಲಿಲ್ಲ. ಹಿಂದಿನ (2019) ಚುನಾವಣೆಯಲ್ಲಂತೂ  ಮತದಾನದ ಆರಂಭವಾಗುವ 48 ಗಂಟೆಗಳ ಸ್ವಲ್ಪ ಮೊದಲು ಕಾನೂನು ಉಲ್ಲಂಘನೆಯಾಗದಂತೆ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಎಲ್ಲ ಭರವಸೆಗಳು, ಘೋಷಣೆಗಳನ್ನು ಪ್ರಣಾಳಿಕೆಯಲ್ಲಿ ಹಾಕುತ್ತಲೂ ಇರಲಿಲ್ಲ.  ಹಿಂದಿನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳು ಜಾರಿಯಾದವೇ? ಇಲ್ಲದಿದ್ದರೆ ಯಾಕೆ ? ಎಂಬುದರ ಬಗ್ಗೆ ಪ್ರಸಕ್ತ ಪ್ರಣಾಳೀಕೆಯಲ್ಲಿ ಉತ್ತರ ಕೊಡವುದರ ಕುರಿತು ಸಹ ತಲೆ ಕೆಡಿಸಿಕೊಂಡದ್ದಿಲ್ಲ.

ಈ ಹಿನ್ನೆಲೆಯಲ್ಲಿ ಈ ಬಾರಿಯ ಪ್ರಣಾಳಿಕೆ “ಮೋದಿ ಕಿ ಗ್ಯಾರಂಟಿ’ಯನ್ನು ನೋಡಬೇಕು. ಮೊದಲಿಗೆ ಪ್ರಣಾಳಿಕೆಯ ಹೆಸರೇ ವಿಡಂಬನಾರ್ಹ. ಕಾಂಗ್ರೆಸ್ ‘ಗ್ಯಾರಂಟಿ’ ಯೋಜನೆಗಳನ್ನು ರೆವ್ಡಿ (ಬಿಟ್ಟಿ ಭಾಗ್ಯ) ಎಂದು ದೇಶದ ತುಂಬಾ ಲೇವಡಿ ಮಾಡುತ್ತಾ ತಿರುಗಿದ ಮೇಲೆ, ಅವೇ ಗ್ಯಾರಂಟಿಯನ್ನು ಅಪ್ಪಿಕೊಳ್ಳುವುದು, ಪ್ರಣಾಳಿಕೆಯ ಹೆಸರಲ್ಲಿ ಅದು ಬರುವುದು ಚೋದ್ಯದ ಸಂಗತಿ. ‘ಮೋದಿ ಕಿ’ ಗ್ಯಾರಂಟಿ ಎಂದು ಕರೆಯುವುದು ವ್ಯಕ್ತಿಕೇಂದ್ರಿತ ರಾಜಕಾರಣದ ಪರಾಕಾಷ್ಟೆ ಮತ್ತು ಇನ್ನಷ್ಟು ಚೋದ್ಯದ ಸಂಗತಿ. 2019ರ ಪ್ರಣಾಳಿಕೆಯನ್ನು ‘ಸಂಕಲ್ಪಿತ ಭಾರತ, ಸಶಕ್ತ ಭಾರತ’ ಎಂದು, 2014ರ ಪ್ರಣಾಳಿಕೆಯನ್ನು ‘ಏಕ್ ಭಾರತ್, ಶ್ರೇಷ್ಠ ಭಾರತ’ ಎಂದು ಕರೆಯಲಾಗಿತ್ತು.ಅಚ್ಚೇದಿನ

ಇದನ್ನು ನಾಲ್ಕು ದೃಷ್ಟಿಯಿಂದ ನೋಡೋಣ. 1. ಯಾವ ವಿಷಯಗಳ ಬಗ್ಗೆ ಗ್ಯಾರಂಟಿ ಮಾತಾಡುವುದಿಲ್ಲ? 2. ಇಲ್ಲಿ 2019ರ ಪ್ರಣಾಳಿಕೆಯ ಕೆಲವು ಪ್ರಮುಖ ನಿರ್ದಿಷ್ಟ ಭರವಸೆಗಳ ಜಾರಿ ಬಗ್ಗೆ ಏನು ಹೇಳಲಾಗಿದೆ? 3. ‘ಮೋದಿ ಕಿ ಗ್ಯಾರಂಟಿ’ಯಲ್ಲಿ ಗ್ಯಾರಂಟಿಯಾಗಿರುವ ಸುಳ್ಳುಗಳು ಯಾವುವು? 4.  ಮುಂದಿನ 5 ವರ್ಷಗಳಲ್ಲಿ ಜಾರಿ ಮಾಡಲಿರುವ ಹೊಸ ನಿರ್ದಿಷ್ಟ ಗ್ಯಾರಂಟಿಗಳೇನು? 5 ವರ್ಷಗಳ ನಂತರವಾದರೆ ಅವು ಯಾವಾಗ ಜಾರಿಗೆ ಬರುತ್ತವೆ ? ಅಚ್ಚೇದಿನ

ನಿರುದ್ಯೋಗ, ಬೆಲೆಏರಿಕೆ ಇತ್ಯಾದಿ ಬಗ್ಗೆ ಗಡಚಿಕ್ಕುವ ಮೌನ

ಮೊದಲು ಈಗ ದೇಶ ಮತ್ತು ಜನತೆ ಎದುರಿಸುತ್ತಿರುವ ಸಮಸ್ಯೆಗಳ ಸಂದರ್ಭದಲ್ಲಿ ಯಾವ ವಿಷಯಗಳ ಬಗ್ಗೆ ಯಾವುದೇ ;ಗ್ಯಾರಂಟಿ’ಯಿಲ್ಲ ಎಂಬುದನ್ನು ನೋಡಬಹುದು. ಪ್ರಣಾಳಿಕೆಯಲ್ಲಿ ಕಾಣದ ಪ್ರಮುಖ ಅಂಶಗಳು – ನಿರುದ್ಯೋಗ ಮತ್ತು ಬೆಲೆ ಏರಿಕೆ, ಇವೆರಡು ಅತ್ಯಂತ ದೊಡ್ಡ ಸಮಸ್ಯೆಗಳು ಎಂದು ಇತ್ತೀಚೆಗೆ ಮಾಡಲಾದ ಸಿ.ಎಸ್.ಡಿ.ಎಸ್-ಲೋಕನೀತಿ ಸಮೀಕ್ಷೆಗೆ ಸ್ಪಂದಿಸಿದ ಅನುಕ್ರಮವಾಗಿ ಶೇ.62 ಮತ್ತು ಶೇ. 71 ಜನ ಹೇಳಿದ್ದಾರೆ. ಈ ಎರಡೂ ಗಂಭೀರ ಸಮಸ್ಯೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಗಡಚಿಕ್ಕುವ ಮೌನವಿದೆ ಎನ್ನಬಹುದು. ಉದ್ಯೋಗ ಅಥವಾ ನಿರುದ್ಯೋಗ ಶಬ್ದವೇ ಒಂದೇ ಬಾರಿ ಮಾತ್ರ ಬಂದಿದೆ! ಅದೂ ಆರ್ಥಿಕವಾಗಿ ದುರ್ಬಲರಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ (EWS) ಕೊಡಲಾಗಿದೆ ಎಂದು ಹೇಳುವಲ್ಲಿ. ಅಚ್ಚೇದಿನ

‘ಅಚ್ಚೇದಿನ’ಗಳಿಗೆ 10 ವರ್ಷ ಕಾದಿದ್ದು ಮರೆತು ಬಿಡಿ! ಗ್ಯಾರಂಟಿಗಳಿರುವ ‘ವಿಕಸಿತ ಭಾರತ’ಕ್ಕೆ 23 ವರ್ಷ ಕಾಯಿರಿ!

