ಕಲ್ಯಾಣ ಕರ್ನಾಟಕಕ್ಕೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಸ್ತಾಪ

ಬೆಂಗಳೂರು ಫೆ,19: ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಲು ಮತ್ತು ಆ ಭಾಗದ ಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಕ್ಕೆ 2021-22ನೇ ಸಾಲಿನ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಬೇಕೆಂದು ಮುಖ್ಯಮಂತ್ರಿಯವರನ್ನು ಕೋರಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರೊಂದಿಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಂಬಂಧ ಅವಶ್ಯ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಅಳವಡಿಕೆ ನಿಟ್ಟಿನಲ್ಲಿ ನೀತಿ ನಿರೂಪಣೆಗೆ ಶಿಕ್ಷಣ ಆಯೋಗ ಸ್ಥಾಪನೆಗೆ ಮನವಿ ಮಾಡಲಾಗಿದೆ ಎಂದರು.

50 ವರ್ಷ ಹಳೆಯದಾದ 14613 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳ ಹಾಗೂ 634 ಸರ್ಕಾರಿ ಪ್ರೌಢಶಾಲೆಗಳ ಕಟ್ಟಡ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಮೂಲಕ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ ಎರಡು ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿ ಮಾದರಿ ಶಾಲೆಗಳನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ. ಪಂಚಾಯತ್​ ವಾರ್ಡ್​​ ಪಬ್ಲಿಕ್ ಶಾಲೆಗಳ ಸ್ಥಾಪನೆಗೆ ಕ್ರಮ ವಹಿಸುವುದು. ರಾಜ್ಯ ಸಾಕ್ಷರತಾ ಅಭಿಯಾನ ಕಾರ್ಯಕ್ರಮದ ಮೂಲಕ 30 ಸಾವಿರ ಅನಕ್ಷರಸ್ಥರಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಸಾಕ್ಷರತಾ ಕಾರ್ಯಕ್ರಮ ರೂಪಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಖಾ ಗ್ರಂಥಾಲಯಗಳು, ಮಕ್ಕಳ ಗ್ರಂಥಾಲಯಗಳ ಡಿಜಿಟಲೀಕರಣ ಮತ್ತು ಗ್ರಂಥಾಲಯ ತರಬೇತಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪವನ್ನು ಹೊಂದಲಾಗಿದೆ. ಕೇಂದ್ರೀಯ ವಿದ್ಯಾಲಯ ಶಾಲೆಗಳ ಮಾದರಿಯಲ್ಲಿ ರಾಜ್ಯದ 276 ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಸ್ತಾವೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಹಂಚಿಕೆಯಾದ ಅನುದಾನದಲ್ಲಿ ಶೇ. 79 ರಷ್ಟು ಅನುದಾನ ಅಧಿಕಾರಿ, ಸಿಬ್ಬಂದಿ ವೇತನ ವೆಚ್ಚಗಳಿಗೆ ವಿನಿಯೋಗವಾದರೆ, ಉಳಿದ ಶೇ. 21 ಅನುದಾನವನ್ನು ಇತರೆ ಶೈಕ್ಷಣಿಕ ಚಟುವಟಿಕೆಗಳು, ಮೂಲಸೌಲಭ್ಯಗಳು ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾರ್ಯಕ್ರಮಗಳಿಗೆ ವೆಚ್ಚವಾಗುತ್ತದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ಹೆಚ್ಚು ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದರು.

ರಾಜ್ಯದ ಒಟ್ಟು 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಇಲಾಖೆಯಡಿ 5459 ಶಾಲಾ ಕಾಲೇಜುಗಳಿದ್ದು, ಒಟ್ಟು 101.42 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಸಾರ್ವಜನಿಕ ಶಿಕ್ಷಣ ಆಯಕ್ತಾಲಯ, ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಸಮಗ್ರ ಶಿಕ್ಷಣ ಅಭಿಯಾನ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಲೋಕ ಶಿಕ್ಷಣ ನಿರ್ದೇಶನಾಲಯ ಮತ್ತು ಸರ್ಕಾರಿ ಮುದ್ರಣಾಲಯ ಇಲಾಖೆಗಳನ್ನೊಳಗೊಂಡಿದೆ. ಈ ಇಲ್ಲಾ ಇಲಾಖೆಗಳಡಿಯಲ್ಲಿ ಇದುವರೆಗೆ 2020-21ನೇ ಸಾಲಿನಲ್ಲಿ ಇದುವರೆಗೆ ಹಂಚಿಕೆಯಾದ ಅನುದಾನದಲ್ಲಿ ಈ ತನಕ ಶೇ. 81ರಷ್ಟು ವೆಚ್ಚ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಈ ಬಾರಿ ಶಿಕ್ಷಣ ವಲಯಕ್ಕೆ ಹೆಚ್ಚಿನ ಅದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆಂದು ತಿಳಿಸಿದರು.

ಈ ರೀತಿ ಘೋಷಣೆಗಳನ್ನು ಹಿಂದನಿಂದಲೂ ಕೇಳುತ್ತಿದ್ದೇವೆ. ಜಾರಿಯಾಗಿದ್ದು ಎಷ್ಟು ಎಂದು ನೋಡಿದರೆ ಶೂನ್ಯವೇ ಕಾಣುತ್ತದೆ. ಮಸ್ಕಿ ಉಪ ಚುನಾವಣೆ ಗೆಲ್ಲುವ ಘೋಷಣೆ ಬದಲಾಗಿ ಜಾರಿ ಮಾಡುವ ಕಡೆ ಗಮನ ನೀಡಬೇಕಿದೆ. 371(J) ವಿಶೇಷ ಸ್ಥಾನಮಾನ ಸಿಕ್ಕಿದ್ದರೂ ಸರಿಯಾಗಿ ಅನುಷ್ಠಾನವಾಗದ ಕಾರಣ ಈ ಭಾಗ ಇನ್ನೂ ಅಭಿವೃದ್ದೀಯಾಗಿಲ್ಲ. ಶಿಕ್ಷಕ ಹುದ್ದೇಗಳನ್ನು ಭರ್ತಿಮಾಡುವ ಮೂಲಕ ಶೈಕ್ಷಣಿಕ ಅಸಮಾನತೆ ನಿವಾರಿಸಬೇಕು ಎಂದು ಜನಪರ ಸಂಘಟನೆಗಳು ಒತ್ತಾಯಿಸಿವೆ.

Donate Janashakthi Media

Leave a Reply

Your email address will not be published. Required fields are marked *