ನ್ಯೂಯಾರ್ಕ್: ಉಕ್ರೇನ್ ದೇಶದಲ್ಲಿ ರಷ್ಯಾದ ಆಕ್ರಮಣದಿಂದಾಗಿ ಕಳೆದ ಒಂದು ವಾರದಲ್ಲಿ 10 ಲಕ್ಷ ಜನರು ಉಕ್ರೇನ್‌ನಿಂದ ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ತಿಳಿಸಿದೆ. ಒಂದು ವಾರದೊಳಗೆ ಉಕ್ರೇನ್ ತೊರೆಯುತ್ತಿರುವ ಜನಸಂಖ್ಯೆ ಶೇಕಡಾ 2 ಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ಉಕ್ರೇನಿನಲ್ಲಿ 44 ಮಿಲಿಯನ್ ಜನಸಂಖ್ಯೆ ಇರುವುದಾಗಿ 2020ರ ಅಂತ್ಯದಲ್ಲಿ ವಿಶ್ವಬ್ಯಾಂಕ್ ಲೆಕ್ಕಾಚಾರ ಮಾಡಿತ್ತು. 4 ಮಿಲಿಯನ್ ಜನರು ಉಕ್ರೇನ್ ತೊರೆಯಬಹುದು ಎಂದು ವಿಶ್ವಸಂಸ್ಥೆ ಏಜೆನ್ಸಿ ಅಂದಾಜಿಸಿದೆ. ಆದರೆ, ಈ ಅಂದಾಜು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ರಾಷ್ಟ್ರೀಯ ಅಧಿಕಾರಿಗಳು ಸಂಗ್ರಹಿಸಿದ ಲೆಕ್ಕಾಚಾದಂತೆ ಕೇಂದ್ರ ಯುರೋಪಿನಿಂದ ಮಧ್ಯರಾತ್ರಿಯಲ್ಲಿ 1 ಮಿಲಿಯನ್ ಜನರು ತೊರೆದಿರುವುದು ನಮ್ಮ ಅಂಕಿಅಂಶಗಳು ತೋರಿಸುತ್ತಿವೆ ಎಂದು ಯುಎನ್‌ಹೆಚ್‌ಸಿಆರ್ ವಕ್ತಾರ ಜೌಂಗ್-ಆಹ್ ಘೆಡಿನಿ-ವಿಲಿಯಮ್ಸ್ ಇ-ಮೇಲ್ ಒಂದರಲ್ಲಿ ಬರೆದುಕೊಂಡಿದ್ದಾರೆ.
ಫೆಬ್ರವರಿ 24 ರಂದು ರಷ್ಯಾದ ಆಕ್ರಮಣದ ಮೊದಲ ದಿನದಂದು 82,000 ಕ್ಕಿಂತ ಹೆಚ್ಚಿನ ಜನರು ದೇಶವನ್ನು ತೊರೆದರು. ನಂತರ ಪ್ರತಿ ದಿನವೂ ಕನಿಷ್ಠ 1,17,000 ನಿರಾಶ್ರಿತರು ಪಲಾಯನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದ್ದು, ಮಂಗಳವಾರದಂದು, ಸುಮಾರು 2,00,000ಕ್ಕೂ ಹೆಚ್ಚಿನ ಮಂದಿ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.
ವಿಶ್ವಸಂಸ್ಥೆ ಮಾಹಿತಿ ಪ್ರಕಾರ, ಉಕ್ರೇನ್‌ನಿಂದ ಪಲಾಯನ ಮಾಡುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪೋಲೆಂಡ್‌ಗೆ ಮತ್ತು 1,16,000 ಕ್ಕಿಂತ ಹೆಚ್ಚು ಜನರು ದಕ್ಷಿಣ ಹಂಗೇರಿಗೆ ಹೋದರು. ಮೊಲ್ಡೊವಾಗೆ 79,000 ಕ್ಕಿಂತ ಹೆಚ್ಚು ಮತ್ತು 71,200 ಸ್ಲೋವಾಕಿಯಾಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಕೇವಲ ಏಳು ದಿನಗಳಲ್ಲಿ ನಾವು ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗುವುದನ್ನು ನೋಡಿದ್ದೇವೆ ಎಂದು ಯುಎನ್ ಹೈ ಕಮಿಷನರ್(ನಿರಾಶ್ರಿತರು) ಫಿಲಿಪ್ಪೊ ಗ್ರಾಂಡಿ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಉಕ್ರೇನ್ ನಿಂದ ಪಲಾಯನವಾಗುತ್ತಿರುವವರ ಸಂಖ್ಯೆಯೂ ಈ ಶತಮಾನದಲ್ಲಿ ಬಹುದೊಡ್ಡ ನಿರಾಶ್ರಿತರ ಸಮಸ್ಯೆಯ ಮೂಲವಾಗಬಹುದೆಂದು ಯುಎನ್‌ಹೆಚ್‌ಸಿಆರ್ ವಕ್ತಾರ ಸಾಬಿಯಾ ಮಾಂಟೊ ಹೇಳಿದ್ದಾರೆ.
2011ರ ಅಂತರ್ಯುದ್ಧದ ಸಂದರ್ಭದಲ್ಲಿ ಅತಿ ಹೆಚ್ಚು ನಿರಾಶ್ರಿತರ ದೇಶ ತೊರೆದವರು ಸಿರಿಯಾ ದೇಶದಿಂದ ಆಗಿದೆ. ಯುಎನ್‌ಹೆಚ್‌ಸಿಆರ್ ನ ಅಂಕಿಅಂಶಗಳ ಪ್ರಕಾರ ಸುಮಾರು 5.7 ಮಿಲಿಯನ್ ಜನರು ಪಲಾಯನ ಮಾಡಿದ್ದರು. ನಂತರ ಆದರೆ, 2013 ರ ಆರಂಭದಲ್ಲಿ 1 ಮಿಲಿಯನ್ ನಿರಾಶ್ರಿತರು ಸಿರಿಯಾವನ್ನು ತೊರೆಯಲು ಕನಿಷ್ಠ ಮೂರು ತಿಂಗಳು ತೆಗೆದುಕೊಂಡಿದ್ದರು.