‘ಬಳಕೆ ವಸ್ತುಗಳ ಬೆಲೆ ಏರಿಕೆ’ ಅಥವಾ ‘ಹಣದುಬ್ಬರ’ ಅಥವಾ ‘ಜೀವನ ವೆಚ್ಚ ಏರಿಕೆ’ ಪದಗಳು ಒಂದು ಬಾರಿಯೂ ಬರುವುದಿಲ್ಲ! ಜಾಗತಿಕ ಬೆಲೆ ಏರಿಕೆ ಇದ್ದಾಗಲೂ  ಅಥವಾ ಇತರ ಸಂದರ್ಭಗಳಲ್ಲಿ ಕೃಷಿ ಲಾಗುವಾಡುಗಳ (ಯಂತ್ರ, ರಸಗೊಬ್ಬರ ಇತ್ಯಾದಿ) ದೇಶೀಯ ಬೆಲೆಗಳನ್ನು ಸ್ಥಿರವಾಗಿ ಕಾಪಾಡಲಾಗಿದೆಯೆಂದು (ಇದು ನಿಜವಲ್ಲ)  ಅಸ್ಪಷ್ಟವಾಗಿ ಹೇಳಲಾಗಿದೆ. ‘ಬೆಲೆ ನಿಯಂತ್ರಣ’ ಔಷಧಿ ಬೆಲೆ ನಿಯಂತ್ರಣದ ಸಂದರ್ಭದಲ್ಲಿ ಮಾತ್ರ ಬರುತ್ತದೆ.

2014ರ ಚುನಾವಣಾ ಪ್ರಚಾರದಲ್ಲಿ (ಇದು ಆಗಿನ ಪ್ರಣಾಳಿಕೆಯಲ್ಲಿ ಸಹ ಇರಲಿಲ್ಲ ಎಂದು ಗಮನಿಸಬೇಕು) ವರ್ಷದಲ್ಲಿ ‘ಪ್ರತಿವರ್ಷ 2 ಕೋಟಿ ಉದ್ಯೋಗ’ದ ಭರವಸೆ ಕೊಟ್ಟು ಕೈ ಸುಟ್ಟುಕೊಂಡ ನಂತರ ‘ಅದೊಂದು ಜುಮ್ಲಾ ಆಗಿತ್ತು’ ಎಂದ ನಂತರ, ಉದ್ಯೋಗದ ಕುರಿತು ಏನನ್ನೂ ಹೇಳುವುದಕ್ಕೆ ಮೋದಿಗೆ ಆತಂಕ ಸಹಜ. ಹೋಗಲಿ, ಆ ಕುರಿತುಪರೋಕ್ಷವಾಗಿಯಾದರೂ ಏನಾದರೂ ಇದೆಯಾ ?

ಹೌದು. ಬಹಳ ಪರೋಕ್ಷವಾಗಿ ಇದೆ. ‘ಯುವಜನರಿಗೆ ಮೋದಿ ಗ್ಯಾರಂಟಿ’ ವಿಭಾಗದಲ್ಲಿ ಉತ್ಪಾದನೆಗೆ ತಳುಕು ಹಾಕಿಕೊಂಡ ಪ್ರೋತ್ಸಾಹ ಯೋಜನೆ (PLI), ‘ಮೇಕ್ ಇಂಡಿಯಾ’, ಮೂಲಭೂತ ಸೌಕರ್ಯದಲ್ಲಿಭಾರೀ  ಹೂಡಿಕೆಯಿಂದ, ಜಾಗತಿಕ ಸಾಮರ್ಥ್ಯ ಕೇಂದ್ರ,, ಜಾಗತಿಕ ಟೆಕ್ ಕೆಂದ್ರ, ಜಾಗತಿಕ ಇಂಜಿನೀಯರಿಂಗ್ ಕೇಂದ್ರಗಳು, ನೂರಾರು ಸ್ಟಾರ್ಟ್ ಅಪ್ ಗಳಿಂದ ಬೆಳೆಯಲಿವೆ. ಅವುಗಳಲ್ಲಿ ಉದ್ಯೋಗಕ್ಕೆ ಅವಕಾಶಗಳು ಹೆಚ್ಚುತ್ತವೆ ಎಂದು ಹೇಳಲಾಗುತ್ತವೆ. ಇವಲ್ಲದೆ (ಪಕೋಡ ಮಾರುವುದು ಮಾತ್ರವಲ್ಲ!) ಮೊದಲ ಸಾಲ ತೀರಿಸಿದವರಿಗೆ ಎರಡನೇ  ಮುದ್ರಾ ಸಾಲಮಿತಿಯನ್ನು 20 ಲಕ್ಷಕ್ಕೆ  ಹೆಚ್ಚಳ ಮಾಡುವುದರಿಂದ ಸ್ವ-ಉದ್ಯೋಗದ ಅವಕಾಶಗಳು ಹೆಚ್ಚುತ್ತವೆ.  ಸಾಂಸ್ಕೃತಿಕ ಪರಂಪರೆಯ ತಾಣಗಳ ಸುತ್ತ ಪ್ರವಾಸೋಸದ್ಯಮದ ಬೆಳವಣಿಗೆಯ ಮೂಲಕವೂ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದೆಲ್ಲಾಹೇಳಲಾಗಿದೆ. ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಗಳು ಯುವಜನರಿಗೆ ಉದ್ಯೋಗಕ್ಕೆ ಹಾದಿ ಮಾಡಿಕೊಡುತ್ತವೆ ಎಂದೂ ಹೇಳಲಾಗಿದೆ.

ಇವುಗಳಲ್ಲಿ ಹಲವು ಆಗಲೇ ಜಾರಿಯಲ್ಲಿರುವ ಯೋಜನೆಗಳು. ಕಳೆದ 10 ವರ್ಷಗಳಲ್ಲಿ ಈ ಯೋಜನೆ/ಕ್ರಮಗಳಿಂದ ಇಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಅಥವಾ ಈ ಎಲ್ಲವುಗಳಿಂದ ಮುಂದಿನ 5 ವರ್ಷಗಳಲ್ಲಿ ಇಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಅಥವಾ ಈಗ ನಿರುದ್ಯೋಗ ದರ ಇಷ್ಟಿದೆ, ಇಷ್ಟಕ್ಕೆ ಇಳಿಸಲಾಗುವುದು ಅಂತ ಯಾವ ‘ಗ್ಯಾರಂಟಿ’ಯನ್ನು ಕೊಡಲಾಗಿಲ್ಲ.  ‘ಉದ್ಯೋಗ ಸೃಷ್ಟಿ ಮಾಡುವುದು ಸರಕಾರದ ಜವಾಬ್ದಾರಿ ಅಲ್ಲ’ ವೆಂದು ಮೋದಿ ಸರಕಾರದ ಮುಖ್ಯ ಅರ್ಥಶಾಸ್ತ್ರಜ್ಞನ ಮೂಲಕ ಹೇಳಿಸುವ ಮೂಲಕ ವ್ಯಾಪಕ ನಿರುದ್ಯೋಗದ ಮುಂದುವರಿಕೆಯ ಗ್ಯಾರಂಟಿಯನ್ನಂತೂ  ಕೊಟ್ಟಿದೆ.

ಬಳಕೆ ವಸ್ತುಗಳ ಬೆಲೆಏರಿಕೆಯ ಕುರಿತು ಪರೋಕ್ಷವಾಗಿಯೂ ಏನೂ ಇಲ್ಲ, ಪೂರ್ಣ ಮೌನವೇ. ನಿರುದ್ಯೋಗ, ಬೆಲೆಏರಿಕೆ ಎರಡೂ ಸಮಸ್ಯೆಗಳೇ ಇಲ್ಲವೆಂದು ‘ಮೋದಿ ಗ್ಯಾರಂಟಿ’ ಹೇಳುತ್ತದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಸಮಸ್ಯೆಯೇ ಇಲ್ಲವೆಂದ ಮೇಲೆ ಅದಕ್ಕೆ ಪರಿಹಾರದ ಗ್ಯಾರಂಟಿ ಕೊಡುವ ಅಗತ್ಯವೇ ಇಲ್ಲವಲ್ಲ! ಅಚ್ಚೇದಿನ ಅಚ್ಚೇದಿನ

