ಕೊಪ್ಪಳ : ಕಲುಷಿತ ನೀರು ಸೇವಿಸಿ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ಬಾಲಕಿ ಮೃತಪಟ್ಟಿದ್ದು ಸಾವಿನ ಸರಣಿ ಮುಂದುವರಿದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬೀಜಕಲ್ ಗ್ರಾಮದ 10 ವರ್ಷದ ಬಾಲಕಿ ನಿರ್ಮಲ ಮೃತಪಟ್ಟಿದ್ದಾಳೆ. ನಿನ್ನೆ ಬಾಲಕಿ ನೀರು ಸೇವಿಸಿದ ಬಳಿಕ ಅಸ್ವಸ್ಥಳಾಗಿದ್ದಾಳೆ. ನಿನ್ನೆ ಇಡೀ ರಾತ್ರಿ ನಿತ್ರಾಣ ಸ್ಥಿತಿಗೆ ತಲುಪಿದ ಬಾಲಕಿಯನ್ನು ಇಂದು ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಬಾಲಕಿಯ ಸಾವಿಗೆ ಕಲುಷಿತ ನೀರು ಕಾರಣ ಎಂದು ಗ್ರಾಮಸ್ಥರು ಆರೋಪಿಸಿ ಅಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಜೂನ್ 5 ರಂದು ಕೊಪ್ಪಳ ಜಿಲ್ಲೆಯ ಬಸರಿಹಾಳ ಗ್ರಾಮದಲ್ಲಿ ಹೊನ್ನಮ್ಮ ಶಿವಪ್ಪ ಎಂಬ ಹಿರಿಯ ಮಹಿಳೆ ಸೇರಿದಂತೆ ಇಬ್ಬರು ಕಲುಷಿತ ನೀರಿನ ಕಾರಣಕ್ಕಾಗಿ ಮೃತಪಟ್ಟಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ : ಹೊಸಪೇಟೆ: ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಹಲವರು ಅಸ್ವಸ್ಥ
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀರು ಸರಬರಾಜು ಮಾಡುವ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಕೂಡ ನೀಡಿತ್ತು. ಕಳೆದ ಒಂದು ವರ್ಷದಿಂದೀಚೆಗೆ ಉತ್ತರ ಕರ್ನಾಟಕ ಭಾಗದ ರಾಯಚೂರು, ಬೆಳಗಾವಿ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಲುಷಿತ ನೀರಿನ ಪ್ರಕರಣಗಳು ತೀವ್ರಗೊಳ್ಳುತ್ತಿವೆ. ಹಲವಾರು ಜೀವಹಾನಿಗಳಾಗಿವೆ. ದುರ್ಘಟನೆ ನಡೆದಾಗ ಸರ್ಕಾರ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಿ ಸಂಬಂಸಿದವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಕೈತೊಳೆದುಕೊಳ್ಳುತ್ತಿದೆ. ಉಳಿದಂತೆ ಇದರ ಹೊಣೆಗಾರಿಕೆಗೆ ಇತ್ಯರ್ಥವಾಗದೆ ಪ್ರಕರಣಗಳು ನೆನೆಗುದಿಗೆ ಬೀಳುತ್ತಿವೆ.
ಕಳೆದ ಏಳೆಂಟು ವರ್ಷದಿಂದಲೂ ರಾಜ್ಯದಲ್ಲಿ ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಬಹಳಷ್ಟು ಕಡೆ ಇವು ದುರಸ್ತಿಯಲ್ಲಿದ್ದು, ಗ್ರಾಮಸ್ಥರು ಬೋರ್‍ವೆಲ್, ಕೆರೆ ಕಟ್ಟೆಯಲ್ಲಿ ದೊರೆಯುವ ಲವಣಾಂಶ ಮಿಶ್ರಿತ ನೀರನ್ನೇ ಕುಡಿಯುವ ಅನಿವಾರ್ಯತೆ ಎದುರಾಗಿದೆ. ಪದೇ ಪದೇ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಕೂಡ ಸರ್ಕಾರ ಎಚ್ಚೆತ್ತುಕೊಳ್ಳದೆ ಕುಂಭಕರ್ಣ ನಿದ್ದೆಯಲ್ಲಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.