ದೇಶದ 10 ರಾಜ್ಯಗಳಲ್ಲಿ 12 ಹೊಸದಾಗಿ ಕೈಗಾರಿಕಾ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, 40 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ 12 ಕೈಗಾರಿಕಾ ಸ್ಮಾರ್ಟ್ ಸಿಟಿ ನಿರ್ಮಿಸುವ ಪ್ರಸ್ತಾಪನೆಗೆ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಚಿವ ಅಶ್ವಿನಿ ವೈಭವ್ ಈ ವಿಷಯ ತಿಳಿಸಿದ್ದು, ಹೊಸದಾಗಿ ಕೈಗಾರಿಕಾ ಸ್ಮಾರ್ಟ್ ಸಿಟಿ ನಿರ್ಮಾಣದಿಂದ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದರು.
ಕೈಗಾರಿಕಾ ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ 28,602 ಕೋಟಿ ರೂ. ವೆಚ್ಚವಾಗಲಿದೆ. ಇದರಿಂದ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಉತ್ತರಾಖಂಡ್ ನ ಖರುಪಿಯಾ, ಪಂಜಾಬ್ ನ ಪಟಿಯಾಲ, ಮಹಾರಾಷ್ಟ್ರದ ಡಿಘಿ, ಕೇರಳದ ಪಾಲಕ್ಕಾಡ್, ಉತ್ತರ ಪ್ರದೇಶದ ಆಗ್ರಾ ಮತ್ತು ಪ್ರಯಾಗ್ ರಾಜ್, ಬಿಹಾರದ ಗಯಾ, ತೆಲಂಗಾಣದ ಜಹೀರಾಬಾದ್, ಆಂಧ್ರಪ್ರದೇಶದ ಓರ್ವಕ್ಕಾಲ್, ಕೊಪ್ಪರಾತಿ, ರಾಜಸ್ಥಾನ್ ನ ಜೋಧಪುರ್-ಪಾಲಿಯಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿ ಸ್ಥಾಪನೆ ಆಗಲಿವೆ.
ರಾಜ್ಯಗಳ ಸಹಯೋಗದಲ್ಲಿ 100 ಕಡೆ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಬಜೆಟ್ ನಲ್ಲಿ ಘೋಷಿಸಲಾಗಿದೆ. ಪ್ರಧಾನಿ ಗತಿ ಶಕ್ತಿ ನಿಯಮಗಳ ಪ್ರಕಾರ ಯೋಜನೆ ಕಾರ್ಯಗತವಾಗಲಿದ್ದು, 1.5 ಲಕ್ಷ ಕೋಟಿ ರೂ. ಹೂಡಿಕೆ ಆಗುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.