ಅದೇ ರೀತಿಯಲ್ಲಿ ನಿರುದ್ಯೋಗ (ಉದ್ಯೋಗಾವಕಾಶ, ಜೀವನೋಪಾಯಗಳ ಅಭಾವ) ಹಾಗೂ  ಜೀವನ ವೆಚ್ಚದ ಸಹಿಸಲಾರದ ಏರಿಕೆ (ಆದಾಯ-ವೆಚ್ಚ  ಸಮತೂಗಿಸಲು ಆಗದಿರುವುದು) ಕ್ಕೆ ನೇರವಾಗಿ ಸಂಬಂಧಿಸಿದ  ಬಡತನ, ಹಸಿವು-ಅಪೌಷ್ಟಿಕತೆ ಗಳ ಕುರಿತು ಕೆಲವು ಪರೋಕ್ಷ ಉಲ್ಲೇಖಗಳು ಮಾತ್ರ ಇವೆ.  ‘ಬಡತನದ ರೇಖೆಯಿಂದ 25 ಕೋಟಿ ಜನರನ್ನು ಮೇಲೆತ್ತಲಾಗಿದೆ’ ಮತ್ತು ‘ಬಡತನದ ಮೇಲೆ ಅಂತಿಮ ದಾಳಿ’  ಹೇಳುವಾಗ ಮಾತ್ರ ‘ಬಡತನ’ ಪದ ಬರುತ್ತದೆ.  “ಬಡತನದ ರೇಖೆ” ಬಗ್ಗೆ ಸಾಕಷ್ಟು ವಿವಾದಗಳು ಇವೆ. ಅದರಲ್ಲೂ ಕೇಂದ್ರ ಸರಕಾರ ಮತ್ತು ನೀತಿ ಆಯೋಗಗಳು ಆಫೀಸುಗಳಲ್ಲಿ ಕೂತೇ ಬಡತನ ಕಡಿಮೆ ಮಾಡಲು “ಬಡತನದ ರೇಖೆ”ಯನ್ನು ಅದನ್ನು ಅಳೆಯುವ ವಿಧಾನವನ್ನು ಬದಲಿಸುತ್ತಾ ತಿಪ್ಪರಲಾಗ ಹಾಕುತ್ತಿರುವಾಗ ಈ ದಾವೆಯನ್ನು ನಂಬುವುದು ಕಷ್ಟ. ಭಾರತದಲ್ಲಿ ಈಗ ಭಾರತದ ಬಡತನ  ಕೇವಲ ಶೇ.5 ಎಂದು ನೀತಿ ಆಯೋಗ ‘ಜೋಕು ಮಾಡಿದ’ ನಂತರವಂತೂ ಇನ್ನಷ್ಟು ಕಷ್ಟ.  ನೀತಿ ಆಯೋಗದ ಆ ‘ಜೋಕ’ನ್ನು ಇಲ್ಲಿ ಹಾಕಿಲ್ಲವೆಂದು ಗಮನಿಸಬೇಕು. ಖಾಸಗಿ ಬಂಡವಾಳಕ್ಕೆ ಹೂಡಿಕೆ, ಲಾಭಕ್ಕೆ ತಕ್ಕ ಪರಿಸ್ಥಿತಿ ಸೃಷ್ಟಿ ಮಾಡುವುದಷ್ಟೇ ಸರಕಾರದ ಕೆಲಸ. ಉಳಿದವನ್ನು ಖಾಸಗಿ ಬಂಡವಾಳ ಮಾಡುತ್ತದೆ. ಅದು ಹೂಡಿಕೆ ಮಾಡಿದಾಗ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಉದ್ಯೋಗ, ಸೃಷ್ಟಿ, ಆದಾಯ ಹಂಚಿಕೆ ಆಗುತ್ತದೆ. ಬಡತನ ಕಡಿಮೆಯಾಗುತ್ತದೆ ಎಂಬ ‘ಅಭಿವೃದ್ಧಿ ತಾನಾಗಿ ಕೆಳಗೆ ಹರಿದು ಬರುತ್ತದೆ’ ಎಂಬ ನವ-ಉದಾರವಾದಿ  ಬೋಳೆ ಕುರುಡು ನಂಬಿಕೆ ಮೋದಿ ಸರಕಾರದ್ದು ಈ ಬೋಳೆ ಕುರುಡು ನಂಬಿಕೆ ಎಲ್ಲ ಮೋದಿ ಸರಕಾರದ ನೀತಿ-ಧೋರಣೆಗಳ ಹಿಂದೆ ಇರುವಂಥದ್ದು.

ಆದರೆ ಈಗ ಬಡತನದ ಪ್ರಮಾಣ  ಎಷ್ಟು ಇದೆ? ಹೇಗೆ ಯಾವಾಗ ಬಡತನದ ನಿರ್ಮೂಲನೆಯನ್ನು ಮಾಡಲಾಗುವುದು ಅಂತ ಉಲ್ಲೇಖವಿಲ್ಲ. ಇದಕ್ಕೆ ಸಂಬಂಧಿಸಿದ ಇನ್ನೊಂದು ಸಮಸ್ಯೆ – (ಆದಾಯ/ಆಸ್ತಿಗಳಲ್ಲಿ) ‘ಸಮಾನತೆ’ ಅಥವಾ ‘ಅಸಮಾನತೆ’ಯ ಸೊಲ್ಲೇ ಇಲ್ಲಈ ಪ್ರಣಾಳಿಕೆಯಲ್ಲಿ ಇದನ್ನು ಬರೆದವರಿಗೆ ಸಮಾನತೆ ಪದ ಹೊಳೆದಿರುವುದು ಸಮಾನ ನಾಗರಿಕ ಸಂಹಿತೆ (ಯು.ಸಿ.ಸಿ)ಯ ಸಂಧರ್ಭದಲ್ಲಿ ಮಾತ್ರ.! ಸಮಾನತೆ ಗೊತ್ತೇ ಇಲ್ಲದಿರುವವರ ಮತ್ತು ಅಸಮಾನತೆಯ ತೀವ್ರ ಸಮಸ್ಯೆಯಿದೆ ಎಂದು ಗುರುತಿಸದಿರುವವರ ಆಳ್ವಿಕೆಯಲ್ಲಿ ಅಸಮಾನತೆಯು ಮುಂದುವರೆಯುವುದು ಬೆಳೆಯುವುದು ಗ್ಯಾರಂಟಿ. ತಾನೇ? ಅಚ್ಚೇದಿನ

‘ಹಸಿವು’ ಮತ್ತು ಅದಕ್ಕೆ ಸಂಬಂಧಿತ ‘ಅಪೌಷ್ಟಿಕತೆ’ ಇತ್ಯಾದಿ ಪದಗಳು ಸಹ ‘ಗ್ಯಾರಂಟಿ’ ಯಾಗಿ ಇಲ್ಲಿಲ್ಲ. ಆದರೆ ಭಾರತದ ‘ಹಸಿವು’ ಮತ್ತು ‘ಬಡತನ’ ವನ್ನು ಅಷ್ಟು ಸುಲಭದಲ್ಲಿ ಮರೆಸಲು ಸಾಧ್ಯವಿಲ್ಲ. ಅದು ಪರೋಕ್ಷವಾಗಿ ಬಂದೇ ಬರುತ್ತದೆ. ‘2020ರಿಂದ 80 ಕೋಟಿ ಬಡ ಜನರಿಗೆ ಉಚಿತ ರೇಶನ್ ಕೊಡಲಾಗುತ್ತಿದೆ. ಅದನ್ನು ಮುಂದಿನ 5 ವರ್ಷಗಳ ವರೆಗೆ ಮುಂದುವರೆಸಲಾಗುವುದು’ ಎಂಬುದು ‘ಬಡವರಿಗೆ ಮೋದಿ ಕಿ ಗ್ಯಾರಂಟಿ’ ಪಟ್ಟಿಯಲ್ಲಿ ಮೊದಲಿನದು. ಹಾಗಾದರೆ 80 ಕೋಟಿ ಜನ ಬಡವರಿದ್ದಾರೆ, ಉಚಿತ ರೇಶನ ಕೊಡದಿದ್ದರೆ ಅವರು ‘ಹಸಿದಿರುತ್ತಾರೆ’ ಎಂದು ಒಪ್ಪಿಕೊಂಡ ಹಾಗಲ್ಲವೇ? ಆದರೂ ಜಾಗತಿಕ ಹಸಿವು ಸೂಚ್ಯಂಕದ ವರದಿ ಬಂದಾಗ ಸರಕಾರಿ, ಸರಕಾರ ಬೆಂಬಲಿಗ, ನೀತಿ ಆಯೋಗದ ಅರ್ಥಶಾಸ್ತ್ರಜ್ಞರು ಹಸಿವನ್ನು ಅಳೆಯುವ, ಸೂಚಕ ರಚಿಸಿದ ವಿಧಾನ ಸರಿಯಿಲ್ಲವೆಂದು ಸಾಧಿಸಲು ಸಾಮೂಹಿಕವಾಗಿ ತಿಪ್ಪರಲಾಗ ಹಾಕಿದ್ದರು.

ರೈತರ ಚಳುವಳಿ ಹಿಂದಿನಿಂದಲೂ ಎತ್ತುತ್ತಾ ಬಂದಿರುವ, ಮತ್ತು ಕಳೆದ ಕೆಲವು ವರ್ಷಗಳಲ್ಲಿ ತೀವ್ರಗೊಳಿಸಿರುವ ಸ್ವಾಮಿನಾಥನ್ ಕಮಿಶನ್ ಶಿಫಾರಸು ಪ್ರಕಾರ ನಿಗದಿತವಾಗಿರುವ (ಸಮಗ್ರ ಕೃಷಿ ವೆಚ್ಚ + 50%) ಕನಿಷ್ಠ ಬೆಂಬಲ ಬೆಲೆ (ಎಂ..ಎಸ್.ಪಿ)ಯನ್ನು ಕಾನೂನುಬದ್ಧ ಹಕ್ಕು ಮಾಡಬೇಕು ಎಂಬ ಹಕ್ಕೊತ್ತಾಯ ಇಲ್ಲವೇ ಇಲ್ಲ ಎನ್ನುವಂತೆ ಪ್ರಣಾಳಿಕೆ ವರ್ತಿಸುತ್ತಿದೆ. ದೀ್ರ್ಘ ಚಾರಿತ್ರಿಕ  ರೈತ ಚಳುವಳಿ ಕೊನೆಗೊಳಿಸುವಾಗ ಈ ಹಕ್ಕೊತ್ತಾಯದ ಕುರಿತು ಕೊಟ್ಟ ಲಿಖಿತ ಭರವಸೆಯ ಕುರಿತು ಸಹ ಜಾಣ ಮರೆವು ತೋರಿಸಿದೆ. “ಕೃಷಿ ಬೆಳೆಗಳಿಗೆ ಕೊಡುವ ಎಂ..ಎಸ್.ಪಿ ಹಿಂದೆಂದೂ ಕಾಣದ ರೀತಿಯಲ್ಲಿ ಏರಿಸಲಾಗಿದೆ. ಮುಂದೆಯೂ ಕಾಲಕಾಲಕ್ಕೆ ಏರಿಸಲಾಗುತ್ತದೆ.” ಎಂದಷ್ಟೇ ಹೇಳಿದೆ.  ದೀ್ರ್ಘ ಚಾರಿತ್ರಿಕ  ರೈತ ಚಳುವಳಿಯನ್ನು ಹುಟ್ಟು ಹಾಕಿದ ಮತ್ತು ಅದರ ಒತ್ತಡದಲ್ಲಿ ಹಿಂತೆಗೆದುಕೊಳ್ಳಬೇಕಾದ ಮೂರು ಕರಾಳ ರೈತ-ವಿರೋಧಿ ಕಾನೂನುಗಳನ್ನು ಏಕೆ ತರಲಾಯಿತು? ಅವುಗಳ ಸಮರ್ಥನೆಯಲ್ಲಿ ಏನು ಹೇಳುತ್ತೀರಿ ?ಏಕೆ ಹಿಂತೆಗೆದುಕೊಳ್ಳಲಾಯಿತು? ಅವು ರೈತ-ವಿರೋಧಿ ಹೌದೇ ಅಲ್ಲವೇ? ಅವನ್ನು ಮತ್ತೆ ತರಲಾಗುವುದೇ? ಎಂಬುದರ ಬಗ್ಗೆ ಪ್ರಣಾಳಿಕೆ ಜಾಣ ಮೌನ ವಹಿಸಿದೆ

ಅದೇ ರೀತಿ ಮುಸ್ಲಿಂ ಮತ್ತಿತರ ಅಲ್ಪಸಂಖ್ಯಾತರು, ದಲಿತರು, ಬುಡಕಟ್ಟು ಜನರು, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ವಾಸ್ತವ ಪರಿಸ್ಥಿತಿಯ ಕುರಿತಾಗಲಿ, ಅವನ್ನು ಕಡಿಮೆ ಮಾಡುವ ತಡೆಯುವ ಕುರಿತಾಗಿ ಸಹ ಗಡಚಿಕ್ಕುವ ಮೌನವಿದೆ. ಪ್ರಣಾಳಿಕೆಯಲ್ಲಿ  ದೌರ್ಜನ್ಯ ಅಥವಾ ಅಪರಾಧ ಎಂಬ ಪದವನ್ನೇ ಬಳಸಲಾಗಿಲ್ಲ! ಮೊಬ್ ಲಿಂಚಿಂಗ್, ಬುಲ್ ಡೋಜರ್ ದಾಳಿ, ವ್ಯಾಪಾರ ನಿಷೇಧ ಮುಂತಾದ ದೌರ್ಜನ್ಯಗಳನ್ನು ಎದುರಿಸುತ್ತಿರುವ ಮುಸ್ಲಿಂ ಅಲ್ಪ ಸಂಖ್ಯಾತರ ಕುರಿತು ಗಾಢ ಮೌನವಿದೆ. ಮುಸ್ಲಿಂ ಎಂಬ ಪದವೇ ಪ್ರಣಾಳಿಕೆಯಲ್ಲಿ ಕಾಣಿಸಿಕೊಳ್ಳುವುದು ಒಂದೇ ಬಾರಿ, ಅದೂ ‘ಟ್ರಿಪಲ್ ತಲಾಕ್ ಎಂಬ ಬರ್ಬರ ಪದ್ಧತಿಯ ನಿಷೇಧ ಮಾಡಿ ಮುಸ್ಲಿಂ ಮಹಿಳೆಯರನ್ನು ಸಬಲೀಕರಿಸಿದ್ದೇವೆ’ ಎಂಬ ಹೇಳಿಕೆಯ ಭಾಗವಾಗಿ ಅಷ್ಟೇ.

ಚ್ಚೇದಿನ

ರೋಹಿತ್ ವೆಮುಲಾ ಪ್ರಕರಣದ ನಂತರ ಬೆಳಕಿಗೆ ಬಂದ ಐಐಟಿ, ಐಐಎಂ ನಂತಹ ಉಚ್ಛ ಶೈಕ್ಷಣಿಕ ಸಂಸ್ಥೆಗಳಲ್ಲಿ ದಲಿತ/ಬುಡಕಟ್ಟು ವಿದ್ಯಾರ್ಥಿಗಳನ್ನು ಹಲವೊಮ್ಮೆ ಆತ್ಮಹತ್ಯೆಗೆ ತಳ್ಳುವಷ್ಟು ವ್ಯಾಪಕವಾದ ತೀವ್ರ ಕಿರುಕುಳ/ದೌರ್ಜನ್ಯಗಳ ಕುರಿತು ದಿವ್ಯಮೌನವಿದೆ. ಖಾಸಗಿ ಉದ್ಯಮಗಳಲ್ಲಿ ಎಸ್.ಸಿ/ಎಸ್.ಟಿ ಮೀಸಲಾತಿ, ಹಲವು ರಾಜ್ಯಗಳಲ್ಲಿ ಎದ್ದಿರುವ (ಹಲವು ರಾಜ್ಯಗಳಲ್ಲಿ ಚುನಾವಣಾ ತಂತ್ರವಾಗಿ ಬಿಜೆಪಿಯೇ ಎಬ್ಬಿಸಿರುವ ಅಥವಾ ಬೆಂಭಲಿಸಿರುವ)ಒಳಮೀಸಲಾತಿ   ಹಕ್ಕೊತ್ತಾಯದ  ಬಗೆಗಾಗಲಿ, ಒಟ್ಟು ಮೀಸಲಾತಿಯ ಮಿತಿಯನ್ನು ಶ.50ಕ್ಕಿಂತ ಹೆಚ್ಚಿಗೆ ಮಾಡಲು ಸಂವಿಧಾನಿಕ ತಿದ್ದುಪಡಿ, ಬುಡಕಟ್ಟು ಜನರ ಜೀವನೋಪಾಯಕ್ಕೆ ಧಕ್ಕೆ ತರುವ ಅರಣ್ಯ ಕಾನೂನು ತಿದ್ದುಪಡಿ  ಇತ್ಯಾದಿ ಸಾಮಾಜಿಕ ನ್ಯಾಯದ ಹಲವು ವಿಷಯಗಳ ಬಗ್ಗೆ ಮತ್ತೆ ದಿವ್ಯ ಮೌನವೇ ಪ್ರಣಾಳಿಕೆಯಲ್ಲಿ ಕಾಣುತ್ತದೆ. ಅಚ್ಚೇದಿನ

ರಾಜ್ಯಗಳಿಗೆ ಜಿ.ಎಸ್.ಟಿ, ಆದಾಯ ತೆರಿಗೆ, ಸುಂಕ ಮತ್ತಿತರ ತೆರಿಗೆಗಳ ಹಂಚಿಕೆ; ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ವರ್ಗಾವಣೆಯಲ್ಲಿ ವಿಳಂಬ; ಚುನಾಯಿತ  ಬಿಜೆಪಿಯೇತರ ಸರಕಾರಗಳನ್ನು ಅನೈತಿಕ, ಕಾನೂನುಬಾಹಿರ, ಅಸಂವಿಧಾನಿಕ ವಿಧಾನಗಳಿಂದ ಉರುಳಿಸುವುದು;, ರಾಜ್ಯಪಾಲರ ಮೂಲಕ ಬಿಜೆಪಿಯೇತರ ಸರಕಾರಗಳಿಗೆ ಸತತ ಕಿರುಕುಳ; ವಿರೋಧ ಪಕ್ಷಗಳ ನಾಯಕರ ವಿರುದ್ಧ ಐಟಿ, ಸಿಬಿಐ, ಇಡಿ ಮುಂತಾದ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ – ಮುಂತಾದ ಜ್ವಲಂತ ಸಮಸ್ಯೆಗಳ ಬಗೆಗೂ (ಇವು ಸುಪ್ರೀಂ ಕೋರ್ಟು ಮೆಟ್ಟಿಲು ಹತ್ತಿ ಸದಾ ಸುದ್ದಿಯಲ್ಲಿದ್ದರೂ) ಪ್ರಣಾಳಿಕೆಯಲ್ಲಿ ಸೊಲ್ಲೇಯಿಲ್ಲ. ಆ ಕ್ರಮಗಳನ್ನು ಸಮರ್ಥಿಸಿಕೊಂಡೂ ಇಲ್ಲ. ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಶೀಘ್ರವೇ ಮತ್ತೆ ಕೊಡಲಾಗುವುದೆಂದು ಸ್ವತಃ ಮೋದಿ ಇತ್ತೀಚೆಗೆ ಭಾಷಣಗಳಲ್ಲಿ ಹೇಳಿದ್ದರೂ ಪ್ರಣಾಳಿಕೆ ಅದರ ಬಗ್ಗೆ ಮೌನವಾಗಿದೆ.

ತನ್ನ ಪ್ರಜಾಪ್ರಭುತ್ವ-ವಿರೋಧಿ ಕ್ರಮಗಳನ್ನೆಲ್ಲ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತೊಡೆದು ಹಾಕುವ ಹೋರಾಟದ ಭಾಗವೆಂದು ಸಮರ್ಥಿ್ಸಿಕೊಳ್ಳುವ ಬಿಜೆಪಿ ಪ್ರಣಾಳಿಕೆಯಲ್ಲಿ  ಈ ಕುರಿತು, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷರು ಬರೆದ  ಪ್ರಣಾಳಿಕೆಯ ಮುನ್ನುಡಿಯ ಅಸ್ಪಷ್ಟ ಸಾಮಾನ್ಯೀಕೃತ ಉಲ್ಲೇಖ ಬಿಟ್ಟರೆ, ನಿರ್ದಿಷ್ಟವಾಗಿ ಏನನ್ನೂ ಹೇಳುವುದಿಲ್ಲ.  ವಿದೇಶಗಳಲ್ಲಿ ಇರುವ ಕಪ್ಪು ಹಣ ವಾಪಸು ತಂದು ರೂ 15 ಲಕ್ಷ ಪ್ರತಿಯೊಬ್ಬರ ಅಕೌಂಟಿಗೆ ಹಾಕುವ ಭರವಸೆ ಬಗೆಗಂತೂ ಏನೂ ಹೇಳುವುದಿಲ್ಲ. ಮೋದಿ ಅವರ ಕಳೆದ ,10 ವರ್ಷಗಳ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟದ ನಂತರ ಅವು ಕಡಿಮೆಯಾಗಿವೆಯಾ? ಆಗಿದ್ದರೆ  ಎಷ್ಟು ಕಡಿಮೆಯಾಗಿವೆ? ಇವೆಲ್ಲದರ ಬಗ್ಗೆ ಮತ್ತೆ ದಿವ್ಯಮೌನ. ಈ ನಿಟ್ಟಿನಲ್ಲಿ ಮೋದಿ ಸರಕಾರ ಕೈಗೊಂಡ ಮತ್ತು ಸೂಕ್ತ ದಿಟ್ಟ ಕ್ರಮಗಳು ಎಂದು ಸಮರ್ಥಿಸಿಕೊಳ್ಳುವ ನೋಟು ನಿಷೇಧ ಮತ್ತು, ಚುನಾವಣಾ ಬಾಂಡ್ ಕುರಿತು ಸಹ ಮೌನಕ್ಕೆ ಜಾರಿದೆ. ಅಚ್ಚೇದಿನ

2019 ಪ್ರಣಾಳಿಕೆಗಳಲ್ಲಿದ್ದ ಭರವಸೆಗಳಿಗೆ ಏನಾಯ್ತು ?

 ಈಗ 2019ರ ಬಿಜೆಪಿ ಪ್ರಣಾಳಿಕೆಗಳಲ್ಲಿದ್ದ ಕೆಲವು ಪ್ರಮುಖ ಭರವಸೆಗಳಿಗೆ ಏನಾಯ್ತು ಎಂಬುದರ ಬಗ್ಗೆ ನೋಡೋಣ. ಅಚ್ಚೇದಿನ ಅಚ್ಚೇದಿನ

‘ಅಚ್ಚೇದಿನ’ಗಳಿಗೆ 10 ವರ್ಷ ಕಾದಿದ್ದು ಮರೆತು ಬಿಡಿ! ಗ್ಯಾರಂಟಿಗಳಿರುವ ‘ವಿಕಸಿತ ಭಾರತ’ಕ್ಕೆ 23 ವರ್ಷ ಕಾಯಿರಿ!

  • 2022ರೊಳಗೆ ರೈತರ ಆದಾಯ ದುಪ್ಪಟ್ಟು : ರೈತರ ಆದಾಯ ದುಪ್ಪಟ್ಟು ಆಯ್ತಾ ಇಲ್ಲವಾ? ಆಗ ಎಷ್ಟಿತ್ತು ಈಗ ಎಷ್ಟಾಯ್ತು ಎಂಬುದರ ಕುರಿತು ಪ್ರಣಾಳಿಕೆಯಲ್ಲಿ ಯಾವುದೇ  ಮಾಹಿತಿಯಿಲ್ಲ.  ಸರ್ಕಾರದ 2011-12 ಮತ್ತು 2018-19 ರ ‘ನಿಜ ಪರಿಸ್ಥಿತಿಯ ಮೌಲ್ಯಮಾಪನ ಸಮೀಕ್ಷೆ’ಗಳು ಹೇಳುವಂತೆ ಕೃಷಿ ಕುಟುಂಬಗಳ ಕೃಷಿಯಿಂದ ಬರುವ ತಿಂಗಳ ವರಮಾನ ನಿಜ ಬೆಲೆಯಲ್ಲಿ 2855  ರೂಪಾಯಿಗಳಿಂದ ರಿಂದ 2816 ರೂಪಾಯಿಗಳಿಗೆ ಕುಸಿದಿದೆ ( ಶೇ 1.4 ರಷ್ಟು). ಅದರಿಂದಾಗಿಯೇ ಮೌನ ವಹಿಸಲೇಬೇಕಾಗಿದೆ. ಅಚ್ಚೇದಿನ
  • 2022ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ : ಭಾರತದ 2022-23ರ ಜಿಡಿಪಿ (ಪೋರ್ಬ್ಸ್ ವರದಿ ಪ್ರಕಾರ) 3,7 ಟ್ರಿಲಿಯನ್  ಡಾಲರ್ ಆಗಿತ್ತು. ಈಗಲೂ (2023-24) ಭಾರತದ ಜಿಡಿಪಿ 4.1 ಟ್ರಿಲಿಯನ್  ಡಾಲರ್ ಆಗಿದೆ ಅಷ್ಟೇ. ಹೆಚ್ಚಿನ  ಜಿಡಿಪಿ ಜನತೆಯ ಉತ್ತಮ ಬದುಕನ್ನೇನೂ ಪ್ರತಿನಿಧಿಸುವುದಿಲ್ಲ. ಆದರೂ ಬಿಜೆಪಿ ತನ್ನ ಗುರಿ ಮುಟ್ಟಿಲ್ಲವೆಂಬುದು ಸ್ಪಷ್ಟ
  • ಪ್ರತಿ ಕುಟುಂಬಕ್ಕೂ ಪಕ್ಕಾ ಮನೆ, ಪ್ರತಿ ಮನೆಗೂ ನಲ್ಲಿ ನೀರು : 4 ಕೋಟಿ ಕುಟುಂಬಗಳಿಗೆ ಪಕ್ಕಾ ಮನೆ ಸಿಕ್ಕಿದೆ, 14 ಕೋಟಿ ಮನೆಗಳಿಗೆ ನಲ್ಲಿ ನೀರು ಬಂದಿದೆ ಅಂತ ಪ್ರಣಾಳಿಕೆ ಹೇಳುತ್ತದೆ. ಅದು ವಾಸ್ತವವಾಗಿ ಜಾರಿಯಾಗಿದೆಯೇ ಎಂಬ ಪ್ರಶ್ನೆ ಒತ್ತಟ್ಟಿಗಿಟ್ಟು, ಕನಿಷ್ಠ ಈ ಭರವಸೆಯ ಕುರಿತು ಮಾಹಿತಿಯಾದರೂ ನೀಡಿದೆಯೆನ್ನಬಹುದು.  2011ರಲ್ಲಿಯೇ ದೇಶದಲ್ಲಿ  25 ಕೋಟಿ ಕುಟುಂಬಗಳಿವೆ ಎನ್ನಲಾಗಿದ್ದು ಉಳಿದ ಕುಟುಂಬಗಳಿಗೆ ಏಕೆ ಅದು ಜಾರಿಯಾಗಿಲ್ಲ? ಯಾವಾಗ ಜಾರಿಯಾಗುತ್ತದೆ ಎಂಭುದರ ಬಗೆಗಂತೂ ಮೌನವಿದೆ.
  • 2022ರೊಳಗೆ ಪೂರ್ಣ ರೈಲ್ವೇ ವಿದ್ಯುದೀಕರಣ ಮತ್ತು ಬ್ರಾಡ್ ಗೇಜೀಕರಣ : ಈ ಭರವಸೆಯ ಜಾರಿಯ ಕುರಿತು ಯಾವುದೇ ಮಾಹಿತಿಯಿಲ್ಲ, ಅಂದರೆ ಯಾವುದೇ ಪ್ರಗತಿಯಾಗಿಲ್ಲ ಅಂತಲೇ ಅರ್ಥ ಅಚ್ಚೇದಿನ
  • ಶ್ರಮಶಕ್ತಿಯಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ (ಲೇಬರ್ ಪಾರ್ಟಿಸಿಪೇಶನ್ ರೇಟ್) ಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗುವುದು: ಈ ಭರವಸೆಯ ಜಾರಿಯ ಕುರಿತು ಸಹ ಯಾವುದೇ ಮಾಹಿತಿಯಿಲ್ಲ, ಅಂದರೆ ಯಾವುದೇ ಪ್ರಗತಿಯಾಗಿಲ್ಲ ಅಂತಲೇ ಅರ್ಥ. ಆದರೆ ಈ ಭರವಸೆ ಜಾರಿಯಾಗಿಲ್ಲ. ಮಾತ್ರವಲ್ಲ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಇಳಿದಿದೆ ಎಂಬುದಕ್ಕೆ ಸ್ಪಷ್ಟ ಮಾಹಿತಿಯಿದೆ.  ಕೋವಿಡ್‌ನ ಮಹಾಸಾಂಕ್ರಾಮಿಕ ಕಾಲದಲ್ಲಿ ಮಾರ್ಚ್‌ ನಿಂದ ಡಿಸೆಂಬರ್‌ 2020 ರ ಅವಧಿಯಲ್ಲಿ ಉದ್ಯೋಗ ಕಳೆದು ಕೊಂಡವರಲ್ಲಿ, ಶೇ 7 ರಷ್ಟು ಪುರುಷರು ಉದ್ಯೋಗಗಳನ್ನು ಶಾಶ್ವತವಾಗಿ ಕಳೆದುಕೊಂಡರೆ, ಶೇ 47ರಷ್ಟು ಮಹಿಳೆಯರು ಶಾಶ್ವತವಾಗಿ ಉದ್ಯೋಗದಿಂದ ವಂಚಿತರಾದರು. ಇಡೀ ಜಗತ್ತಿನಲ್ಲೇ ಶ್ರಮ ಶಕ್ತಿಯಲ್ಲಿ ಅತೀ ಕಡಿಮೆ ಮಹಿಳೆಯರ ಭಾಗವಹಿಸುವಿಕೆಯಿರುವ ದೇಶ ಭಾರತ. ಇತ್ತೀಚೆಗೆ ಶೇ 37ಕ್ಕೆ ಅದು  ಏರಿರುವುದು. ಬಹು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗಗಳಲ್ಲಿ ಆಗಿರುವ ಶೇ 70 ರಷ್ಟು  ಬೆಳವಣಿಗೆಯಿಂದ. ಅವರಲ್ಲಿ ಬಹುತೇಕರು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಸುಮಾರು ಶೇ 40 ರಷ್ಟು ಮಹಿಳೆಯರು ಸಂಭಾವನಾ ರಹಿತ ಕಾರ್ಮಿಕರು. ಕೇವಲ ಶೇ 10 ರಷ್ಟು ಮಾತ್ರವೇ ನಿಯಮಿತ ಸಂಬಳ ಹೊಂದಿರುವವರು. ಅಚ್ಚೇದಿನ
  • 100 ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸಲಾಗುವುದು : ಈ ಭರವಸೆಯ ಜಾರಿಯ ಕುರಿತು ಪ್ರಣಾಳಿಕೆಯಲ್ಲಿ ಯಾವುದೇ ಮಾಹಿತಿಯಿಲ್ಲ, ಯಾವುದೇ ಸ್ಮಾರ್ಟ್ ಸಿಟಿ ಪೂರ್ಣವಾಗಿ ಕಾರ್ಯಗತವಾಗಿರುವ ವರದಿಗಳು ಸಹ ಎಲ್ಲೂ ಬಂದಿಲ್ಲ. ಅಚ್ಚೇದಿನ
  • ಕಾಶ್ಮೀರಿ ಪಂಡಿತರು ತಾಯಿನಾಡಿಗೆ ಮರಳುವುದನ್ನು ಖಚಿತ ಪಡಿಸಲಾಗುವುದು : ಈ ಕುರಿತು ಸಹ ಇಂದಿನ ಪರಿಸ್ಥಿತಿ ಏನು ಎಂಭುದರ ಬಗ್ಗೆ ಪ್ರಣಾಳಿಕೆ ಏನೂ ಹೇಳುವುದಿಲ್ಲ. ಇದು ಆಗಿಲ್ಲವೆಂಬುದು ಸ್ಪಷ್ಟ. ಕಾಶ್ಮೀರದಲ್ಲಿ ಭಯೋತ್ಪಾದನೆ ಮಟ್ಟ ಹಾಕಲಾಗಿದೆ. ಶಾಂತಿ ನೆಲೆಸಿದೆ ಎಂಬುದನ್ನು  ಕಾಶ್ಮೀರಿ ಪಂಡಿತರು ಸಹ ನಂಬುತ್ತಿಲ್ಲವೆಂಬುದು ಸಹ ಸ್ಪಷ್ಟ.

 ಇದನ್ನು ನೋಡಿ : ಆರ್‌ಎಸ್‌ಎಸ್‌ಗೆ ಯಾವುದೇ ಕಾರಣಕ್ಕೂ ಸಂವಿಧಾನವನ್ನು ಬದಲಿಸಲು ಬಿಡುವುದಿಲ್ಲ : ರಾಹುಲ್‌ ಗಾಂಧಿ

ಕೆಲವು ಗ್ಯಾರಂಟಿ ಸುಳ್ಳುಗಳು

ಮೋದಿ ಕಿ ಗ್ಯಾರಂಟಿ ಎಂದ ಮೇಲೆ ಸುಳ್ಳುಗಳಿಲ್ಲದಿದ್ದರೆ ಹೇಗೆ? ಈ ಪ್ರಣಾಳಿಕೆಯಲ್ಲಿರುವ ಗ್ಯಾರಂಟಿಯಾಗಿ ಸುಳ್ಳುಗಳು ಎಂದು ಹೇಳಬಹುದಾದ ಕೆಲವು ಪ್ರಮುಖ ಹೇಳಿಕೆಗಳು

 

  • ಹತ್ತು ವರ್ಷಗಳಲ್ಲಿ ಯಾವುದೇ ಪ್ರಧಾನ ಭಯೋತ್ಪಾದಕ ಕೃತ್ಯಗಳಿಲ್ಲ : ಪಠಾಣಕೋಟ ವಿಮಾನ ಸೇನಾ ನೆಲೆ, ಉರಿ ಮಿಲಿಟರಿ ಮುಖ್ಯ ಕಚೇರಿ, ಪುಲ್ವಾಮಾ ದಾಳಿ (ಫೆ.2019) – ಇವು ಪ್ರಧಾನ ಭಯೋತ್ಪಾದಕ ಕೃತ್ಯಗಳಲ್ಲವೇ? ಅಧಿಕೃತ  ವರದಿಗಳ ಪ್ರಕಾರವೇ 2014-2023 ಅವಧಿಯಲ್ಲಿ 3950 ಜನ (ಭದ್ರತಾ ಪಡೆ ಮತ್ತು ನಾಗರಿಕರು ಸೇರಿ) ದೇಶದ ವಿವಿಧ ಭಾಗಗಳಲ್ಲಿ ಹಲವು ಪ್ರಕರಣಗಳಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಮರಣ ಹೊಂದಿದ್ದಾರೆ. ಅಚ್ಚೇದಿನ
  • ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಅಗಾಧವಾಗಿ ಏರಿವೆ : ಕನಿಷ್ಟ ಬೆಂಬಲ ಬೆಲೆಗಳು ಮೋದಿ ಸರ್ಕಾರದಡಿ ಹಿಂದಿನ ಸರ್ಕಾರಗಳ ಅವಧಿಗಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚುತ್ತಿವೆ. 2003-04 ಮತ್ತು 2012-13 ಗಳ ನಡುವೆ ಪ್ರಮುಖ ಆಹಾರ ಧಾನ್ಯಗಳ ಕನಿಷ್ಟ ಬೆಂಬಲ ಬೆಲೆ ಸರಾಸರಿ ಶೇ 8 ರಿಂದ 9 ರಷ್ಟು ಏರಿದರೆ, 2013-14 ಮತ್ತು 2023-04 ರ ನಡುವೆ ಪ್ರಮುಖ ಆಹಾರ ಧಾನ್ಯಗಳ ಕನಿಷ್ಟ ಬೆಂಬಲ ಬೆಲೆ ಸುಮಾರು ಶೇ 5 ರಷ್ಟು ಮಾತ್ರ ಏರಿದೆ. ಲಾಗುವಾಡುಗಳ ಬೆಲೆಗಳು ಸತತವಾಗಿ ಮತ್ತು ತ್ವರಿತವಾಗಿ  ಏರುತ್ತಿರುವ ಸಂದರ್ಭದಲ್ಲಿ ಇದು ಆಗಿದೆ. ಅಚ್ಚೇದಿನ
  • ಫಸಲ್ ಬಿಮಾ ಯೋಜನೆ 4 ಕೋಟಿ ರೈತರಿಗೆ ಸಂರಕ್ಷಣೆ ನೀಡಿದೆ : ಫಸಲ್ ಬಿಮಾ ಯೋಜನೆಯ ವ್ಯಾಪ್ತಿಯಡಿ ಬರುವ ಭೂ ಕ್ಷೇತ್ರ 2017 ರಲ್ಲಿ 570.8 ಲಕ್ಷ ಹೆಕ್ಟೇರುಗಳಿಂದ 2022-23 ರಲ್ಲಿ 487.4 ಲಕ್ಷ ಹೆಕ್ಟೇರುಗಳಿಗೆ ಕುಸಿದಿದೆ.  ಪಾವತಿಸಿದ ಕ್ಲೇಮುಗಳು 2018 ರಲ್ಲಿ 29337 ಕೋಟಿ ರೂ ಇದ್ದದ್ದು 2022 ರಲ್ಲಿ 18043 ಕೋಟಿ ರೂ ಗಳಿಗೆ ಕುಸಿದಿದೆ!! ಅದೇ  ಸಮಯದಲ್ಲಿ ಬಾಕಿ ಉಳಿದಿರುವ ಕ್ಲೇಮುಗಳ ಸಂಖ್ಯೆ ಹೆಚ್ಚಾಗಿದೆ. ಯೋಜನೆ ಖಾಸಗಿ ವಿಮೆ ಕಂಪನಿಗಳ ಲಾಭ ಬಡುಕತನಕ್ಕೆ ಎಡೆ  ಮಾಡಿ ಕೊಟ್ಟಿದೆ. ಪಾವತಿಸದ ಕ್ಲೇಮುಗಳ ಸಂಖ್ಯೆ ಹೆಚ್ಚುತ್ತಿರುವಾಗಲೇ  ಈ ಕಂಪನಿಗಳು 2016-17 ರಿಂದ 2020-21 ರ ವರೆಗೆ 24350 ಕೋಟಿ ರೂಗಳ ಲಾಭವನ್ನು ಗಳಿಸಿವೆ!! 2022-23 ರಾಬಿ ಬೆಳೆಯ ಸಂದರ್ಭದಲ್ಲಿ ಕೇವಲ 7.8 ಲಕ್ಷ ರೈತರ ಕ್ಲೇಮುಗಳು ಸಿಕ್ಕಿವೆ. ಇದು ಒಂದು ಸಮಗ್ರ ಬೆಳೆ ಮತ್ತು ಆದಾಯ ವಿಮೆ ಯೋಜನೆಯಲ್ಲ. ದೊಡ್ಡ ಪ್ರಮಾಣದ  ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯಿಂದ ಹೊರಗಿದ್ದಾರೆ. ಯಾಕೆಂದರೆ ಅವರು ಈ ವಿಮೆಯ ಪ್ರೀಮಿಯಂ ತುಂಬಲು ಶಕ್ತರಲ್ಲ. ಅಚ್ಚೇದಿನ ಅಚ್ಚೇದಿನ
  • ಈಶಾನ್ಯ ಭಾರತದಲ್ಲಿ ಹಿಂಸಾಚಾರ 71% ರಷ್ಟು ಕಡಿಮೆಯಾಗಿದೆ : ಮಣಿಪುರದಲ್ಲಿ ತಿಂಗಳುಗಟ್ಟಲೆ ನಡೆಯುತ್ತಿರುವ ಹಿಂಸಾಚಾರದಿಂದ ಸತ್ತವರ ನೊಂದವರ ದೊಡ್ಡ ಸಂಖ್ಯೆಯನ್ನು ನಿರ್ಲಕ್ಷ ಮಾಡಿದರೆ ಮಾತ್ರ ಈ ಹೇಳಿಕೆಯನ್ನು ಒಪ್ಪಬಹುದು. ಅಚ್ಚೇದಿನ

‘ಅಚ್ಚೇದಿನ’ಗಳಿಗೆ 10 ವರ್ಷ ಕಾದಿದ್ದು ಮರೆತು ಬಿಡಿ! ಗ್ಯಾರಂಟಿಗಳಿರುವ ‘ವಿಕಸಿತ ಭಾರತ’ಕ್ಕೆ 23 ವರ್ಷ ಕಾಯಿರಿ!

ಪ್ರಣಾಳಿಕೆಯಲ್ಲಿ ಹೊಸದೇನೂ ಇಲ್ಲ

ಜನರ ಜೀವನ ತಟ್ಟಬಹುದಾದ ನಿಜವಾದ ಸಮಸ್ಯೆಗಳ ಬಗ್ಗೆ ಈ ಪ್ರಣಾಳಿಕೆಯಲ್ಲಿ ಹೊಸದೇನಿಲ್ಲ. ಈಗಾಗಲೇ ಕಳೆದ ಹತ್ತು ವರ್ಷಗಳಲ್ಲಿ ಅಥವಾ ಹಿಂದೆಯೂ ಇದ್ದ ವಿವಿಧ ಯೋಜನೆಗಳನ್ನು ಮುಂದುವರೆಸಲಾಗುವುದು, ಬಲಪಡಿಸಲಾಗುವುದು ಎಂದಷ್ಟೇ ಹೇಳಲಾಗಿದೆ. ಆ ಯೋಜನೆಗಳ ಈ ವರೆಗಿನ ಜಾರಿಯ ನಿರ್ದಿಷ್ಟ ವಿವರಗಳು ಇಲ್ಲ ಅಥವಾ ಬೀಸು ಹೇಳಿಕೆಗಳನ್ನು ಕೊಡಲಾಗಿದೆ ಅಥವಾ ಹಸಿಸುಳ್ಳುಗಳನ್ನು ಹೇಳಲಾಗಿದೆ.. ಮುಂದಿನ 5 ವರ್ಷಗಳಲ್ಲಿ ಈ  ಈ ವಿವಿಧ ಯೋಜನೆಗಳು ಎಷ್ಟು ಜಾರಿಯಾಗಲಿವೆ, ಪೂರ್ಣವಾಗಿ ಯಾವಾಗ ಜಾರಿಯಾಗಲಿವೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇದರ ಜತೆಗೆ 2047ರ ಹೊತ್ತಿಗೆ ‘ವಿಕಸಿತ ಭಾರತ’ದ ಕನಸನ್ನು ಬಿತ್ತಲಾಗಿದೆ. ಎಲ್ಲೂ ನೇರವಾಗಿ ಹೇಳದಿದ್ದರೂ ಇಲ್ಲಿ ಹೇಳಲಾದ ಪ್ರಮುಖ ಗುರಿಗಳನ್ನು – ಉದಾಹರಣೆಗೇ, ಜಗತ್ತಿನಲ್ಲಿ ಅತಿ ದೊಡ್ಡ 3 ಆರ್ಥಿಕಗಳಲ್ಲಿ ಒಂದು, ಜಾಗತಿಕ ಕೈಗಾರಿಕಾ ಹಬ್ ಅಭಿವೃದ್ಧಿ, ಬಡತನದ ಪೂರ್ಣ ನಿರ್ಮೂಲನ, ಎಲ್ಲರಿಗೂ ಪಕ್ಕಾ ಮನೆ, ನೀರು, ಗ್ಯಾಸ್ – ವಿಕಸಿತ ಭಾರತದಲ್ಲಿ ಅಂದರೆ 2047ರ ಹೊತ್ತಿಗೆ ಸಾಧಿಸಲಾಗುವುದು ಎಂಬ ಸೂಚನೆಯಿದೆ. ಅಂದರೆ ಇಲ್ಲಿರುವ ಹೆಚ್ಚಿನ ಮೋದಿ ಗ್ಯಾರಂಟಿಗಳಿಗೆ 24 ವರ್ಷ ಕಾಯಬೇಕು! ಅದೂ ಆವರೆಗೆ ಮೋದಿ ಇದ್ದರೆ ಮಾತ್ರ!

ಈ ಪ್ರಣಾಳಿಕೆಯಲ್ಲಿ ಜನರ ಜೀವನ ತಟ್ಟಬಹುದಾದ ಹೊಸ ಯೋಜನೆ (ಈಗಾಗಲೇ ಅದನ್ನು ಘೋಷಿಸಲಾಗಿದೆ) ‘ಸೂರ್ಯ ಉಚಿತ ವಿದ್ಯುತ್ ಯೋಜನೆ’.  ಈ ಯೋಜನೆಯಲ್ಲಿ ಸೌರ ವಿದ್ಯುತ್ ಘಟಕದ ಖರೀದಿಗೆ ಸಾರ್ವಜನಿಕ ಬ್ಯಾಂಕ್ ಧನಸಹಾಯ/ಸಾಲ ಕೊಡುತ್ತದೆ. ಈ ಸಾಲವನ್ನು ತೀರಿಸುವವರಾರು ? ಸರಕಾರ ಸಬ್ಸಿಡಿ ಮಾತ್ರ ಕೊಡುತ್ತದಾ? ಇವೆಲ್ಲವನ್ನು ಅಸ್ಪಷ್ಟವಾಗಿ ಬಿಡಲಾಗಿದೆ. ಮೋದಿ ಸರಕಾರದ ಈ ವರೆಗಿನ ಯೋಜನೆಗಳ ಟ್ರೆಂಡ್ ನೋಡಿದರೆ ಸರಕಾರದ ಗಮನಾರ್ಹ ಹೂಡಿಕೆ ಇರುವ ಸಾಧ್ಯತೆ ಕಡಿಮೆ.

ಇದನ್ನು ಬಿಟ್ಟರೆ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಗಮನಿಸಬೇಕಾದ್ದು ಬಿಜೆಪಿ-ಸಂಘಪರಿವಾರದ ಸೈದ್ಧಾಂತಿಕ ಪ್ರಾಜೆಕ್ಟಿನ  – ನಿಜವಾಗಿಯೂ ಮೋದಿ ಸರಕಾರ ಜಾರಿಗೆ ಪಣ ತೊಟ್ಟಿರುವಂಥ – ಕೆಲವು ಅಂಶಗಳನ್ನು. ಇವುಗಳಲ್ಲಿ ಪ್ರಮುಖವಾದ್ದು – ಸಮಾನ ನಾಗರಿಕ ಸಂಹಿತೆ (ಯುಸಿಸಿ), ಸಿಎಎ, ಮತ್ತು ‘ಒಂದು ದೇಶ, ಒಂದು ಚುನಾವಣೆ’. ಸಿಎಎ ಬಗ್ಗೆ ಮಾತನಾಡುವಾಗ ಹಿಂದೆ ಉಲ್ಲೇಖಿಸುತ್ತಿದ್ದ ಎನ್.ಆರ್.ಸಿ ಬಗ್ಗೆ ಮಾತನಾಡಿಲ್ಲ.  2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಈ ಮೂರು ಅಂಶಗಳ ಜಾರಿಗೆ ಬಿಜೆಪಿ ಪಣ ತೊಡುತ್ತದೆ ಎಂಬುದು ಮಾತ್ರ ಗ್ಯಾರಂಟಿ. ಇದು ಒಟ್ಟಾರೆಯಾಗಿ ಬಿಜೆಪಿಯ 2024 ಲೋಕಸಭಾ ಚುನಾವಣೆಯ ಪ್ರಣಾಳಿಕೆ “ಮೋದಿ ಕೀ ಗ್ಯಾರಂಟಿ”ಯ ಸಾರಾಂಶ ಹೀಗಿರುವಂತೆ ಕಾಣುತ್ತಿದೆ.

‘ಅಚ್ಚೇದಿನ’ಗಳಿಗೆ 10 ವರ್ಷ ಕಾದಿದ್ದು ಮರೆತು ಬಿಡಿ!

ಗ್ಯಾರಂಟಿಗಳಿರುವ ‘ವಿಕಸಿತ ಭಾರತ’ಕ್ಕೆ 23 ವರ್ಷ ಕಾಯಿರಿ!

ಅಚ್ಚೇದಿನ‘ಅಚ್ಚೇದಿನ’ಗಳಿಗೆ 10 ವರ್ಷ ಕಾದಿದ್ದು ಮರೆತು ಬಿಡಿ! ಗ್ಯಾರಂಟಿಗಳಿರುವ ‘ವಿಕಸಿತ ಭಾರತ’ಕ್ಕೆ 23 ವರ್ಷ ಕಾಯಿರಿ!

ಇದನ್ನು ನೋಡಿ : ಬಿಜೆಪಿಯನ್ನು ಸೋಲಿಸುವುದು ದೇಶಪ್ರೇಮದ ಕೆಲಸ – ಯು. ಬಸವರಾಜ

Donate Janashakthi Media

Leave a Reply

Your email address will not be published. Required fields are marked *